ಶಾಸಕ ಸ್ಥಾನಕ್ಕೆ ಮಾಲೀಕಯ್ಯ ರಾಜೀನಾಮೆ ಅಂಗೀಕಾರ

First Published 6, Apr 2018, 8:34 AM IST
Afzalpur MLA Guttedar Resigns
Highlights

ಕಲಬುರಗಿ ಜಿಲ್ಲೆಯ ಅಫ್ಜಲ್‌ಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಮಾಲಿಕಯ್ಯ ಗುತ್ತೇದಾರ್‌ ಅವರು ನಗರದಲ್ಲಿ ಗುರುವಾರ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರನ್ನು ಭೇಟಿಯಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆಯನ್ನು ಸ್ಪೀಕರ್‌ ಅವರು ತಕ್ಷಣವೇ ಅಂಗೀಕರಿಸಿದರು.

ರಾಣೆಬೆನ್ನೂರು : ಕಲಬುರಗಿ ಜಿಲ್ಲೆಯ ಅಫ್ಜಲ್‌ಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಮಾಲಿಕಯ್ಯ ಗುತ್ತೇದಾರ್‌ ಅವರು ನಗರದಲ್ಲಿ ಗುರುವಾರ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರನ್ನು ಭೇಟಿಯಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆಯನ್ನು ಸ್ಪೀಕರ್‌ ಅವರು ತಕ್ಷಣವೇ ಅಂಗೀಕರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುತ್ತೇದಾರ್‌, ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಪಕ್ಷವನ್ನು ತಮ್ಮ ಸ್ವಂತ ಆಸ್ತಿ ಎಂಬಂತೆ ಮಾಡಿಕೊಂಡಿದ್ದಾರೆ. ಮೊದಲ ಬಾರಿಗೆ ಶಾಸಕರಾದ ತಮ್ಮ ಪುತ್ರನನ್ನು ಸಚಿವರನ್ನಾಗಿ ಮಾಡಿದರು. ಈ ಎಲ್ಲ ವಿದ್ಯಮಾನಗಳಿಂದ ಬೇಸತ್ತು ಸ್ವಾಭಿಮಾನಿಯಾದ ನಾನು ಕಾಂಗ್ರೆಸ್‌ ಪಕ್ಷ ತೊರೆಯುತ್ತಿದ್ದೇನೆ. ಕಲಬುರಗಿ ಜಿಲ್ಲೆಯ ರಾಜಕೀಯ ದೃಷ್ಟಿಯಿಂದ ರಾಷ್ಟ್ರೀಯ ಪಕ್ಷದಲ್ಲಿದ್ದರೆ ಉತ್ತಮ ಎಂಬ ಚಿಂತನೆ ಹಾಗೂ ಪ್ರಧಾನಿ ಮೋದಿ ದೇಶವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುತ್ತಿರುವುದನ್ನು ಮನಗಂಡು ಬಿಜೆಪಿ ಸೇರಲು ಉತ್ಸುಕನಾಗಿದ್ದೇನೆ. ಏ.7 ಅಥವಾ 8ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ತಮ್ಮ ರಾಜಕೀಯ ಹಿರಿತನಕ್ಕೆ ಬೆಲೆ ಕೊಡದೆ ಸಚಿವ ಸ್ಥಾನ ನೀಡದೆ ಅಗೌರವದಿಂದ ನಡೆಸಿಕೊಳ್ಳಲಾಯಿತು. ನನ್ನ ರಾಜಕೀಯ ಜೀವನದಲ್ಲಿ ಒಂದು ಕಪ್ಪುಚುಕ್ಕೆಯೂ ಇಲ್ಲ. 2008ರಲ್ಲಿ ರಾಜ್ಯದಲ್ಲಿ ಆಪರೇಷನ್‌ ಕಮಲ ನಡೆದಾಗ ನಾನು ಅದಕ್ಕೆ ಬಲಿಯಾಗದೆ ಪಕ್ಷ ನಿಷ್ಠೆ ತೋರಿದ್ದಕ್ಕೆ ಯಾವುದೇ ಬೆಲೆ ಸಿಗಲಿಲ್ಲ. 2001ರಿಂದ ಕಾಂಗ್ರೆಸ್‌ನಲ್ಲಿದ್ದರೂ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಜೆಡಿಎಸ್‌ನಲ್ಲಿದ್ದಾಗ ದೇವೇಗೌಡರು ಚೆನ್ನಾಗಿ ನೋಡಿಕೊಂಡರು. ಈಗಲೂ ಅವರ ಜತೆ ಉತ್ತಮ ಬಾಂಧವ್ಯವಿದೆ. ಅಲ್ಲಿ ಸಚಿವನಾಗಿದ್ದರೂ, ಕಾಂಗ್ರೆಸ್‌ನಲ್ಲಿ ಸಚಿವನಾಗಲಿಲ್ಲ ಎಂದರು.

ಬಿಜೆಪಿಯಲ್ಲಿ ಸಚಿವ ಸ್ಥಾನ ದೊರೆಯುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಗಲಿ ಅಥವಾ ಸಿಗದಿರಲಿ ಗೌರವದಿಂದ ನಡೆಸಿಕೊಳ್ಳುತ್ತಾರೆ ಎಂಬ ಆಶಾಭಾವನೆ ಇದೆ. ದೇಶದಲ್ಲಿ ಕಾಂಗ್ರೆಸ್‌ ಮುಕ್ತವಾಗಿಸಲು ಪಣ ತೊಟ್ಟಿರುವ ಪ್ರಧಾನಿ ಮೋದಿ ಅವರ ಇಚ್ಛೆಯಂತೆ ರಾಜ್ಯದಲ್ಲೂ ಕಾಂಗ್ರೆಸ್‌ ಮುಕ್ತ ಮಾಡಲು ಅವರ ಜೊತೆಗೆ ಕೈ ಜೋಡಿಸುತ್ತೇನೆ. ಈ ಬಾರಿಯ ಹೈದರಾಬಾದ್‌-ಕರ್ನಾಟಕದ ಕಲ್ಬುರ್ಗಿ, ರಾಯಚೂರ, ಕೊಪ್ಪಳ, ಬೀದರ್‌ ಜಿಲ್ಲೆಗಳಲ್ಲಿ 14-15 ಸ್ಥಾನಗಳಲ್ಲಿ ಬಿಜೆಪಿ ಜಯಸಾಧಿಸುವಂತೆ ಮಾಡುತ್ತೇನೆ ಎಂದರು.

loader