ಮುಂಬೈ(ಜು.27): ಮಹಾಮಳೆಯಿಂದಾಗಿ ಸಂಚಾರ ಸ್ಥಗಿತಗೊಂಡ ಮುಂಬಯಿ-ಕೊಲ್ಹಾಪುರ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್‌ ರೈಲಿನ ಎಲ್ಲ 700 ಪ್ರಯಾಣಿಕರನ್ನು ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ.

ಅಲ್ಲದೇ ಪ್ರಯಾಣಿಕರನ್ನು 19 ಕೋಚ್‌ಗಳ ವಿಶೇಷ ರೈಲಿನ ಮೂಲಕ ಕಲ್ಯಾಣದಿಂದ ಕೊಲ್ಹಾಪುರಕ್ಕೆ ಕರೆತರಲಾಗಿದೆ ಎಂದು ಮಧ್ಯ ರೈಲ್ವೇ ಖಚಿತಪಡಿಸಿದೆ.

ಮುಂಬೈ-ಕೊಲ್ಹಾಪುರ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್‌ ರೈಲು, ಮುಂಬೈನಿಂದ 100 ಕಿ.ಮೀ ದೂರದ ವಂಗಾನಿ ಮತ್ತು ಬದ್ಲಾಪುರ್ ನಿಲ್ದಾಣಗಳ ನಡುವೆ ಸಿಲುಕಿಕೊಂಡಿತ್ತು. ರೈಲಿನಲ್ಲಿದ್ದ ಪ್ರಯಾಣಿಕರನ್ನು ndrf ತಂಡ ಹಾಗೂ ಎರಡು ಸೇನಾ ಹೆಲಿಕಾಪ್ಟರ್’ಗಳು ಸುರಕ್ಷಿತವಾಗಿ ರೈಲಿನಿಂದ ಹೊರತರುವಲ್ಲಿ ಯಶಸ್ವಿಯಾಗಿದೆ.

ಪ್ರಯಾಣಿಕರ ರಕ್ಷಣೆಗೆ ಎನ್‌ಡಿಆರ್‌ಎಫ್‌, ಸೇನೆ, ಭಾರತೀಯ ನೌಕಾಪಡೆ, ಪೊಲೀಸರು, ಮತ್ತು ಇತರ ಸಿಬ್ಬಂದಿ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ.