ನವದೆಹಲಿ(ಏ.08): ಭಾರತ ಎಫ್-16 ವಿಮಾನವನ್ನು ಹೊಡೆದುರುಳಿಸಿಲ್ಲ ಎಂದು ಅಮೆರಿಕದ ಫಾರಿನ್ ಪಾಲಿಸಿ ಮ್ಯಾಗಜಿನ್ ನಲ್ಲಿ ವರದಿ ಪ್ರಕಟವಾದ ಎರಡೇ ದಿನದಲ್ಲಿ, ಎಫ್-16 ವಿಮಾನ ಹೊಡೆದುರುಳಿಸಿದ ಬಗ್ಗೆ ಭಾರತೀಯ ವಾಯುಸೇನೆ ಸಾಕ್ಷಿ ಒದಗಿಸಿದೆ.

ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಏರ್ ವೈಸ್ ಮಾಷರ್ಲ್ RGK ಕಪೂರ್, ವಿಂಗ್ ಕಮಾಂಡರ್ ಅಭಿನಂದನ್ ಮತ್ತು ಪಾಕ್ ಎಫ್-16 ಯುದ್ಧ ವಿಮಾನ ಮುಖಾಮುಖಿಯಾದ ಕುರಿತು ರೆಡಾರ್ ಫೋಟೋಗಳನ್ನು ಬಿಡುಗಡೆ ಮಾಡಿದರು.

ಫೆ.27ರಂದು ಪಾಕ್ ಎಫ್-16 ಯುದ್ಧ ವಿಮಾನ ಮುನ್ನುಗ್ಗುತ್ತಿರುವುದನ್ನು ಗಮನಿಸಿದ ವಿಂಗ್ ಕಮಾಂಡರ್ ಅಭಿನಂದನ್, ತಮ್ಮ ಮಿಗ್-21 ಯುದ್ಧ ವಿಮಾನವೇರಿ ಬೆನ್ನಟ್ಟಿದ್ದರು. ಆ ನಂತರ ನಡೆದ ಮುಖಾಮುಖಿಯಲ್ಲಿ ಎರಡೂ ಯುದ್ಧ ವಿಮಾನಗಳು ಪತನಗೊಂಡು ಅಭಿನಂದನ್ ಪಾಕ್ ಸೈನಿಕರ ವಶವಾದರು ಎಂದು ಕಪೂರ್ ಮಾಹಿತಿ ನೀಡಿದ್ದಾರೆ.

ಅಭಿನಂದನ್ ಹೊಡೆದುರುಳಿಸಿದ್ದು ಎಫ್-16 ಯುದ್ಧ ವಿಮಾನ ಎಂಬುದಕ್ಕೆ ಸಾಕಷ್ಟು ಪುರಾವೆಗಳಿದ್ದು, ರೆಡಾರ್ ಫೋಟೋಗಳನ್ನು ಕಪೂರ್ ಪ್ರಸ್ತುತಪಡಿಸಿದರು.