Asianet Suvarna News Asianet Suvarna News

ಅಂಬರೀಷ್ ಗೆ ಚಿತ್ರದಲ್ಲಿ ನಟಿಸೋದು ಇಷ್ಟವಿರಲಿಲ್ಲ : ಏಕೆ..?

ಕನ್ನಡ ಚಿತ್ರರಂಗದಲ್ಲಿ ನಾಲ್ಕೂವರೆ ದಶಕಗಳನ್ನು ಪೂರೈಸಿದ್ದ ಅಂಬರೀಷ್ ಅವರಿಗೆ ಚಲನಚಿತ್ರಗಳಲ್ಲಿ ನಟಿಸುವುದು ಇಷ್ಟವಿರಲಿಲ್ಲವೇ?. ಹೌದೆನ್ನುತ್ತಾರೆ ಅವರ ಪರಮಾಪ್ತ ಗೆಳೆಯ ವಿವೇಕ್. ಅದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ. 

Ambareesh Not Interested In Acting Says Friend Vivek
Author
Bengaluru, First Published Nov 26, 2018, 11:52 AM IST

ಬೆಂಗಳೂರು :  ಕನ್ನಡ ಚಿತ್ರರಂಗದಲ್ಲಿ ನಾಲ್ಕೂವರೆ ದಶಕಗಳನ್ನು ಪೂರೈಸಿದ್ದ ಅಂಬರೀಷ್ ಅವರಿಗೆ ಚಲನಚಿತ್ರಗಳಲ್ಲಿ ನಟಿಸುವುದು ಇಷ್ಟವಿರಲಿಲ್ಲವೇ?. 

ಹೌದು ಎನ್ನುತ್ತಾರೆ ಅಂಬರೀಷ್ ಅವರ ಪರಮಾಪ್ತ ಸ್ನೇಹಿತರಾದ ಮೈಸೂರಿನ ಕಿಂಗ್ಸ್ ಕೋರ್ಟ್ ಹೋಟೆಲ್ ಮಾಲೀಕ ವಿವೇಕ್. ವಯಸ್ಸಿನಲ್ಲಿ ಅಂಬರೀಷ್ ಅವರಿಗಿಂತಲೂ ವಿವೇಕ್ ಹಿರಿಯರು. ಅಂಬರೀಷ್ ಅವರ ಅಣ್ಣ ಶಿವಕುಮಾರ್ ಹಾಗೂ ವಿವೇಕ್ ಸ್ನೇಹಿತರು. ಇಬ್ಬರ ಮನೆಯೂ ಸರಸ್ವತಿಪುರದಲ್ಲೇ ಇತ್ತು. ನಂತರ ಹತ್ತಿರವಾಗಿದ್ದು ಮಾತ್ರ ಅಂಬರೀಷ್ ಮತ್ತು ವಿವೇಕ್. ಇಬ್ಬರು ರುಚಿ, ಅಭಿರುಚಿ ಒಂದೇ ಆಗಿದ್ದು ಇದಕ್ಕೆ ಕಾರಣ. 

ಸ್ನೇಹಿತನ ಕಣ್ಣಲ್ಲಿ ಅಂಬಿ ಹೇಗೆ ಕಾಣಬಹುದು ಎಂಬುದನ್ನು ವಿವೇಕ್ ಈ ಹಿಂದೆ ‘ಕನ್ನಡಪ್ರಭ’ದೊಂದಿಗೆ ಹಂಚಿಕೊಂಡಿದ್ದು ಹೀಗೆ. ಅಂಬರೀಷ್ ಅವರ ತಂದೆ ಹುಚ್ಚೇಗೌಡ, ತಾಯಿ ಪದ್ಮಮ್ಮ. ತಂದೆ ನಿವೃತ್ತ ಸಬ್ ರಿಜಿಸ್ಟ್ರಾರ್. ಮೂವರು ಸೋದರರು ಹಾಗೂ ಮೂವರು ಸೋದರಿಯರ ದೊಡ್ಡ ಸಂಸಾರ. ಅಣ್ಣಂದಿರೆಲ್ಲಾ ಚೆನ್ನಾಗಿ ಓದಿ ಎಂಜಿನಿಯರ್‌ಗಳಾದ್ರು. 

ಸಿಸ್ಟರ್ಸ್ ಸೂಪರ್ಸ್ ಸಿಂಗರ್ಸ್. ಎಷ್ಟೇ ಆದರೂ ಪೀಟಿಲು ಚೌಡಯ್ಯನವರ ವಂಶಸ್ಥರಲ್ಲವೇ? ಕಿರಿಯವನಾದ ಅಂಬರೀಷ್ ತಾಯಿಗೆ ಮುದ್ದಿನ ಮಗ. ಪಾಠಕ್ಕಿಂತ ಆಟ ಜಾಸ್ತಿ. ಅವನಿಗೆ ಟೆನಿಸ್, ಕಾರ್ಡ್ಸ್, ರೇಸ್- ಹೀಗೆ ಎಲ್ಲಾ ಆಟಾನೂ ಇಷ್ಟ. ಅಂಬರೀಷ್ ಹಾಗೂ ಹೀಗೂ ಎಸ್ಸೆಸ್ಸೆಲ್ಸಿ ಪಾಸು ಮಾಡಿದ್ರು ಪಿಯುಸಿ ಪಾಸು ಮಾಡಲು ಆಗ್ಲೇ ಇಲ್ಲ. ಮೈಸೂರಿನಲ್ಲಿ ನಮ್ಗೆ ಮೂರು ಅಡ್ಡಗಳು ಇದ್ದವು. ಒಂದು ಧನ್ವಂತ್ರಿ ರಸ್ತೆಯಲ್ಲಿ ಗಾಯತ್ರಿ ಭವನ ಪಕ್ಕದಲ್ಲಿ ಇದ್ದ ಫೌಂಟನ್ ವ್ಯೆ ಹೋಟೆಲ್. ಈಗ ಮಚ್ಚಿದೆ. ಬೆಳಗ್ಗೆ ಎದ್ದು ವೆಸ್ಪಾ, ಮೋಟಾರ್ ಸೈಕಲ್‌ಗಳಲ್ಲಿ ಮನೆ ಬಿಟ್ರೆ ಬಂದು ಸೇರುತ್ತಿದ್ದುದೇ ಫೌಂಟನ್ ವ್ಯೆ ಬಳಿ. ಅಲ್ಲಿ ಕಾಫಿ ಕುಡಿತಿದ್ವಿ. 

