ಅಲ್ಮೊರಾ: ಆಯಾ ದೇಶದ ಸೈನಿಕರು ತಮ್ಮ ತಮ್ಮ ದೇಶದ ರಾಷ್ಟ್ರಗೀತೆಯನ್ನು ಹಾಡುವುದನ್ನು ಕೇಳಿದ್ದೇವೆ. ಆದರೆ ಅಮೆರಿಕ ಸೈನಿಕರು ಭಾರತದ ರಾಷ್ಟ್ರಗೀತೆ ಹಾಡಿದ್ದಾರೆ.

ಅದೇ ರೀತಿ ಭಾರತೀಯ ಯೋಧರು ಅಮೆರಿಕ ರಾಷ್ಟ್ರಗೀತೆ ಹಾಡಿ ಉಭಯ ದೇಶಗಳ ಮಧ್ಯೆ ಪರಸ್ಪರ ಸ್ನೇಹ ಬಾಂಧವ್ಯ ಬೆಸೆದಿದ್ದಾರೆ. 

ಈ ಅಪರೂಪದ ಘಟನೆಗೆ ಉತ್ತರಾಖಂಡದ ಅಲ್ಮೋರ್ ಜಿಲ್ಲೆಯಲ್ಲಿ ನಡೆದ ಭಾರತ-ಅಮೆರಿಕ ಜಂಟಿ ಮಿಲಿಟರಿ ತರಬೇತಿ ಶಿಬಿರ ಸಾಕ್ಷಿಯಾಗಿತು.

ಭಾರತ-ಅಮೆರಿಕ ರಕ್ಷಣಾ ಸಹಕಾರದ ಹಿನ್ನೆಲೆಯಲ್ಲಿ ಉಭಯ ದೇಶಗಳ ಸೇನಾ ಪಡೆ 'ಯುಧ್ ಅಭ್ಯಾಸ್ 2016' ವನ್ನು ಸೆ.14 ರಿಂದ ಉತ್ತರಾಖಂಡದಲ್ಲಿ ಆರಂಭಿಸಿದೆ. ಇದು ಸೆ. 27 ರವರೆಗೆ ನಡೆಯಲಿದೆ. ಈ ಅಭ್ಯಾಸದ ವೇಳೆ ಅಮೆರಿಕ ಸೈನಿಕರು ಭಾರತದ ರಾಷ್ಟ್ರಗೀತೆಯನ್ನು ಹಾಡಿ, ನಮ್ಮ ರಾಷ್ಟ್ರಧ್ವಜಾರೋಹಣ ಮಾಡಿದರು. ಹಾಗೆಯೇ ಭಾರತದ ಯೋಧರು ಯುಎಸ್ ರಾಷ್ಟ್ರಗೀತೆ ಮೊಳಗಿಸಿ, ಅವರ ರಾಷ್ಟ್ರಧ್ವಜಾರೋಹಣ ಮಾಡಿ ಗೌರವ ಸಲ್ಲಿಸಿದರು. ಇದು ಭಾರತ-ಅಮೆರಿಕ ಮಧ್ಯ 12 ನೇ ಜಂಟಿ ಮಿಲಿಟರಿ ಪಡೆಗಳ ತರಬೇತಿ ಅಭ್ಯಾಸವಾಗಿದ್ದು, ಉಭಯ ದೇಶಗಳು ಆಯೋಜಿಸುತ್ತಾ ಬಂದಿವೆ.

ವಿಶ್ವಸಂಸ್ಥೆಯಲ್ಲಿ ಅಡಿಯಲ್ಲಿ ಭಯೋತ್ಪಾದನೆ ನಿರ್ಮೂಲನೆ ಹಾಗೂ ಶಾಂತಿ ಸ್ಥಾಪನೆಗೆ ಭಾರತ ಹಾಗೂ ಅಮೆರಿಕ ದೇಶಗಳ ಸೇನಾ ಪಡೆ ಕಾರ್ಯನಿರ್ವಹಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ಉಭಯ ದೇಶಗಳ ಜಂಟಿ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ.

(ಸಾಂದರ್ಭಿಕ ಚಿತ್ರ)