ನವದೆಹಲಿ: ಬಿಜೆಪಿಯನ್ನು ಕೇಂದ್ರದಲ್ಲಿ  ಮತ್ತೆ ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ ಅಮಿತ್ ಶಾ ನೂತನ ಗೃಹ ಸಚಿವರಾಗಿ ಶನಿವಾರ ಅಧಿಕಾರ ಸ್ವೀಕರಿಸಿದರು. ಕಾಶ್ಮೀರದಲ್ಲಿ ಉಗ್ರರ ಸಮಸ್ಯೆ, ಈಶಾನ್ಯದಲ್ಲಿ ವಲಸಿಗರ ಬಿಕ್ಕಟ್ಟು, ಪೂರ್ವ ರಾಜ್ಯಗಳಲ್ಲಿನ ನಕ್ಸಲ್ ಹಾವಳಿ, ಬಿಜೆಪಿಯೇತರ ರಾಜ್ಯಗಳ ಜೊತೆ ಕೇಂದ್ರ ಸರ್ಕಾರದ ಸಂಬಂಧ ಅಷ್ಟಕ್ಕಷ್ಟೆ ಎಂಬಂತೆ ಆಗಿರುವಾಗ, ಕಠಿಣ ನಿರ್ಧಾರಕ್ಕೆ ಪ್ರಸಿದ್ಧರಾದ ಅಮಿತ್ ಶಾ ಅವರು ಗೃಹ ಸಚಿವರಾಗಿ ಆಗಮಿಸಿರುವುದು ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಹಿಡಿದ ಕೆಲಸವನ್ನು ಬಿಡದೇ ಮಾಡಿ ಮುಗಿಸುವ ಛಾತಿ ಹೊಂದಿರುವ ಅಮಿತ್ ಶಾ, ಈ ಹಿಂದೆ ಗುಜರಾತ್‌ನಲ್ಲಿ ಗೃಹ ಸಚಿವರಾಗಿದ್ದ ವೇಳೆಯೂ ಬಿಜೆಪಿಯ ಚಿಂತನೆಗಳನ್ನು ಜಾರಿಗೊಳಿಸುವುದರ ಜೊತೆಜೊತೆಗೇ, ರಾಜ್ಯದಲ್ಲಿ ಅಂತರಿಕ ಭದ್ರತೆ, ಉಗ್ರ ನಿಗ್ರಹ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಭಾರೀ ಯಶಸ್ಸು ಸಾಧಿಸಿದ್ದರು.

ಆಗ ಅವರಿಗೆ ಬಾಸ್ ಆಗಿದ್ದವರು ಮುಖ್ಯಮಂತ್ರಿ ಮೋದಿ. ಇದೀಗ ಮತ್ತೆ ಅದೇ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕೇಂದ್ರದಲ್ಲೂ ಹೆಗಲಿಗೆ ಹೆಗಲು ಕೊಟ್ಟು ದೇಶ ಮುನ್ನಡೆಸಲು ಸಜ್ಜಾಗಿದೆ. ಹೀಗಾಗಿಯೇ ಇಡೀ ದೇಶದ ಕಣ್ಣು ಮುಂದಿನ ದಿನಗಳಲ್ಲಿ ಅಮಿತ್ ಶಾ ಅವರು ಕೈಗೊಳ್ಳುವ ನಿರ್ಧಾರಗಳ ಮೇಲೆ ನೆಟ್ಟಿದೆ. 

ಅಧಿಕಾರ ಸ್ವೀಕಾರ: ನೂತನ ಗೃಹ ಸಚಿವರಾಗಿ ಶುಕ್ರವಾರ ನಿಯುಕ್ತಿಗೊಂಡಿದ್ದ ಅಮಿತ್ ಶಾ, ಶನಿವಾರ ತಮ್ಮ ಕಿರಿಯ ಸಂಪುಟ ಸಹದ್ಯೋಗಿಗಳ ಜೊತೆಗೆ ಕಚೇರಿಗೆ ಆಗಮಿಸಿದ ಅಧಿಕಾರ ಸ್ವೀಕರಿಸಿದರು. ಬಳಿಕ ಅವರು ಅಧಿಕಾರಿಗಳೊಂದಿಗೆ ತಮ್ಮ ಮೊದಲ ಸಭೆ ನಡೆಸಿದರು. ಈ ವೇಳೆ ಕೇಂದ್ರ ಗೃಹ ಸಚಿವಾಲಯವು ಸದ್ಯ ಪ್ರಮುಖವಾಗಿ ನಿರ್ವಹಿಸುತ್ತಿರುವ ವಿಷಯಗಳು, ಗೃಹ ಸಚಿವಾಲಯದ ಕಾರ್ಯಕಲಾಪಗಳ ಬಗ್ಗೆ ಅಧಿಕಾರಿಗಳು ನೂತನ ಸಚಿವರಿಗೆ ಮಾಹಿತಿ ನೀಡಿದರು. 

