ಹೈಕಮಾಂಡ್ ಅವರ ಪರ ಇಲ್ಲ ಎಂದೂ ಹೇಳಿಲ್ಲ. ನನ್ನ, ಸಿಎಂ ನಡುವೆ ಒಂದು ಒಪ್ಪಂದವಾಗಿದೆ. ಆ ಒಪ್ಪಂದದ ಪ್ರಕಾರ ನಾನು ನಡೆಯುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಅಂಕೋಲಾ (ಡಿ.20): ನನ್ನ, ಸಿಎಂ ನಡುವೆ ಒಂದು ಒಪ್ಪಂದವಾಗಿದೆ. ಆ ಒಪ್ಪಂದದ ಪ್ರಕಾರ ನಾನು ನಡೆಯುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ತಾಲೂಕಿನ ಆಂದ್ಲೆಯಲ್ಲಿ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ನಮ್ಮ ಮಧ್ಯೆ ಎರಡೂವರೆ ವರ್ಷದ ಒಪ್ಪಂದ ಆಗಿಲ್ಲ ಎಂಬ ಸಿಎಂ ಹೇಳಿಕೆ ಬಗ್ಗೆ ಕೇಳಿದಾಗ, ಅವರು ಐದು ವರ್ಷ ಇರಲ್ಲ ಎಂದು ನಾನು ಯಾವತ್ತೂ ಹೇಳಿಲ್ಲ.
ಹೈಕಮಾಂಡ್ ಅವರ ಪರ ಇಲ್ಲ ಎಂದೂ ಹೇಳಿಲ್ಲ. ಹೈಕಮಾಂಡ್ ಅವರ ಪರ ಇರುವುದಕ್ಕೆ ಅವರು ರಾಜ್ಯದ ಸಿಎಂ ಆಗಿದ್ದಾರೆ ಎಂದರು. ಸಿಎಂ ಬದಲಾವಣೆ ಆಗುವುದಿಲ್ಲವೇ ಎಂದು ಕೇಳಿದಾಗ, ನೀವು ಆ ಬಗ್ಗೆ ಚರ್ಚೆ ಮಾಡುತ್ತಿದ್ದೀರಿ. ನಮ್ಮಲ್ಲಿ ಅದು ಇಲ್ಲ. ಪಕ್ಷ ಹೇಳಿದಂತೆ ನಾವು ಕೇಳುತ್ತೇವೆ ಎಂದರು. ಕಳೆದ ಬಾರಿ ಬಂದಾಗ ನಿಮ್ಮ ಇಷ್ಟಾರ್ಥ ಸಿದ್ಧಿಯಾಗಿತ್ತು ಎಂದು ಹೇಳಿದ್ದೀರಿ, ಈ ಬಾರಿಯೂ ಆಗುವುದೇ ಎಂದು ಕೇಳಿದಾಗ, ಅದೆಲ್ಲವನ್ನು ನಾನು ಹೇಳುವುದಿಲ್ಲ. ಇದು ನನ್ನ ಹಾಗೂ ಆ ತಾಯಿ ಮಧ್ಯೆ ಇರುವ ವಿಚಾರ. ಭಕ್ತ ಹಾಗೂ ಭಗವಂತನ ನಡುವಣ ವಿಚಾರ.
