ಸ್ವಯಂಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಪಂಗಡದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು ಶುಕ್ರವಾರ ಪ್ರಕಟವಾಗಲಿದ್ದು, ಪಂಜಾಬ್ ಹಾಗೂ ಹರ್ಯಾಯಾಣದಲ್ಲಿ ಹಿಂಸಾಚಾರದ ಭೀತಿ ಆವರಿಸಿದೆ. ವಿರುದ್ಧ ತೀರ್ಪು ಪ್ರಕಟವಾದರೆ ರಾಮ್ ರಹೀಂ ಸಿಂಗ್ ಭಕ್ತರು ಭಾರೀ ಹಿಂಸಾಚಾರಕ್ಕೆ ಇಳಿಯಬಹುದು ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ.

ಚಂಡೀಗಢ(ಆ.24): ಸ್ವಯಂಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಪಂಗಡದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು ಶುಕ್ರವಾರ ಪ್ರಕಟವಾಗಲಿದ್ದು, ಪಂಜಾಬ್ ಹಾಗೂ ಹರ್ಯಾಯಾಣದಲ್ಲಿ ಹಿಂಸಾಚಾರದ ಭೀತಿ ಆವರಿಸಿದೆ. ವಿರುದ್ಧ ತೀರ್ಪು ಪ್ರಕಟವಾದರೆ ರಾಮ್ ರಹೀಂ ಸಿಂಗ್ ಭಕ್ತರು ಭಾರೀ ಹಿಂಸಾಚಾರಕ್ಕೆ ಇಳಿಯಬಹುದು ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಈಗಾಗಲೇ 50 ಸಾವಿರ ಭಕ್ತರು ತೀರ್ಪು ಪ್ರಕಟಗೊಳ್ಳುವ ಹರ್ಯಾಣದ ಪಂಚಕುಲಕ್ಕೆ ಆಗಮಿಸಿ, ಬೀಡುಬಿಟ್ಟಿದ್ದಾರೆ. ಶುಕ್ರವಾರ ಈ ಸಂಖ್ಯೆ 10 ಲಕ್ಷಕ್ಕೆ ತಲುಪಬಹುದು ಎಂಬ ದೃಷ್ಟಿಯಿಂದ ಹರ್ಯಾಣ ಹಾಗೂ ಪಂಜಾಬ್‌'ನಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಕೇಂದ್ರದಿಂದಲೂ ಅರೆಸೇನಾ ಪಡೆಗಳನ್ನು ಕರೆಸಿಕೊಳ್ಳಲಾಗಿದೆ. ಎರಡೂ ರಾಜ್ಯಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪಂಚಕುಲದಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಇಬ್ಬರು ಸಾಧ್ವಿಗಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪ ಸಂಬಂಧ 2002ರಲ್ಲಿ ರಾಮ್ ರಹೀಂ ಸಿಂಗ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. 2007ರಲ್ಲಿ ವಿಚಾರಣೆ ಪ್ರಾರಂಭವಾಗಿತ್ತು. ಅತ್ಯಾಚಾರವಷ್ಟೇ ಅಲ್ಲದೆ, ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲೂ ಸಿಂಗ್ ಆರೋಪಿಯಾಗಿದ್ದಾರೆ. ಆ.25ರ ಶುಕ್ರವಾರ ಪಂಚಕುಲದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ರಾಮ್ ರಹೀಂ ಸಿಂಗ್ ಕೋರ್ಟ್ ಸಿಂಗ್‌ವಿರುದ್ಧ ತೀರ್ಪು ಪ್ರಕಟಿಸಲಿದ್ದು, ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ತಾಕೀತು ಮಾಡಿದೆ. ಒಂದು ವೇಳೆ ರಾಮ್ ರಹೀಂ ಸಿಂಗ್ ವಿರುದ್ಧ ತೀರ್ಪು ಬಂದರೆ ಘನಘೋರ ಹಿಂಸಾಚಾರ ನಡೆಯುವ ಸಾಧ್ಯತೆ ಇದೆ. ಇದನ್ನು ಅರಿತಿರುವ ಪೊಲೀಸರು, ರಹೀಂ ಆಶ್ರಮದ ಕೇಂದ್ರ ಕಚೇರಿ ಇರುವ ಸಿರ್ಸಾ, ತೇಹಾಬಾದ್, ಪಂಚಕುಲ ಜಿಲ್ಲೆಗಳಾದ್ಯಂತ ಭಾರಿ ಬಂದೋಬಸ್ತ್ ಮಾಡಿದ್ದಾರೆ.