ಗುಜರಾತಲ್ಲಿ ಕಾಂಗ್ರೆಸ್ ಹಣಿಯಲು ಶಾ ಹೊಸ ರಣನೀತಿ
ಅಹ್ಮದಾಬಾದ್: ಇತ್ತೀಚೆಗೆ ಗುಜರಾತ್‌ನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಹಸ್ಯವಾಗಿ ೪೦ ‘ಛುಪಾ ರಸ್ತುಂ’ಗಳನ್ನು (ಗುಪ್ತಚರರನ್ನು) ಕಳಿಸಿ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಅಭಿಪ್ರಾಯ ಸಂಗ್ರಹಿಸುವ ಹೊಣೆ ವಹಿಸಿದ್ದಾಗಿ ವರದಿಯಾಗಿತ್ತು. ಇದಕ್ಕೆ ಪ್ರತಿತಂತ್ರ ರೂಪಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪ್ರತಿ ಮತಗಟ್ಟೆಯಲ್ಲಿ ಬಿಜೆಪಿಗೇ ಹೆಚ್ಚು ಮತ ಬರಬೇಕು ಎಂಬ ಗುರಿ ಇರಿಸಿಕೊಂಡು ‘ಪೇಜ್ ಪ್ರಮುಖ್’ ಎಂಬ ಹೊಸ ಹುದ್ದೆಯನ್ನೇ ಸೃಷ್ಟಿಸಿದ್ದಾರೆ.
ಗುಜರಾತ್ ವಿಧಾನಸಭೆಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಈಗ ಶಾ ರಾಜ್ಯದಲ್ಲೇ ಠಿಕಾಣಿ ಹೂಡಿದ್ದಾರೆ. ತಮ್ಮ ತವರು ರಾಜ್ಯದಲ್ಲಿ ಬಿಜೆಪಿಯನ್ನು ಪುನಃ ಅಕಾರಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಕಂಡು ಕೇಳರಿಯದ ರಣನೀತಿಗಳನ್ನು ರೂಪಿಸುತ್ತಿದ್ದಾರೆ. ಇಂಥದ್ದರಲ್ಲಿ ಈಗ ಶಾ ಅವರ ಹೊಸ ಪ್ರಯೋಗ ‘ಪೇಜ್ ಪ್ರಮುಖ್’.
ಪೇಜ್ ಪ್ರಮುಖ್ ಹಾಗೆಂದರೆ ಏನು?
ಪ್ರತಿ ವಿಧಾನಸಭಾ ಕ್ಷೇತ್ರವು ಅನೇಕ ಮತಗಟ್ಟೆಗಳನ್ನು ಹೊಂದಿರುತ್ತದೆ. ಪ್ರತಿ ಬೂತ್’ಗೆ ಪ್ರತ್ಯೇಕ ಮತದಾರರ ಪಟ್ಟಿ ಇರುತ್ತದೆ. ಮತದಾರರ ಪಟ್ಟಿಯು ಸಾಕಷ್ಟು ಪುಟಗಳನ್ನು ಹೊಂದಿರುತ್ತದೆ. ಪ್ರತಿ ಪುಟದಲ್ಲಿ ಸುಮಾರು 30 ಮತದಾರರು ಇರುತ್ತಾರೆ. ಇಂಥ ಪ್ರತಿ ಮತದಾರ ಪಟ್ಟಿಯ ಪುಟದಲ್ಲಿ ಬಿಜೆಪಿ ಪರ ಒಲವಿರುವ ಒಬ್ಬ ಮತದಾರನನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆತನಿಗೆ ‘ಪೇಜ್ ಪ್ರಮುಖ್’ ಪಟ್ಟ ಕಟ್ಟಲಾಗುತ್ತದೆ. ಆತನಿಗೆ ಆ ಪುಟದಲ್ಲಿರುವ ಬಾಕಿ ಮತದಾರರಿಗೆ ಬಿಜೆಪಿ ಪರ ಒಲವು ಹುಟ್ಟಿಸಬೇಕಾದ ಜವಾಬ್ದಾರಿ ನೀಡಲಾಗುತ್ತದೆ.
ಮತದಾನದ ದಿವಸ ತನ್ನ ಪುಟದಲ್ಲಿರುವ ಬಾಕಿ ಮತದಾರರು ಬಿಜೆಪಿ ಪರ ಮತ ಚಲಾಯಿಸುವಂತೆ ನೋಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಈ ರಣನೀತಿ ಯಶಸ್ವಿಯಾದರೆ ಬಿಜೆಪಿ ‘ಮಾಸ್ಟರ್‌ಸ್ಟ್ರೋಕ್’ ಬಾರಿಸಿದಂತೆ. ಆದರೆ ‘ಪೇಜ್ ಪ್ರಮುಖ್’ನನ್ನು ಹುಡುಕುವುದು ಸುಲಭದ ಮಾತಲ್ಲ ಅಂತಾರೆ ಸ್ಥಳೀಯ ಬಿಜೆಪಿ ನಾಯಕರು.
