ಮಾಜಿ ಸಚಿವ ಹಾಗೂ ರೆಬೆಲ್‌ಸ್ಟಾರ್‌ ಅಂಬರೀಶ್‌ ಅವರ ಮುಂದಿನ ನಡೆ ಏನು ಎಂಬ ಬಗೆಗಿನ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ಅಖಾಡಕ್ಕೆ ಇಳಿದಿದ್ದು, ನೇರ ಭೇಟಿಯ ನಂತರ ಅಂಬರೀಶ್‌ ಟಿಕೆಟ್‌ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಬೆಂಗಳೂರು : ಮಾಜಿ ಸಚಿವ ಹಾಗೂ ರೆಬೆಲ್ಸ್ಟಾರ್ ಅಂಬರೀಶ್ ಅವರ ಮುಂದಿನ ನಡೆ ಏನು ಎಂಬ ಬಗೆಗಿನ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ಅಖಾಡಕ್ಕೆ ಇಳಿದಿದ್ದು, ನೇರ ಭೇಟಿಯ ನಂತರ ಅಂಬರೀಶ್ ಟಿಕೆಟ್ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಅಂಬರೀಶ್ ಅವರು ಸ್ಪರ್ಧಿಸಬಯಸಿದರೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದು ಖಚಿತ. ಆದರೆ, ಸ್ಪರ್ಧೆ ಬಗ್ಗೆ ಅಂಬರೀಶ್ ಅವರ ನಡೆ ಏನು ಎಂಬುದೇ ಕಾಂಗ್ರೆಸ್ ನಾಯಕತ್ವಕ್ಕೆ ಬಗೆಹರಿದಿಲ್ಲ. ಅಂಬರೀಶ್ ಅವರಿಗೆ ತಮ್ಮನ್ನು ಪಕ್ಷ ಕಡೆಗಣಿಸಿದೆ ಎಂಬ ಬೇಸರವಿದೆ. ವಿಶೇಷವಾಗಿ ಮಂಡ್ಯ ಜಿಲ್ಲೆಯ ನಿರ್ಧಾರಗಳ ವಿಚಾರದಲ್ಲಿ ಅಂಬರೀಶ್ ಅವರನ್ನು ಪಕ್ಷದ ನಾಯಕತ್ವ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಭಾವನೆ ಹೊಂದಿದ್ದಾರೆ. ಹೀಗಾಗಿ ಮಂಡ್ಯ ಕ್ಷೇತ್ರದ ಟಿಕೆಟ್ಗಾಗಿಯೂ ಅವರು ಅರ್ಜಿ ಸಲ್ಲಿಸಿಲ್ಲ ಹಾಗೂ ಈ ಬಗ್ಗೆ ಯಾವ ನಾಯಕರೊಂದಿಗೂ ಮಾತುಕತೆ ನಡೆಸಿಲ್ಲ. ಇದು ಗೊಂದಲ ಸೃಷ್ಟಿಸಿದೆ. ಹೀಗಾಗಿ, ಅಂಬರೀಶ್ ಮನಸ್ಸಿನಲ್ಲಿದೆ ಏನಿದೆ ಎಂಬುದನ್ನು ತಿಳಿದು ಅವರಿಗೆ ಟಿಕೆಟ್ ನೀಡುವ ಅಥವಾ ಅವರ ಬದಲಾಗಿ ಮಂಡ್ಯ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವ ಹೊಣೆಯನ್ನು ಕಾಂಗ್ರೆಸ್ ನಾಯಕತ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಟ್ಟಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಅಂಬರೀಶ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ನಿರ್ಧಾರವೇನು ಎಂದು ಪ್ರಶ್ನಿಸಿದ್ದು, ಅದಕ್ಕೆ ಅಂಬರೀಶ್ ಮನೆಗೆ ಊಟಕ್ಕೆ ಬನ್ನಿ ಅಲ್ಲೇ ಮಾತನಾಡೋಣ ಎಂದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಸಿಎಂ ಅವರು ಅಂಬರೀಶ್ ಮನೆಗೆ ಊಟಕ್ಕೆ ಹೋಗಬೇಕಿತ್ತು. ಆದರೆ, ಮೈಸೂರಿನಲ್ಲಿ ಅವರ ಕಾರ್ಯಕ್ರಮ ತಡವಾದ ಹಿನ್ನೆಲೆಯಲ್ಲಿ ತೆರಳಲಿಲ್ಲ.
ಹೀಗಾಗಿ ಅಂಬರೀಶ್ ಹಾಗೂ ಸಿಎಂ ಭೇಟಿ ಮುಂದಕ್ಕೆ ಹೋಗಿದೆ. ವಾಸ್ತವವಾಗಿ ಮಂಗಳವಾರ ಅಂಬರೀಶ್ ಅವರನ್ನು ಭೇಟಿ ಮಾಡುವ ಉದ್ದೇಶವಿದ್ದರೂ ರಾಹುಲ್ ಗಾಂಧಿ ಅವರ ಕಾರ್ಯಕ್ರಮವಿರುವ ಹಿನ್ನೆಲೆಯಲ್ಲಿ ಇದು ಖಚಿತವಾಗಿಲ್ಲ. ಮಂಗಳವಾರ ಬೆಳಗ್ಗೆ ಕಾಲಾವಕಾಶ ದೊರೆತರೆ ಉಪಹಾರದ ವೇಳೆ ಅಂಬರೀಶ್ ಭೇಟಿಯಾಗಬಹುದು. ಇಲ್ಲದಿದ್ದರೆ, ಈ ಭೇಟಿ ರಾಹುಲ್ ಅವರ ಎರಡು ದಿನಗಳ ಜನಾಶೀರ್ವಾದ ಯಾತ್ರೆಯ ಮುಗಿದ ನಂತರ ನಡೆಯಬಹುದು ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ. ಒಟ್ಟಾರೆ, ಸಿಎಂ ಅವರು ಅಂಬರೀಶ್ ಭೇಟಿಯ ನಂತರವೇ ಅವರ ಸ್ಪರ್ಧೆ ವಿಚಾರದಲ್ಲಿ ಸ್ಪಷ್ಟತೆ ಬರಲಿದೆ ಎನ್ನುತ್ತವೆ ಮೂಲಗಳು.
ಮೂಲಗಳ ಪ್ರಕಾರ ಅಂಬರೀಶ್ ಅವರು ಈ ಬಾರಿ ಸ್ಪರ್ಧಿಸಲು ಹಿಂಜರಿದರೆ ಅವರ ಪತ್ನಿ ಸುಮಲತಾ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಸಿದ್ಧವಿದೆ. ಇದಾಗದ ಪಕ್ಷದಲ್ಲಿ ಬೇರೆ ಅರ್ಹ ವ್ಯಕ್ತಿಯನ್ನು ಹುಡುಕಬೇಕಾಗುತ್ತದೆ. ಆದರೆ, ಪಕ್ಷ ಅಂಬರೀಶ್ ಬಯಸಿದಂತೆ ಪ್ರಾಮುಖ್ಯತೆ ನೀಡಿದರೆ ಅವರು ಬೇಸರ ಬಿಟ್ಟು ಮತ್ತೆ ಸ್ಪರ್ಧೆಗೂ ಮುಂದಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಅಂಬರೀಶ್ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಯಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.
