ನವದೆಹಲಿ :  ಕಪ್ಪುಕುಳಗಳ ಸ್ವರ್ಗ ಎಂದೇ ಬಿಂಬಿತವಾಗಿರುವ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಹೊಂದಿರುವ ಹಣದ ಪ್ರಮಾಣ 2017ನೇ ಸಾಲಿನಲ್ಲಿ ಶೇ.50ರಷ್ಟುಹೆಚ್ಚಾಗಿ 7000 ಕೋಟಿ ರು.ಗೆ ತಲುಪಿದೆ ಎಂಬ ವರದಿಯನ್ನಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಚಾಟಿ ಬೀಸಿದ್ದಾರೆ.

2014ರಲ್ಲಿ ಮೋದಿ ಹೇಳಿದ್ದರು: ಸ್ವಿಸ್‌ ಬ್ಯಾಂಕುಗಳಿಂದ ಎಲ್ಲ ಕಪ್ಪು ಹಣ ತಂದು ಪ್ರತಿಯೊಬ್ಬರ ಭಾರತೀಯರ ಖಾತೆಗೆ 15 ಲಕ್ಷ ರು. ಹಾಕುವೆ. 2016ರಲ್ಲಿ ಅವರು ಹೇಳಿದ್ದರು: ಕಪ್ಪು ಹಣ ಸಮಸ್ಯೆಯನ್ನು ಅಪನಗದೀಕರಣ ನಿವಾರಿಸಲಿದೆ. 2018ರಲ್ಲಿ ಹೇಳುತ್ತಿದ್ದಾರೆ: ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರ ಠೇವಣಿ ಶೇ.50ರಷ್ಟುಏರಿಕೆಯಾಗಿದೆ. ಅದು ಸಂಪೂರ್ಣ ಬಿಳಿ ಹಣ. ಸ್ವಿಸ್‌ ಬ್ಯಾಂಕಿನಲ್ಲಿ ಕಪ್ಪು ಹಣವೇ ಇಲ್ಲ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್‌ ಕೂಡ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದೆ. ಮನಮೋಹನ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರ ಠೇವಣಿ ಕುಸಿತವಾಗಿತ್ತು. ಮೋದಿ ಅವರ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಶೇ.50.2ರಷ್ಟುಏರಿಕೆಯಾಗಿರುವುದು 2004ರ ನಂತರ ಇದೇ ಮೊದಲು. ವಿದೇಶದಲ್ಲಿರುವ 80 ಲಕ್ಷ ಕೋಟಿ ರು. ಕಪ್ಪು ಹಣ ತಂದು ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ 15 ಲಕ್ಷ ರು. ಹಾಕುವ ಭರವಸೆ ಏನಾಯ್ತು ಎಂದು ಕಾಂಗ್ರೆಸ್‌ ವಕ್ತಾರ ಆರ್‌ಪಿಎನ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.