ಬೆಂಗಳೂರು (ಜು.08): ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮನ್ವಯ ಸಮಿತಿ ಮುಖ್ಯಸ್ಥ ಸಿದ್ದರಾಮಯ್ಯ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದು, ಬಿಜೆಪಿಯು ಸಂವಿಧಾನ-ವಿರೋಧಿ  ಮಾರ್ಗಗಳ ಮೂಲಕ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾತಂತ್ರದ ಬಗ್ಗೆ ಗೌರವ ಹೊಂದಿರದ ಬಿಜೆಪಿಯು ದೇಶಕ್ಕೆ ಕಳಂಕವಿದ್ದಂತೆ. ಜನಾದೇಶದೊಂದಿಗೆ ಸಾಂವಿಧಾನಿಕವಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರವನ್ನು ಉರಳಿಸಲು ಬಿಜೆಪಿಯು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ನರೇಂದ್ರ ಮೋದಿಯನ್ನು ‘ಸರ್ವಾಧಿಕಾರಿ’ ಎಂದು ಕರೆದಿರುವ ಸಿದ್ದರಾಮಯ್ಯ,  ನಮ್ಮ ಶಾಸಕರನ್ನು ಹೆದರಿಸಲು ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಲಾಗುತ್ತಿದೆ, ಇವರೆಲ್ಲಾ ನಿಜವಾದ ದೇಶದ್ರೋಹಿಗಳೆಂದು ಕಿಡಿಕಾರಿದ್ದಾರೆ.

ಕಳೆದೊಂದು ವರ್ಷದಲ್ಲಿ ಮೈತ್ರಿ ಸರ್ಕಾರವನ್ನು ಉರಳಿಸುವ ಬಿಜೆಪಿಯ 6ನೇ ಪ್ರಯತ್ನವಿದು. ಅವರು ಇನ್ನೊಮ್ಮೆ ವಿಫಲರಾಗುವುದು ಖಚಿತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.