ಬೆಂಗಳೂರು(ಸೆ.07): ತಮಿಳ್ನಾಡಿಗೆ ರಾಜ್ಯ ಸರ್ಕಾರ ನೀರು ಹರಿಸಲು ನಿರ್ಧರಿಸಿದೆ. ಆದರೆ ನೀರು ಹರಿಸಬೇಕೋ ಬೇಡವೋ ಅನ್ನೋದರ ಚರ್ಚಿಸಲು ಕರೆದಿದ್ದ ಸಿಎಂ ನೇತೃತ್ವದ ಸಭೆ ಹಲವು ಘಟಾನುಘಟಿ ನಾಯಕರೈ ಗೈರುಆಗಿದ್ದರು. ಇಂತಹ ಮಹತ್ವದ ಸಭೆಗೆ ಗೈರುಹಾಜರಾದ ಘಟಾನುಘಟಿ ನಾಯಕರು ಯಾರ್ಯಾರು? ಈ ಪೈಕಿ ಯಾರ ಗೈರುಹಾಜರಿ ಹೆಚ್ಚು ಚರ್ಚೆಗೆ ಕಾರಣವಾಗಿದೆ? ಇಲ್ಲಿದೆ ವಿವರ

ಕಾವೇರಿ ನೀರಿನ್ನು ತಮಿಳುನಾಡಿಗೆ ಬಿಡಿ ಅಂತಾ ಸುಪ್ರೀಂಕೋರ್ಟ್ ಖಡಕ್ ಆದೇಶ ಹೊರಡಿಸಿದೆ. ಇಡೀ ರಾಜ್ಯ ಆಕ್ರೋಶಗೊಂಡಿದೆ. ಇದರ ಬಗ್ಗೆ ಒಂದು ನಿರ್ಧಾರಕ್ಕೆ ಬರೋಣ ಬನ್ನಿ ಅಂತಾ ರಾಜ್ಯ ಸರ್ಕಾರ ಪ್ರಮುಖ ನಾಯಕರಿಗೆ ಆಹ್ವಾನ ಕೊಟ್ಟಿದ್ರೂ ಸಭೆ ಮಾತ್ರ ಬರಲೇ ಇಲ್ಲ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಿನ್ನೆ ನಡೆದ ಸರ್ವಪಕ್ಷ ಸಭೆಗೆ ರಾಜ್ಯದ ಘಟಾನುಘಟಿ ನಾಯಕರ ದಂಡೇ ಗೈರುಹಾಜರಾಗಿತ್ತು. ಬಂದೆರಗಿರುವ ಬರದ ಮೇಲೆ ಬರೆ ಎಳೆದಂತೆ ಸುಪ್ರೀಂಕೋರ್ಟ್​ ತಮಿಳ್ನಾಡಿಗೆ ನೀರು ಬಿಡುವಂತೆ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ನಡೆದ ಮಹತ್ವದ ಸಭೆ ಇದಾಗಿತ್ತು. ಆದರೆ ಪ್ರಮುಖ ನಾಯಕರೆನಿಸಿಕೊಂಡವರು ಗೈರು ಹಾಜರಾಗಿದ್ದು ಮಾತ್ರ ವಿಪರ್ಯಾಸ

ಗೈರು ಹಾಜರಾದ ಪ್ರಮುಖರು

ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ
ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ
ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ
ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ್​
ವಿಧಾನಸಭೆ ವಿಪಕ್ಷದ ಉಪನಾಯಕ ಆರ್​.ಅಶೋಕ್​
ಸಂಸದ ನಳೀನ್ ಕುಮಾರ್ ಕಟೀಲು
ಸಂಸದ ಸುರೇಶ್​ ಅಂಗಡಿ
ಸಂಸದ ಪ್ರಹ್ಲಾದ್ ಜೋಷಿ
ಸಂಸದೆ ಶೋಭಾ ಕರಂದ್ಲಾಜೆ
ಸಂಸದ ಶ್ರೀರಾಮುಲು
ಸಂಸದ ಡಿ.ಕೆ. ಸುರೇಶ್​
ಸಂಸದ ಪ್ರಕಾಶ್​ ಹುಕ್ಕೇರಿ
ಸಂಸದ ಬಿ.ವಿ. ನಾಯಕ್​
ಸಂಸದ ಭಗವಂತ ಖೂಬಾ
ಸಂಸದ ಪ್ರತಾಪ್​ಸಿಂಹ
ಸಂಸದ ಧ್ರುವನಾರಾಯಣ

