ಕೇಂದ್ರ ನಾಗರೀಕ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಟಿಎಂಸಿಯ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಅಲ್ಲದೇ ವಿಮಾನ ಪ್ರಯಾಣಿಕರ ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

ನವದೆಹಲಿ(ಡಿ.01): ಕೇಂದ್ರದ ನೋಟು ಅಮಾನ್ಯದ ವಿರುದ್ಧ ಮುಂಚೂಣಿ ಪಾತ್ರ ವಹಿಸಿ ಪ್ರತಿಭಟನೆಯಲ್ಲಿ ಸಕ್ರಿಯರಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜೀವ ಅಪಾಯದಲ್ಲಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

ನೋಟು ಅಮಾನ್ಯ ವಿರೋಧಿಸಿ ಬುಧವಾರ ಬಿಹಾರದಲ್ಲಿ ನಡೆದ ಸಮಾವೇಶದ ಬಳಿಕ ಮಮತಾ ಬ್ಯಾನರ್ಜಿ ಅವರು, ಕೋಲ್ಕತ್ತಾಗೆ ಇಂಡಿಗೊ ವಿಮಾನದಲ್ಲಿ ಹಿಂದಿರುಗುತ್ತಿದ್ದ ವೇಳೆ ಇಂಧನ ಕೊರತೆಯಿಂದಾಗಿ ತುರ್ತು ಭೂಸ್ಪರ್ಶ ಮಾಡಿತ್ತು. ಈ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರ ವಿಮಾನವನ್ನು ಅಗ್ನಿಶಾಮಕ ವಾಹನಗಳು ಮತ್ತು ಆ್ಯಂಬುಲೆನ್ಸ್‌ಗಳು ಸುತ್ತುವರಿದಿದ್ದವು.

ಈ ಬಗ್ಗೆ ಇಂದು ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡೊಪಾಧ್ಯಾಯ್, ‘‘ಮಮತಾ ಬ್ಯಾನರ್ಜಿ ಅವರು ಪ್ರಯಾಣಿಸುತ್ತಿದ್ದ ವಿಮಾನವು ಪತನಗೊಳ್ಳುವ ಹಾದಿಯಲ್ಲಿತ್ತು. ಇದು ಅವರ ಜೀವಕ್ಕೆ ಅಪಾಯವಿರುವುದನ್ನು ಸೂಚಿಸುತ್ತದೆ,’’ ಎಂದು ಹೇಳಿದರು. ಇದೇ ವಿಚಾರವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ತೃಣಮೂಲ ಸಂಸದ ಡಿರೆಕ್ ಒಬ್ರಿಯಾನ್, ‘‘ಮಮತಾ ಬ್ಯಾನರ್ಜಿ ಅವರ ವಿರುದ್ಧದ ಪಿತೂರಿ ಇದು,’’ ಎಂದು ದೂರಿದ್ದಾರೆ. ಆದರೆ, ಮುಖ್ಯಮಂತ್ರಿ ವಿರುದ್ಧ ಯಾವುದೇ ಷಡ್ಯಂತ್ರ ನಡೆದಿಲ್ಲ ಎಂದು ಭಾರತದ ಪೂರ್ವ ವಿಮಾನ ನಿಲ್ದಾಣಗಳ ಅಧಿಕಾರಿ ಸಂಜಯ್ ಜೈನ್ ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರ ನಾಗರೀಕ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಟಿಎಂಸಿಯ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಅಲ್ಲದೇ ವಿಮಾನ ಪ್ರಯಾಣಿಕರ ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಪ್ರಯಾಣಿಸುತ್ತಿದ್ದ ವಿಮಾನ ಸೇರಿದಂತೆ ಒಟ್ಟು 3 ವಿಮಾನಗಳು ತುರ್ತು ಭೂ ಸ್ಪರ್ಶ ಮಾಡಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಖಾತೆ ಸಚಿವ ಅಶೋಕ್ ಗಜಪತಿ ರಾಜು ತಿಳಿಸಿದ್ದಾರೆ.