ಹಸಿದವರ ಪಾಲಿಗೆ 'ಅನ್ನದಾತ'ನಾಗಿದೆ ಈ ಟ್ರಸ್ಟ್: ಅನ್ನ ದಾಸೋಹಕ್ಕಾಗಿ ಶ್ರಮಿಸುತ್ತಿದೆ ‘ಆಲ್-ಆಮಾನ್’ ಟ್ರಸ್ಟ್

Al Aman Trust Social Service
Highlights

ಹಸಿದ ಹೊಟ್ಟೆಗಳಿಗೆ ತುತ್ತು ಅನ್ನ ನೀಡುವುದು ಪುಣ್ಯದ ಕಾರ್ಯ. ಆ ನಿಟ್ಟಿನಲ್ಲಿ ಹಲವಾರು ಸಂಘ ಸಂಸ್ಥೆಗಳು ಪ್ರತಿಫಲದ ನಿರೀಕ್ಷೆ ಇಲ್ಲದೇ ದುಡಿಯುತ್ತಿರುವುದು ನಮ್ಮ ನಡುವಲ್ಲೇ ಕಾಣಸಿಗುತ್ತದೆ. ಅಂತವರ ಸಾಲಿಗೆ ‘ಆಸಿಯಾನ್ ಫುಡ್ ಬ್ಯಾಂಕ್’ ಕೂಡ ಸೇರುತ್ತದೆ.

ಬೆಂಗಳೂರು (ಜ.25): ಹಸಿದ ಹೊಟ್ಟೆಗಳಿಗೆ ತುತ್ತು ಅನ್ನ ನೀಡುವುದು ಪುಣ್ಯದ ಕಾರ್ಯ. ಆ ನಿಟ್ಟಿನಲ್ಲಿ ಹಲವಾರು ಸಂಘ ಸಂಸ್ಥೆಗಳು ಪ್ರತಿಫಲದ ನಿರೀಕ್ಷೆ ಇಲ್ಲದೇ ದುಡಿಯುತ್ತಿರುವುದು ನಮ್ಮ ನಡುವಲ್ಲೇ ಕಾಣಸಿಗುತ್ತದೆ. ಅಂತವರ ಸಾಲಿಗೆ ‘ಆಸಿಯಾನ್ ಫುಡ್ ಬ್ಯಾಂಕ್’ ಕೂಡ ಸೇರುತ್ತದೆ.

ಸುಮಾರು ಹದಿನಾರು ಜನ ಸೇರಿಕೊಂಡು 1995 ರಲ್ಲೇ ‘ಆಲ್-ಆಮಾನ್’ ಎನ್ನುವ ಟ್ರಸ್ಟ್ ಆರಂಭಿಸುತ್ತಾರೆ. ಅಂದಿನಿಂದ ಇಂದಿನ ತನಕವೂ ತನ್ನ ಕೈಲಾದಷ್ಟು ಸೇವೆ ನೀಡುತ್ತಾ ಬಂದಿರುವ ಟ್ರಸ್ಟ್  ಸ್ಲಂಗಳಲ್ಲಿ ಹಲವಾರು ಆರೋಗ್ಯ ಕ್ಯಾಂಪ್‌ಗಳು, ಸ್ವಚ್ಚಾತಾ ಕಾರ್ಯಗಳನ್ನು ನಿಯಮಿತವಾಗಿ ಮಾಡುತ್ತಾ ಬರುತ್ತಿತ್ತು. ಇದೇ ಸಂದರ್ಭದಲ್ಲಿ ಸ್ಲಂನಲ್ಲಿನ ಬಡತನ, ಹಸಿವು, ಚಿಕ್ಕ ಮಕ್ಕಳ ಆಕ್ರಂದನಗಳನ್ನು ಕಣ್ಣಾರೆ ಕಂಡ ಟ್ರಸ್ಟಿಗಳು ಹಸಿದ ಹೊಟ್ಟೆಗೆ ತುತ್ತು ಅನ್ನ ಹಾಕಬೇಕು ಎನ್ನುವ ನಿರ್ಧಾರ ಮಾಡಿದರು. ಅದರಂತೆ 2010 ರಿಂದ ಹಸಿದವರಿಗೆ ಅನ್ನ ನೀಡಲು ಮುಂದಾದರು. ಅದರ ಫಲವಾಗಿಯೇ ಹುಟ್ಟಿಕೊಂಡದ್ದು ‘ಆಸಿಯಾನ ಫುಡ್ ಬ್ಯಾಂಕ್’