ಶಾ ಅವರೊಂದಿಗೆ ಗೃಹ ಖಾತೆಯ ರಾಜ್ಯ  ಸಚಿವರಾದ ಜಿ.ಕಿಶನ್ ರೆಡ್ಡಿ ಮತ್ತು ನಿತ್ಯಾನಂದ್ ರಾಯ್ ಕೂಡಾ ಶನಿವಾರ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕಾರದ ಬಳಿಕ ನೂತನ ಹುದ್ದೆಯ ಬಗ್ಗೆ ಟ್ವೀಟ್ ಮಾಡಿ ರುವ ಅಮಿತ್ ಶಾ, ‘ದೇಶದ ಭದ್ರತೆ ಮತ್ತು ಜನರ ಕಲ್ಯಾಣವೇ ಮೋದಿ ಸರ್ಕಾರದ ಆದ್ಯತೆ. ಮೋದಿ ಜೀ ಅವರ ನಾಯಕತ್ವದಲ್ಲಿ, ಸರ್ಕಾರದ ಆದ್ಯತೆಗಳನ್ನು ಪೂರೈಸಲು ನಾನು ನನ್ನ ಸಂಪೂರ್ಣ ಯತ್ನ ಮಾಡುತ್ತೇನೆ’
ಎಂದು ಭರವಸೆ ನೀಡಿದ್ದಾರೆ. ಜೊತೆಗೆ ಮಹತ್ವದ ಹೊಣೆ ವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ರಾಜ್ಯಪಾಲರ ಭೇಟಿ: ಅಮಿತ್ ಶಾ ಅಧಿಕಾರ ಸ್ವೀಕರಿಸಿದ ದಿನವೇ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್, ಕೇರಳದ ರಾಜ್ಯಪಾಲ ಪಿ.ಸದಾಶಿವಂ ಮತ್ತು ಮಹಾರಾಷ್ಟ್ರದ ರಾಜ್ಯಪಾಲ ಸಿ.ವಿದ್ಯಾಸಾಗರ ರಾವ್ ಅವರು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಮಾತು ಕತೆ ನಡೆಸಿದರು. ಈ ಭೇಟಿ ವೇಳೆ ಜಮ್ಮು ಮತ್ತು ಕಾಶ್ಮೀರ ದಲ್ಲಿನ ಸದ್ಯದ ಸ್ಥಿತಿಗತಿ ಬಗ್ಗೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಶಾಗೆ ಮಾಹಿತಿ ನೀಡಿದರು ಎನ್ನಲಾಗಿದೆ.

ಶಾ ಮುಂದಿರುವ ಮುಖ್ಯ ಅಂಶಗಳು


1 ನವೆಂಬರ್‌ನಲ್ಲಿ ಕಾಶ್ಮೀರ ಚುನಾವಣೆ ಇದೆ. ಶಾಂತಿಯುತವಾಗಿ ಚುನಾವಣೆ ನಡೆಸುವುದು ಕೇಂದ್ರ ಗೃಹ ಸಚಿವ ಶಾ ಮುಂದಿರುವ ಪ್ರಥಮ ದೊಡ್ಡ ಸವಾಲು.

2 ಜಮ್ಮು -ಕಾಶ್ಮೀರಕ್ಕೆ ವಿಶೇಷ ಹಕ್ಕು ಕಲ್ಪಿಸುವ ಸಂವಿಧಾನದ 35 ಎ, 370 ನೇ ವಿಧಿ ರದ್ದು ಬಗ್ಗೆ ಬಿಜೆಪಿ ಭರವಸೆ ನೀಡಿತ್ತು. ಇದಕ್ಕೆ ಸ್ಥಳೀಯ ಪಕ್ಷಗಳ ವಿರೋಧವಿದೆ. 

3 ಅಸ್ಸಾಂನಲ್ಲಿ ಜಾರಿಯಾದ ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆ ಈಶಾನ್ಯ ರಾಜ್ಯಗಳಿಗೂ ವಿಸ್ತರಿಸಬೇಕೆಂಬ ಬಯಕೆ ಬಿಜೆಪಿಯದ್ದು. ಇದರ ಸೂಕ್ತ ಜಾರಿ ಹೊಣೆ.

4 ಈಶಾನ್ಯ ರಾಜ್ಯಗಳಲ್ಲಿ ಸಕ್ರಿಯವಿರುವ ಉಗ್ರ ಸಂಘಟನೆ ಗಳನ್ನು ಮಟ್ಟ ಹಾಕಿ ಶಾಂತಿ ಮರುಸ್ಥಾಪಿಸುವುದು 

5  ಆಂತರಿಕ ಭದ್ರತೆಗೆ ಮಾರಕವಾಗಿರುವ ಕಾಶ್ಮೀರಿ ಉಗ್ರರ ಉಪಟಳ, ಪೂರ್ವ -ದಕ್ಷಿಣದ ಕೆಲ ರಾಜ್ಯಗಳಲ್ಲಿ ನಕ್ಸಲ್ ಚಟುವಟಿಕೆ, ಈಶಾನ್ಯ ರಾಜ್ಯಗಳಲ್ಲಿ ಉಗ್ರರ ಉಪಟಳ. 

6 ಪುಲ್ವಾಮಾ ದಾಳಿ ಬಳಿಕ ಭಾರತ- ಪಾಕ್ ಸಂಬಂಧ ಹಳಸಿದೆ. ಉಗ್ರರಿಗೆ ನೆರವು ನೀಡುವ ಪಾಕಿಸ್ತಾನವನ್ನು ಮತ್ತಷ್ಟು ಮೂಲೆಗುಂಪು ಮಾಡುವುದು 

7 ಬಿಜೆಪಿಯೇತರ ಪಕ್ಷಗಳ ಆಡಳಿತ ಹೊಂದಿರುವ ರಾಜ್ಯ ಸರ್ಕಾರಗಳ ಜೊತೆ ಕೇಂದ್ರದ ಸಂಬಂಧ ಬಲಪಡಿಸುವುದು. ಭಿನ್ನಾಭಿಪ್ರಾಯ ಕಂಡುಬಂದ ಹೊರತೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರದ ರೀತಿ ನಿರ್ವಹಣೆ