Asianet Suvarna News Asianet Suvarna News

ಯಾವನಿಗೆ ಬೇಕು ಸಿಎಂ ಹುದ್ದೆ ಅಂದಿದ್ದರು ಅಂಬಿ

ಕಲಾವಿದರಾಗಿ, ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಎಲ್ಲರನ್ನು ಆಕರ್ಷಿಸುವ ವಿಶಿಷ್ಟ ಗುಣ, ಚಿತ್ರರಂಗದಲ್ಲಿರಲಿ, ರಾಜಕೀಯ ಕ್ಷೇತ್ರದಲ್ಲಾಗಲಿ ಅವರದ್ದು ನೇರ ನುಡಿಯ ಗುಣ. ಹೇಳುವುದನ್ನು ಯಾವುದೇ ಮುಲಾಜಿಲ್ಲದೇ
ಹೇಳುತ್ತಿದ್ದರು. 

Ambareesh was popular for being straightforward
Author
Bengaluru, First Published Nov 26, 2018, 10:58 AM IST

ಬೆಂಗಳೂರು : ಅಂಬರೀಷ್ ಅವರದ್ದು ಬಹುಮುಖ ವ್ಯಕ್ತಿತ್ವ, ಕಲಾವಿದರಾಗಿ, ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಎಲ್ಲರನ್ನು ಆಕರ್ಷಿಸುವ ವಿಶಿಷ್ಟ ಗುಣ, ಚಿತ್ರರಂಗದಲ್ಲಿರಲಿ, ರಾಜಕೀಯ ಕ್ಷೇತ್ರದಲ್ಲಾಗಲಿ ಅವರದ್ದು ನೇರ ನುಡಿಯ ಗುಣ. ಹೇಳುವುದನ್ನು ಯಾವುದೇ ಮುಲಾಜಿಲ್ಲದೇ ಹೇಳುತ್ತಿದ್ದರು. ಆದರೆ ಹೇಳುವ ಮಾತಿನ ಹಿಂದೆ ಕಾಳಜಿ ಇರುತ್ತಿತ್ತು. ಶಾಸಕರಾಗಿ, ಸಚಿವರಾಗಿದ್ದ ಅವಧಿಯಲ್ಲೂ ಇದೇ ರೀತಿಯ ನಡವಳಿಕೆಯನ್ನು ಸದನದಲ್ಲೂ ಹಾಗೂ ಸಾರ್ವಜನಿಕವಾಗಿ ಪ್ರದರ್ಶಿಸಿಕೊಂಡು ಬರುತ್ತಿದ್ದರು. 

ವಿಧಾನಸಭೆ ಸದಸ್ಯರಾಗಿ, ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದ ಸಂದರ್ಭದಲ್ಲೂ ಬಡವರ ಪರವಾದ ಕಾಳಜಿ ಇಟ್ಟುಕೊಂಡಿದ್ದರು. ಹಲವು ವರ್ಷಗಳ ಕಾಲ ರಾಜನಂತೆ ಬದುಕು ನಡೆಸಿ ಅಭ್ಯಾಸ ಮಾಡಿಕೊಂಡು ಬಂದಿದ್ದ ಅಂಬರೀಷ್ ಅವರು ವಸತಿ ಸಚಿವರಾಗಿ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತಾರೆ ಎಂಬ ಅನುಮಾನ ದೂರ ಮಾಡುವ ರೀತಿಯಲ್ಲಿ ಕಾರ್ಯನಿರ್ವಹಿಸಿದರು.  

ಚಿತ್ರರಂಗದಿಂದ ಬಂದಿದ್ದ ಅವರು ಚಲನಚಿತ್ರ ಕಾರ್ಮಿಕರಿಗೆ ವಸತಿ ಯೋಜನೆ ಜಾರಿ ಮಾಡುವ ಚಿಂತನೆ ಇದೆ ಎಂದು ಹೇಳಿದ್ದರು. ಜೊತೆಗೆ ವಸತಿ ಇಲಾಖೆಯಲ್ಲಿ ಏನಾದರೂ ಹೊಸತು ಮಾಡಬೇಕೆಂಬ ಇಚ್ಛೆ ಹೊಂದಿದ್ದರೂ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಹಣ ಬಾರದೇ ಇದ್ದಾಗ ಕೊಂಚ ಹತಾಶರಾಗಿದ್ದರು. 

