ನವದೆಹಲಿ(ಸೆ.19): ರಾಜ್ಯದಲ್ಲಿ ಕುಡಿಯಲು ನೀರಿಲ್ಲ ಎಂಬ ವಾದಕ್ಕೆ ಕಾವೇರಿ ಮೇಲುಸ್ತುವಾರಿ ಸಮಿತಿ ಮನ್ನಣೆ ನೀಡದ ಕಾರಣ ಕರ್ನಾಟಕಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಸಮಿತಿ ನೀಡಿರುವ ಆದೇಶದ ಪ್ರಕಾರ ಕರ್ನಾಟಕವು ತಮಿಳುನಾಡಿಗೆ 10 ದಿನಗಳ ಕಾಲ 3 ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕು. ಅಂದರೆ ಸೆಪ್ಟೆಂಬರ್ 21 ರಿಂದ 30 ರತನಕ ನೀರು ಬಿಡಬೇಕು.

ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಶಶಿಶೇಖರ್ ನೇತೃತ್ವದ ಸಮಿತಿ ಕರ್ನಾಟಕ ಅಂಕಿಅಂಶಗಳು ಹಾಗೂ ರಾಜ್ಯದಲ್ಲಿರುವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಿಲ್ಲ. ಸಭೆಯ ನಂತರ ಮಾತನಾಡಿದ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಶಶಿಶೇಖರ್​ ‘ತಮಿಳುನಾಡಿಗೆ ಕರ್ನಾಟಕ ರಾಜ್ಯವು ನೀರು ಬಿಡುವುದಕ್ಕೆ ಒಪ್ಪಿಕೊಂಡಿದೆ. ಸುಪ್ರೀಂಕೋರ್ಟ್​ಗೆ ಯಾವುದೇ ವರದಿ ಸಲ್ಲಿಸುವುದಿಲ್ಲ. ಸಭೆ ನಡೆಸಿ ನಿರ್ಣಯ ಕೈಗೊಳ್ಳುವಂತೆ ಸುಪ್ರೀಂ ಸೂಚಿಸಿತ್ತು. ನಾವು ಸುಪ್ರೀಂಕೋರ್ಟ್​ ಆದೇಶ ಪಾಲಿಸಿದ್ದೇವೆ. ಅಕ್ಟೋಬರ್​ನಲ್ಲಿ ಮತ್ತೆ ಮೇಲುಸ್ತುವಾರಿ ಸಮಿತಿ ಸಭೆ ನಡೆಯಲಿದೆ’ ಎಂದು ತಿಳಿಸಿದ್ದಾರೆ.

ಖಾಲಿಯಾಗಿದೆ ಕೆಆರ್’ಎಸ್

ಈಗಾಗಲೇ ಸುಪ್ರೀಂ ಕೋರ್ಟ್ ಆದೇಶದ ನಂತರ ತಮಿಳುನಾಡಿಗೆ 8 ಟಿಎಂಸಿ ನೀರು ಹರಿದಿದೆ. 124.80 ಅಡಿ ಗರಿಷ್ಠ ಸಾಮರ್ಥ್ಯದ ಕೆಆರ್​​​​ಎಸ್’ನಲ್ಲಿ ಪ್ರಸ್ತುತ ನೀರಿನ ಮಟ್ಟ 83 ಅಡಿಗೆ ಕುಸಿದಿದೆ. ಸುಪ್ರೀಂ ಆದೇಶದ ವೇಳೆ ಕೆಆರ್‌ಎಸ್‌ ಡ್ಯಾಂನಲ್ಲಿ 20 ಟಿಎಂಸಿ ನೀರಿತ್ತು. ಈಗ ಜಲಾಶಯದಲ್ಲಿ ಉಳಿದಿರುವುದು 12 ಟಿಎಂಸಿ ನೀರು ಮಾತ್ರ.

ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದಲ್ಲಿ 18 ಸಾವಿರ ಹೆಕ್ಟೇರ್‌ನಷ್ಟು ಕಬ್ಬು ಬೆಳೆಯಿದೆ. ಸುಮಾರು 20 ಸಾವಿರ ಹೆಕ್ಟೇರ್‌ಗೆ ಸಸಿ ಮಡಿ ಸಿದ್ಧವಾಗಿತ್ತಾದರೂ ರೈತರು ನಾಟಿ ಕಾರ್ಯವನ್ನು ಕೈಬಿಟ್ಟಿದ್ದಾರೆ. ಇಂದಿನ ಆದೇಶದಿಂದ ಪರಿಸ್ಥಿತಿ ಇನ್ನೂ ಕಠಿಣವಾಗಲಿದೆ.

ಮಂಡ್ಯದಲ್ಲಿ ಮತ್ತೆ ಭುಗಿಲೆದ್ದ ಆಕ್ರೋಶ

ಕಾವೇರಿ ಮೇಲುಸ್ತುವಾರಿ ಸಭೆ ಖಂಡಿಸಿ ರೈತರು, ಕನ್ನಡ ಪರ ಸಂಘಟನೆಗಳು ಮಂಡ್ಯದ ಬೆಂಗಳೂರು - ಮೈಸೂರು ಹೆದ್ದಾರಿ ಹಾಗೂ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.