ವಿಘ್ನ ನಿವಾರಕ ವಿಘ್ನೇಶ್ವರನ ದರ್ಶನ ಪಡೆದಿದ್ದೇನೆ. ಮಹಾಬಲೇಶ್ವರನಿಗೆ ಪೂಜೆ ಮಾಡಿದ್ದೇನೆ, ಗಂಗಾಧರೇಶ್ವರನಿಗೆ ಪ್ರಾರ್ಥನೆ ಮಾಡಿದ್ದೇನೆ ಎಂದರು. ಇಂದು ಗೋಕರ್ಣಕ್ಕೆ ಬಂದಿದ್ದು ದೇವರ ದರ್ಶನ ಭಾಗ್ಯ ನನಗೆ ಸಿಕ್ಕಿದೆ. ಐದು ವರ್ಷಗಳ ಹಿಂದೆ ಆಂದ್ಲೆ ಜಗದೇಶ್ವರಿ ತಾಯಿಯ ಬಳಿಗೆ ಬಂದು, ನಮ್ಮ ಕುಟುಂಬದ ವಿಚಾರವಾಗಿ ಪ್ರಾರ್ಥನೆ ಮಾಡಿದ್ದೆ. ಮತ್ತೆ ಇಲ್ಲಿಗೆ ಬರುವುದಾಗಿ ಪ್ರಾರ್ಥಿಸಿದ್ದೆ. ಅದರಂತೆ ಬಂದು ಜಗದೇಶ್ವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಮಾಡು ತಾಯಿ ಎಂದು ಪ್ರಾರ್ಥನೆ ಮಾಡಿರುವೆ. ನನಗೆ ಹಾಗೂ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿರುವೆ. ಹಸನ್ಮುಖಿಯಾಗಿ ಇಲ್ಲಿಂದ ತೆರಳುತ್ತಿದ್ದೇನೆ ಎಂದು ಹೇಳಿದರು.
ಸಾಗರ ಜಿಲ್ಲೆಗೆ ಒತ್ತಾಯ: ಪರಿಶೀಲಿಸಿ ಕ್ರಮ
ಬೆಳಗಾವಿಯಲ್ಲಿ ನಡೆಯುತ್ತಿದ್ದ ಚಳಿಗಾಲದ ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ಸಾಗರ ವಿಭಾಗೀಯ ಕೇಂದ್ರವನ್ನು ಸಾಗರ ಜಿಲ್ಲೆಯಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಸಾಗರ ಜಿಲ್ಲಾ ಹೋರಾಟ ಸಮಿತಿ ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ಸಂದರ್ಭ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಾಗರ ನೂತನ ಜಿಲ್ಲೆ ಆಗಬೇಕೆಂದು 12 ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ. ಇದರ ನಡುವೆ ಶಿಕಾರಿಪುರ ನೂತನ ಜಿಲ್ಲೆ ಆಗಬೇಕು ಎಂಬ ಬಗ್ಗೆ ಈ ಹಿಂದೆ ಯಡಿಯೂರಪ್ಪನವರು ಪ್ರಯತ್ನಿಸಿದ್ದರು. ಸಾಗರ ಜಿಲ್ಲೆಗೆ ಒತ್ತಾಯಿಸಿ ಡಿ.17ರಂದು ಸಾಗರ ಬಂದ್‌ಗೆ ಕರೆ ನೀಡಿದ್ದು ಸಂಪೂರ್ಣ ಯಶಸ್ವಿಯಾಗಿದೆ. ಇಲ್ಲಯ ಜನತೆ ಸಾಗರ ನೂತನ ಜಿಲ್ಲೆ ಆಗಬೇಕೆಂದು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂದು ಡಿಸಿಎಂ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು ತಾಲೂಕುಗಳಿವೆ ಎಂದು ಪ್ರಶ್ನಿಸಿ, ೮ ತಾಲೂಕುಗಳಿವೆ ಎಂಬ ಮಾಹಿತಿ ಪಡೆದುಕೊಂಡರು. ಬಳಿಕ ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಸಕಾರಾತ್ಮಕವಾಗಿ ಸ್ಪಂದಿಸಿದರು. ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿ, ಸಾಗರ ಜಿಲ್ಲೆಯಾಗುವುದು ಸೂಕ್ತವಿದೆ. ಸೊರಬ, ಶಿಕಾರಿಪುರ, ಹೊಸನಗರ, ಸಾಗರದ ಜೊತೆಗೆ ಸಿದ್ದಾಪುರ ಮತ್ತು ತೀರ್ಥಹಳ್ಳಿ ತಾಲೂಕುಗಳ ಕುರಿತು ಚಿಂತನೆ ಮಾಡೋಣ. ಮೊದಲು ಜನಪ್ರತಿನಿಧಿಗಳು ನಾವು ಸಕಾರಾತ್ಮಕವಾಗಿ ಸಮಾಲೋಚಿಸಿ ಯಾವ ಯಾವ ತಾಲೂಕುಗಳು ಸೇರಿದರೆ ಉತ್ತಮ ಎಂದು ಪರಿಶೀಲಿಸಿ, ನಿರ್ಣಯ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.


