ಶ್ರೀನಗರ [ಜೂ.28] : ಜೂನ್  12 ರಂದು ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪಡೆಗೆ ಸೇರಿದ ಅರ್ಷದ್ ಅಹಮದ್ ಖಾನ್ ಮನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಭೇಟಿ ಮಾಡಿದರು. ಈ ವೇಳೆ ಅವರು ಅರ್ಷದ್ ಅವರ ಪೋಷಕರು, ಪತ್ನಿ ಮತ್ತು ಮಕ್ಕಳನ್ನು ಭೇಟಿಯಾಗಿ ಸಾಂತ್ವಾನ ಹೇಳಿದರು. 

ಅಲ್ಲದೆ  ಕುಟುಂಬಕ್ಕೆ ಮುಂದಿನ ದಿನಗಳಲ್ಲಿ ಎಲ್ಲಾ ನೆರವಿನ ಭರವಸೆ ನೀಡಿದರು. ಜೊತೆಗೆ ಅರ್ಷದ ಪತ್ನಿಗೆ ಸರ್ಕಾರಿ ಹುದ್ದೆಯ ಆಫರ್ ನೀಡಿದರು. ಕಾಶ್ಮೀರದಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಯೊಬ್ಬರ ಮನೆಗೆ ಕೇಂದ್ರ ಗೃಹ ಸಚಿವರು ಭೇಟಿ ನೀಡಿದ ಮೊದಲ ಪ್ರಕರಣ ಇದಾಗಿದೆ.

ಇದು ಕಾಶ್ಮೀರಗಳ ಮನಸ್ಸು ಗೆಲ್ಲಲು ಕೇಂದ್ರ ಗೃಹ ಸಚಿವ ಅಮಿತ್ ಶಾ ರೂಪಿಸಿರುವ ಹೊಸ ರಣತಂತ್ರ ಎನ್ನಲಾಗಿದೆ. ಒಂದೆಡೆ ಉಗ್ರರನ್ನು ಮಟ್ಟಹಾಕುವ, ಅದೇ ಮತ್ತೊಂದೆಡೆ ದೇಶಪ್ರೇಮ ತೋರಿಸಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಭದ್ರತಾ ಸಿಬ್ಬಂದಿಗಳನ್ನು ಗೌರವಿಸುವುದು ಸಹಜವಾಗಿಯೇ ಜನರಿಗೆ ಕೇಂದ್ರದ ಬಗ್ಗೆ ಉತ್ತಮ ಅಭಿಪ್ರಾಯ ರೂಪುಗೊಳ್ಳಲು ಕಾರಣವಾಗುತ್ತದೆ ಎಂಬುದು ಶಾ ಲೆಕ್ಕಾಚಾರ ಎನ್ನಲಾಗಿದೆ.