ಹೀಗೆ ಬಹುತೇಕ ಸಂಸದರು ಹಾಗೂ ಪ್ರಮುಖ ನಾಯಕರೇ ಈ ಮಹತ್ವದ ಸಭೆಗೆ ಬಂದಿರಲಿಲ್ಲ. ಈ ಪೈಕಿ ಜೆಡಿಎಸ್​ನ ದೇವೇಗೌಡ ಮತ್ತು ಕುಮಾರಸ್ವಾಮಿ ಇಬ್ಬರೂ ಗೈರುಹಾಜರಿ ಸಾಕಷ್ಟು ಚರ್ಚೆಗೆ ಗ್ರಾಸವಾಯ್ತು. ರಾಜ್ಯ ಸರ್ಕಾರ ತಮಿಳ್ನಾಡಿಗೆ ನೀರು ಬಿಡುವ ಅನಿವಾರ್ಯತೆ ಮುಂದಿಡುವುದನ್ನು ಮನಗಂಡೇ ಈ ಇಬ್ಬರು ಪ್ರಮುಖರು ಸಭೆಗೆ ಉದ್ದೇಶಪೂರ್ವಕವಾಗಿ ಗೈರುಹಾಜರಾದರೆ ಎಂಬ ಪ್ರಶ್ನೆಯೂ ಎದುರಾಯ್ತು. ಕುಮಾರಸ್ವಾಮಿ ಮೈಸೂರಿನಲ್ಲಿ ಇದ್ದುದ್ದರಿಂದ ಹಾಗೂ ದೇವೇಗೌಡರು ಚಿಕ್ಕಮಗಳೂರಿಗೆ ತೆರಳಿದ್ದರಿಂದ ಸಭೆಗೆ ಬಂದಿಲ್ಲ ಅಂತ ಜೆಡಿಎಸ್ ಪಾಳೆಯದ ಸಮಜಾಯಿಷಿ ಆಗಿತ್ತು. ಇನ್ನೊಂದೆಡೆ ಸಭೆಗೆ ಜೆಡಿಎಸ್ ಪರವಾಗಿ ಹಾಜರಾಗಿದ್ದ ಮಂಡ್ಯ ಸಂಸದ ಪುಟ್ಟರಾಜು, ತಾವು ಸಭೆ ಬಹಿಷ್ಕರಿಸಿ ಹೊರಬಂದಿರುವುದಾಗಿ ತಿಳಿಸಿದರು.

ಸಭೆಗೆ ಗೈರುಹಾಜರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ತಮ್ಮ ಪಕ್ಷದ ಪರವಾಗಿ ಬಂದ ಸಂಸದ ಪುಟ್ಟರಾಜು ಅವರ ಮೂಲಕ ರವಾನಿಸಬೇಕಾದ ಸಂದೇಶ ರವಾನಿಸಿದ್ರು. ಆದರೆ ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಸಂಸದರು ಗೈರುಹಾಜರಾದದ್ದಕ್ಕೆ ಊರಿನಲ್ಲಿಲ್ಲ ಎಂಬುದು ಬಿಟ್ಟು ಬೇರೇ ಕಾರಣ ಇರಲಿಲ್ಲ. ಮಹಾದಾಯಿ ವಿಚಾರದಲ್ಲಿ ತೋರಿದ ಒಗ್ಗಟ್ಟನ್ನು ಕಾವೇರಿ ವಿಚಾರದಲ್ಲಿ ಈ ಪ್ರಮುಖ ನಾಯಕರು ತೋರದೇ ಹೋದದ್ದು ಎಷ್ಟು ಸರಿ ಎಂಬ ಪ್ರಶ್ನೆಗೆ ಗೈರುಹಾಜರಾದ ಘಟಾನುಘಟಿಗಳೇ ಉತ್ತರಿಸಬೇಕು.