ದಿನಕ್ಕೆ ಐನೂರು ಮಂದಿಗೆ ಊಟ

ಬೆಂಗಳೂರಿನ ಶಿವಾಜಿ ನಗರದಲ್ಲಿ ಇರುವ ಎಚ್‌ಬಿಎಸ್ ಆಸ್ಪತ್ರೆಗೆ ಬರುವ ರೋಗಿಗಳು, ರೋಗಿಗಳ ಸಂಬಂಧಿಗಳಿಗೆ ನಿತ್ಯವೂ ಮೂರು ಹೊತ್ತು ಆಹಾರದ ಪೊಟ್ಟಣಗಳನ್ನು ನೀಡು ಕಾರ್ಯ ಮಾಡುತ್ತಿದೆ ಈ ಟ್ರಸ್ಟ್. ಸುಮಾರು ಐನೂರು ಮಂದಿನ ಒಂದು ಹೊತ್ತಿಗೆ ಇದರ ಉಪಯೋಗ ಪಡೆಯುತ್ತಾರೆ. ಅಂದರೆ ದಿನಕ್ಕೆ ಒಂದೂವರೆ ಸಾವಿರ ಆಹಾರದ ಪೊಟ್ಟಣಗಳನ್ನು ನೀಡುತ್ತಾರೆ. ಇದಲ್ಲದೇ ಮದುವೆ ಇನ್ನಿತರ ಸಮಾರಂಭಗಳಲ್ಲಿ ಉಳಿದ ಆಹಾರವನ್ನು ಸಂಗ್ರಹ ಮಾಡಿ ಕಿದ್ವಾಯಿ, ನಿಮಾನ್ಸ್ ಆಸ್ಪತ್ರೆಗಳಲ್ಲಿನ ರೋಗಿಗಳ ಸಂಬಂಧಿಕರಿಗೂ ನೀಡುವ ವ್ಯವಸ್ಥೆ ಮಾಡುತ್ತಿದೆ. ಇದಕ್ಕಾಗಿಯೇ ಎರಡು ಒಮಿನಿ ವ್ಯಾನ್‌ಗಳು ಮೂರ್ನಾಲ್ಕು ಮಂದಿ ಹುಡುಗರು ನಿತ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ.

ಥ್ಯಾಂಕ್ಸ್ ಹೇಳಿ

ಟ್ರಸ್ಟ್ ಕೇವಲ ಹಸಿದವರಿಗೆ ಅನ್ನವನ್ನು ಮಾತ್ರ ನೀಡುತ್ತಿಲ್ಲ. ಇದರ ಜೊತೆಯಲ್ಲೇ ದೇವನಹಳ್ಳಿ ತಾಲೂಕಿನಲ್ಲಿ ವೃದ್ಧಾಶ್ರಮವನ್ನೂ  ನಡೆಸುತ್ತಿದೆ. ಸುಮಾರು 50 ಕ್ಕೂ ಹೆಚ್ಚು ವೃದ್ಧರು ಆಶ್ರಮದಲ್ಲಿ ಇದ್ದು, ಇಂದಿಗೂ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಡಾ. ಮಹಮದ್ ಫಾರೂಕ್ ಅವರ ನೇತೃತ್ವದಲ್ಲಿ ಸೇವಾ ಕಾರ್ಯ ಮಾಡುತ್ತಿರುವ ಟ್ರಸ್ಟ್‌ನಲ್ಲಿ 16 ಮಂದಿ ಇದ್ದಾರೆ. ಎಲ್ಲರೂ ತಮ್ಮ ಸಂಪಾದನೆಯಲ್ಲಿ ಒಂದು ಭಾಗವನ್ನು ಸಮಾಜದ ಒಳಿತಿಗಾಗಿ  ಮೀಸಲಿಡಬೇಕು. ಅಸಹಾಯಕರಿಗೆ ಸೇವೆ ಮಾಡುವುದರಲ್ಲೇ ದೇವರನ್ನು ಕಾಣಬೇಕು ಎನ್ನುವ ಹಿನ್ನೆಲೆಯಲ್ಲಿ ಸೇವೆ ನೀಡುತ್ತಾ ಬರುತ್ತಿದೆ. ಇಂತಹ ನಿಸ್ವಾರ್ಥ ಮನಸ್ಸುಗಳ ಸಂಖ್ಯೆ ಅಧಿಕವಾಗಬೇಕು.

ಮಹಮದ್ ಫಾರೂಕ್ ಮತ್ತವರ ತಂಡಕ್ಕೆ ನಿಮ್ಮ ಕಡೆಯಿಂದಲೂ ಒಂದು ಧನ್ಯವಾದ ಇರಲಿ. ದೂ: 9740125500

 

loader