ಸಿಎಂ ಸಿದ್ದು ಪುತ್ರ ಡಾ. ಯತೀಂದ್ರ ಈಗ ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕ! | 40 ಮಂದಿ ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ
ಬೆಂಗಳೂರು(ಏ. 02): ಸಾಮಾನ್ಯವಾಗಿ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅನಾಯಾಸವಾಗಿ ಸ್ಥಾನ ಪಡೆಯುತ್ತಿದ್ದ ರಮ್ಯಾ ಹಾಗೂ ಅಂಬರೀಶ್ಗೆ ಈ ಬಾರಿ ಕೊಕ್. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಈಗ ಕಾಂಗ್ರೆಸ್ನ ಸ್ಟಾರ್ ಪ್ರಚಾರಕ!
ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಗೆ ಕಾಂಗ್ರೆಸ್ ಶನಿವಾರ ಬಿಡುಗಡೆ ಮಾಡಿರುವ 40 ಮಂದಿ ಸ್ಟಾರ್ ಪ್ರಚಾರಕರ ಪರಿಷ್ಕೃತ ಪಟ್ಟಿಯಲ್ಲಿ ಈ ಬದಲಾವಣೆ ಉಂಟಾಗಿದೆ. ಈ ಹಿಂದೆ ಇದೇ ಉಪ ಚುನಾವಣೆಗಾಗಿ ಕಾಂಗ್ರೆಸ್ ಸಿದ್ಧಪಡಿಸಿದ್ದ ಪಟ್ಟಿಯಲ್ಲಿ ರಮ್ಯಾ ಹಾಗೂ ಅಂಬರೀಶ್ ಅವರು ಇದ್ದರು. ಆದರೆ, ಯತೀಂದ್ರ ಇರಲಿಲ್ಲ. ಈಗ ಪರಿಷ್ಕೃತ ಪಟ್ಟಿಯಲ್ಲಿ ಈ ಬದಲಾವಣೆಯಾಗಿದೆ.
ರಮ್ಯಾಗೆ ಅನಾರೋಗ್ಯವಂತೆ: ಕಾಂಗ್ರೆಸ್ ಮೂಲಗಳ ಪ್ರಕಾರ ರಮ್ಯಾ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರು ವಿಶ್ರಾಂತಿಗೆ ಸೂಚಿಸಿರುವುದರಿಂದ ತಮಗೆ ಈ ಉಪ ಚುನಾವಣೆ ಪ್ರಚಾರದ ಹೊಣೆಗಾರಿಕೆಯಿಂದ ಹೊರಗಿಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಕೋರಿಕೆ ಸಲ್ಲಿಸಿದ್ದರು. ಇನ್ನು ಅಂಬರೀಶ್ ಅವರನ್ನು ಪ್ರಚಾರಕ್ಕೆ ಬರುವಂತೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹ್ವಾನಿಸ್ದಿದಾರೆ ಎನ್ನಲಾಗಿದ್ದು, ಅವರು ಸಹ ಅನಾರೋಗ್ಯದ ಕಾರಣ ನೀಡಿದ್ದಾರೆ ಎನ್ನ ಲಾಗಿದೆ. ಆದಾಗ್ಯೂ ಸಿಎಂ ಅವರೇ ಆಹ್ವಾನ ನೀಡಿರುವುದರಿಂದ ಒಂದು ದಿನವಾದರೂ ಅವರು ಪ್ರಚಾರಕ್ಕೆ ತೆರಳುವ ಸಾಧ್ಯತೆ ಇದೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.
ಇನ್ನು ಸಿಎಂ ಪುತ್ರ ಯತೀಂದ್ರ ಅವರು ನಂಜನಗೂಡು ಕ್ಷೇತ್ರದಲ್ಲಿ ಸಾಕಷ್ಟುಕ್ರಿಯಾಶೀಲವಾಗಿ ಪ್ರಚಾರದಲ್ಲಿ ತೊಡಗಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಪಟ್ಟಿಗೆ ಸೇರಿಸಲಾಗಿದೆ ಎಂಬುದು ಕಾಂಗ್ರೆಸ್ ಮೂಲಗಳು ನೀಡುವ ಸಮಜಾಯಿಷಿ.
ಉಳಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಪಕ್ಷದ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್, ಆಸ್ಕರ್ ಫರ್ನಾಂಡಿಸ್, ಎಂ. ವೀರಪ್ಪ ಮೊಯ್ಲಿ, ನಟಿ ಜಯಮಾಲಾ, ನಟ ಶಶಿಕುಮಾರ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.
ಸ್ಟಾರ್ ಪ್ರಚಾರಕರ ಪಟ್ಟಿಇಂತಿದೆ:
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿ ಪ್ರಸಾದ್, ಕಾರ್ಯದರ್ಶಿ ಡಾ.ಎ.ಚೆಲ್ಲಕುಮಾರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಸಂಸದರಾದ ಧ್ರುವನಾರಾಯಣ, ಡಿ.ಕೆ.ಸುರೇಶ್, ಸಚಿವರಾದ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಕೆ.ಆರ್.ರಮೇಶ್ ಕುಮಾರ್, ಎಂ.ಬಿ.ಪಾಟೀಲ್, ಡಾ.ಎಚ್.ಸಿ.ಮಹದೇವಪ್ಪ, ಆರ್.ರೋಷನ್ ಬೇಗ್, ಬಸವರಾಜ ರಾಯರೆಡ್ಡಿ, ಉಮಾಶ್ರೀ, ಎಚ್.ಆಂಜನೇಯ, ತನ್ವೀರ್ ಸೇಠ್, ರಮೇಶ್ ಜಾರಕಿಹೊಳಿ, ವಿನಯ್ ಕುಲಕರ್ಣಿ, ಎಂ.ಆರ್.ಸೀತಾರಾಮ್, ಸಂತೋಷ್ ಲಾಡ್, ಎ.ಮಂಜು, ಎಂ.ಕೃಷ್ಣಪ್ಪ, ಈಶ್ವರ ಖಂಡ್ರೆ, ಯು.ಟಿ. ಖಾದರ್, ಎಸ್.ಎಸ್.ಮಲ್ಲಿಕಾರ್ಜುನ್, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್, ರಾಜ್ಯ ವುಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಜಿ ಸಚಿವ ಸತೀಶ್ ಜಾರಕಿ ಹೊಳಿ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಎಂ.ಡಿ. ಲಕ್ಷ್ಮಿನಾರಾಯಣ, ನಟಿ ಡಾ.ಜಯಮಾಲಾ, ಮಾಜಿ ಸಂಸದ ಶಶಿಕುಮಾರ್ ನಾಯಕ್, ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಮತ್ತು ಡಾ.ಯತೀಂದ್ರ ಸಿದ್ದರಾಮಯ್ಯ.
ಕನ್ನಡಪ್ರಭ ವಾರ್ತೆ
epaper.kannadaprabha.in
