ಮಕ್ಕಾದಿಂದ ಹಜ್ ಮುಗಿಸಿ ವಾಪಾಸು ಬರುವಾಗ ಯಾತ್ರಾರ್ಥಿಗಳು ತರುವ ಪವಿತ್ರ ಜಲಕ್ಕೆ ನಿರ್ಬಂಧ ಹೇರಿದ್ದ ಏರ್ ಇಂಡಿಯಾ; ವ್ಯಾಪಕ ಆಕ್ರೋಶದ ಹಿನ್ನೆಲೆಯಲ್ಲಿ ಸುತ್ತೋಲೆ ವಾಪಾಸ್
ನವದೆಹಲಿ (ಜು.09): ಪವಿತ್ರ ಹಜ್ ಯಾತ್ರೆ ಮುಗಿಸಿ ಮರಳುವಾಗ ಹಜ್ ಯಾತ್ರಿಗಳು ಮಕ್ಕಾದಿಂದ ತರುವ ಪವಿತ್ರ ಜಲಕ್ಕೆ ಹೇರಿದ್ದ ನಿರ್ಬಂಧವನ್ನು ಏರ್ ಇಂಡಿಯಾ ವಾಪಾಸು ಪಡೆದಿದೆ.
ತಮ್ಮಿಂದ ತಪ್ಪಾಗಿದೆ ಎಂದು ಟ್ವೀಟ್ ಮಾಡಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ, ಹಜ್ ಯಾತ್ರಿಗಳ ಕ್ಷಮೆ ಕೇಳಿದೆ.
ಮುಸ್ಲಿಮರ ಹಜ್ ಯಾತ್ರೆ ಆರಂಭವಾಗಿದ್ದು, ಹಾಜಿಗಳು (ಹಜ್ ನಿರ್ವಹಿಸಿದವರು) ವಾಪಾಸು ಬರುವಾಗ ಮಕ್ಕಾದಿಂದ ಝಂಝಂ ಎಂಬ ಪವಿತ್ರ ಜಲ ತರುವುದು ವಾಡಿಕೆ.
ಆದರೆ ಕೆಲದಿನಗಳ ಹಿಂದೆ, ವಿಮಾನದ ಬದಲಾವಣೆ ಹಾಗೂ ಸೀಟು ವ್ಯವಸ್ಥೆಯ ನೆಪವೊಡ್ಡಿ ಏರ್ ಇಂಡಿಯಾದಲ್ಲಿ ಝಂಝಂ ನೀರು ತರುವುದನ್ನು ನಿಷೇಧಿಸಿ ಸಂಸ್ಥೆಯು ಸುತ್ತೋಲೆ ಹೊರಡಿಸಿತ್ತು.
ಏರ್ ಇಂಡಿಯಾ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಏರ್ ಇಂಡಿಯಾ ತನ್ನ ನಿಲುವನ್ನು ಬದಲಿಸಿದೆ.
ಸುಮಾರು ಐದು ಸಾವಿರ ವರ್ಷಗಳ ಹಿಂದೆ ಪ್ರವಾದಿ ಇಬ್ರಾಹಿಂ ಪತ್ನಿ ಹಾಜಿರಾ ತನ್ನ ಮಗುವಿಗಾಗಿ ಅರೇಬಿಯಾದ ಮರುಭೂಮಿಯಲ್ಲಿ ನೀರು ಹುಡುಕುತ್ತಿದ್ದಾಗ ಉದ್ಭವವಾದ ನೀರಿನ ಚಿಲುಮೆಯೇ ಝಂ ಝಂ. ಈಗಲೂ ಹರಿವಿನಲ್ಲಿ ಯಾವುದೇ ಕೊರತೆಯಿಲ್ಲದೇ, ಕೋಟ್ಯಂತರ ಮಂದಿಯ ನೀರಡಿಕೆಯನ್ನು ತಣಿಸುತ್ತಿದೆ. ಮುಸ್ಲಿಮರು ಇದನ್ನು ಪವಿತ್ರ ಜಲವೆಂದು ನಂಬುತ್ತಾರೆ.