ವಿಧಾನ ಮಂಡಲದ ಅಧಿವೇಶನ ಸಂದರ್ಭದಲ್ಲಿ ತಮ್ಮ ಇಲಾಖೆಗೆ ಸಂಬಂಧಪಟ್ಟ ಪ್ರಶ್ನೋತ್ತರ ಕಲಾಪದಲ್ಲಿ ಭಾಗಿಯಾಗುವ ಮುನ್ನ ಒಂದೆರಡು ಗಂಟೆಗಳ ಮೊದಲೇ ವಿಧಾನಸಭೆಗೆ ಆಗಮಿಸಿ ಅಧಿಕಾರಿಗಳ ಜೊತೆ ಚರ್ಚಿಸಿ ಎಲ್ಲ ರೀತಿಯ ಮಾಹಿತಿ ಪಡೆಯುತ್ತಿದ್ದರು. ಕಲಾಪದಲ್ಲಿ ಸದಸ್ಯರು ಕೇಳುವ ಉಪಪ್ರಶ್ನೆಗಳಿಗೆ ಸಮಾಧಾನಕರವಾದ ಉತ್ತರ ನೀಡುತ್ತಿದ್ದರು. ಯಾವುದೇ ಸದಸ್ಯರು ಇಕ್ಕಟ್ಟಿಗೆ ಸಿಲುಕಿಸಲು ಮುಂದಾದರೆ, ಸದಸ್ಯರಿಗೆ ಶೀಘ್ರದಲ್ಲೇ ಉತ್ತರ ಕೊಡಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿ ಪಕ್ಕಾ ರಾಜಕಾರಣಿಯಂತೆ ಉತ್ತರ ನೀಡುತ್ತಿದ್ದರು. 

ಸಚಿವ ಸಂಪುಟ ಸಭೆಯಲ್ಲಿಯೂ ಸಹ ತಮ್ಮ ಇಲಾಖೆಗೆ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಪಟ್ಟು ಹಿಡಿಯು ತ್ತಿದ್ದರು. ಹಣದ ಲಭ್ಯತೆ ಕಡಿಮೆ ಇರುವುದರಿಂದ ಕೇಳಿದ ಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದಾಗ, ನೇರವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯುತ್ತಿತ್ತು.

ಸ್ವಾಭಿಮಾನಿ :  ಕೊಂಚ ಜಾಸ್ತಿ ಸ್ವಾಭಿಮಾನಿಯಾಗಿದ್ದ ಅಂಬರೀಷ್ ಶಾಸಕರಾಗಿ, ಸಚಿವರಾಗಿದ್ದ ಸಂದರ್ಭದಲ್ಲಿ ಪಕ್ಷದ ಕೆಲವು ಹಿರಿಯ ನಾಯಕರಿಂದ ಸ್ವಾಭಿಮಾನಕ್ಕೆ ಕೊಂಚ ಧಕ್ಕೆ ಉಂಟಾದಾಗ, ಬಹಿರಂಗವಾಗಿ ಟೀಕೆ ಮಾಡದಿದ್ದರೂ ಅಂತಹ ನಾಯಕರಿಂದ ದೂರ ಉಳಿದರು. ಇಂತಹ ಸಂದರ್ಭದಲ್ಲಿ ಸ್ನೇಹಿತರೂ ಆಗಿರುವ ಶಾಸಕ ಎಂ.ಆರ್. ಸೀತಾರಾಂ ಅವರು, ‘ರಾಜಕೀಯದಲ್ಲಿ ತಾಳ್ಮೆ ತುಂಬಾ ಮುಖ್ಯ, ಸೆಲೆಬ್ರಟಿಯಾಗಿ ದೊಡ್ಡ ಪ್ರಮಾಣದ ಅಭಿಮಾನಿಗಳನ್ನು ಗಳಿಸಿದ್ದೀರಾ. ಪ್ರಬಲ ಸಮುದಾಯ ನಿಮ್ಮ ಜೊತೆ ಇದೆ, ತಾಳ್ಮೆಯಿಂದ ಕಾದರೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಇದೆ’ ಎಂದಾಗ, ಅಂಬರೀಷ್ ದೊಡ್ಡದಾಗಿ ನಗುತ್ತಾ, ‘‘ಯಾವನ್ರಿಗೆ ಬೇಕು ಸಿಎಂ ಹುದ್ದೆ, ಆರಾಮವಾಗಿ ಇರುತ್ತೇನೆ ’’ ಎಂದಿದ್ದರು. 

Follow Us:
Download App:
  • android
  • ios