ಅಂಬರೀಷ್‌ಗೆ ಸೇಠು ಮಗ ಬಾಬು ಎಂಬ ಶ್ರೀಮಂತನನ್ನು ಹೊರತುಪಡಿಸಿದರೆ ಉಳಿದವರೆಲ್ಲಾ ಮಧ್ಯಮ ವರ್ಗದ ಸ್ನೇಹಿತರೇ. ನಂತರ ಬನುಮಯ್ಯ ಚೌಕದಲ್ಲಿದ್ದ ವಿಜಯ ಹೋಟೆಲ್‌ಗೆ ಹೋಗುತಿದ್ವಿ. ಅಲ್ಲಿ ರಂಗಪ್ಪ ಅವರ ನಮ್ಗೆ ಚೆನ್ನಾಗಿ ಅಡುಗೆ ಮಾಡಿ ಹಾಕೋರು. ಸಂಜೆ ಆದ್ರೆ  ಪ್ರಕಾಶ್ ವೈನ್ಸ್‌ಗೆ ಹೋಗಿ ಗುಂಡ್ ಹಾಕುತಿದ್ವಿ.

ನಾಗರಹಾವು ಚಿತ್ರಕ್ಕೆ ಬುಲಾವ್: ಒಂದು ದಿನ ರಾಜೇಂದ್ರಸಿಂಗ್ ಬಾಬು ಅವರ ಸೋದರ ಸಂಗ್ರಾಮ ಸಿಂಗ್ ಅಂಬರೀಷನನ್ನು ಪುಟ್ಟಣ್ಣ  ಕಣಗಾಲರ ನಾಗರಹಾವು ಚಿತ್ರಕ್ಕೆ ಬಾ ಅಂತ ಕರೆದ್ರು. ಅಂಬರೀಷ್‌ಗೆ ನಾಚಿಕೆ, ಸಂಕೋಚದ ಸ್ವಭಾವ. ಸಂಗ್ರಾಮಸಿಂಗ್ ಬಲವಂತ ಮಾಡಿ ಕರ್ಕೊಂಡು ಹೋಗಿದ್ರು. ಆತ ಗೋಡೆ ಹಾರ್ಕೋಂಡ್ ವಾಪಸ್ ಬಂದಿದ್ದ. ಮತ್ತೆ ಪುಸಲಾಯಿಷಿ ಕರ್ರೊಂಡು ಹೋಗಿ ಜಲೀಲನ ಪಾತ್ರ ಮಾಡಿಸಿದ್ರು.

1980 ರಲ್ಲಿ ನಾನು ಕಿಂಗ್ಸ್ ಕೋರ್ಟ್ ಹೋಟೆಲ್ ಪ್ರಾರಂಭಿಸಿದ ಮೇಲೆ ನಮ್ಮ ಸ್ನೇಹ ಇನ್ನೂ ಗಾಢವಾಯ್ತು. ಫಿಲಂ ಇಂಡಸ್ಟ್ರಿಯೋರು ಯಾರೇ ಬಂದ್ರೂ ನಮ್ ಹೋಟೆಲ್‌ನಲ್ಲೇ ಉಳಿದುಕೊಳ್ಳುತ್ತಿದ್ರು. ಬೇರೆ ಸ್ಟೇಟ್‌ನವ್ರ ಬಂದಾಗ ಇದು ಅಂಬರೀಷ್ ಹೋಟೆಲಾ ಅಂತಾ ಕೇಳೋರು. ವಿಷ್ಣುವರ್ಧನ್ ಅಂತೂ ಕೊನೆಯ ದಿನದವರೆಗೂ ನಮ್ ಹೋಟೆಲ್ ಬಿಟ್ಟು ಬೇರೆ ಕಡೆ ಉಳಿಯಲಿಲ್ಲ. ನಮ್ ಹೋಟೆಲ್‌ನಲ್ಲೇ ನಿಧನರಾದರು. ಅಂಬರೀಷ್ ಯಾರಾದ್ರು ಸ್ನೇಹಿತರು ಬಂದಾಗ ನಾನು ಅವನಿಗೆ ಏನು ಸಹಾಯ ಮಾಡಬಹುದು ಎಂದು ಯೋಚಿಸುತ್ತಿದ್ದ. ಆದರೆ ಅವನಿಂದ ನನಗೆ ಏನು ಸಹಾಯವಾಗುತ್ತದೆ ಎಂದು ಯಾವತ್ತೂ ಯೋಚಿಸಿದವನಲ್ಲ.  ಅಂಥ ಹದಯ ವೈಶಾಲ್ಯತೆ ಆತನದ್ದು. ಹೀಗಾಗಿಯೇ ಅವನು ದಾನಶೂರ ಕರ್ಣ.

Follow Us:
Download App:
  • android
  • ios