ಈತ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾನೆಂದು ಭಾವಿಸಿ ಕೆಳಗೆ ಇಳಿಯುವಂತೆ ಕೂಗಿದ್ದಾರೆ. ಆತ ಯಾವುದೇ ಪ್ರತಿಕ್ರಿಯೆ ನೀಡದೇ ಕೊಂಬೆಯಿಂದ ಕೊಂಬೆ ಏರಿದ್ದಾನೆ.

ಬೆಂಗಳೂರು(ನ.17):ಕೋರಮಂಗಲದ ಫೋರಂ ಮಾಲ್ ಬಳಿಯ ಸರ್ವೀಸ್ ರಸ್ತೆಯಲ್ಲಿ ವ್ಯಕ್ತಿಯೊಬ್ಬ ರಸ್ತೆಬದಿಯ ಮರ ಏರಿ ಸುಮಾರು 3 ತಾಸಿಗೂ ಹೆಚ್ಚು ಸಮಯ ಆತಂಕ ಉಂಟು ಮಾಡಿದ ಪ್ರಸಂಗ ಬುಧವಾರ ರಾತ್ರಿ ನಡೆಯಿತು. ಕೊನೆಗೆ ಜನರ ಗುಂಪಿನ ಮೇಲೆ ಜಿಗಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮರ ಏರಿದಾತ ರಾಯಚೂರು ಜಿಲ್ಲೆ ರಘುನಾಥನಹಳ್ಳಿ ನಿವಾಸಿ ಸೋಮಶೇಖರ್ (24) ಎಂದು ಗುರುತಿಸಲಾಗಿದೆ. ಈತ ರಾತ್ರಿ 7ರ ಸುಮಾರಿಗೆ ಏಕಾಏಕಿ ಮರ ಏರಿ ನಿಂತ್ತಿದ್ದಾನೆ. ಬನಿಯನ್, ಪ್ಯಾಂಟ್ ಧರಿಸಿದ್ದ ಈತ ಮರ ಏರಿರುವುದನ್ನು ಕಂಡ ಸಾರ್ವಜನಿಕರು, ಈತ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾನೆಂದು ಭಾವಿಸಿ ಕೆಳಗೆ ಇಳಿಯುವಂತೆ ಕೂಗಿದ್ದಾರೆ. ಆತ ಯಾವುದೇ ಪ್ರತಿಕ್ರಿಯೆ ನೀಡದೇ ಕೊಂಬೆಯಿಂದ ಕೊಂಬೆ ಏರಿದ್ದಾನೆ. ಇದರಿಂದ ಗಾಬರಿಗೊಂಡ ಸಾರ್ವಜನಿಕರು, ಪೊಲೀಸರು ಹಾಗೂ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ವಿಷಯ ಮುಟ್ಟಿಸಿದ್ದಾರೆ.

ವಿಷಯ ತಿಳಿದು ನೂರಾರು ಸ್ಥಳದಲ್ಲಿ ಗುಂಪುಗೂಡಿದ್ದರು. ಅಷ್ಟರಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಕೆಳಗೆ ಇಳಿಯುವಂತೆ ಮನವಿ ಮಾಡಿದ್ದಾರೆ. ಆಗಲೂ ಯಾವುದೇ ಪ್ರತಿಕ್ರಿಯೆ ನೀಡದ ಸೋಮಶೇಖರ್, ಮರದಲ್ಲಿ ಎತ್ತರದ ಕೊಂಬೆ ಏರಲು ಆರಂಭಿಸಿದ್ದಾನೆ. ‘ಮೇಲೆ ಹೋಗ ಬೇಡ. ಕೆಳಗೆ ಇಳಿ. ಏನು ನಿನ್ನ ಸಮಸ್ಯೆ? ನಿನ್ನ ಹೆಸರೇನು?’ ಎಂದು ಪೊಲೀಸರು ನಿರಂತರವಾಗಿ ಆತನನ್ನು ಪ್ರಶ್ನಿಸಲು ಆರಂಭಿಸಿದ್ದಾರೆ. ಆತ ಯಾವುದಕ್ಕೂ ಪ್ರತಿಕ್ರಿಯಿಸದೆ ಕೊಂಬೆ ಮೇಲೆ ನಿಂತಿದ್ದ. ಈ ನಡುವೆ ಜನ ಹಾಗೂ ಪೊಲೀಸರು ಆತನ ಮನವೊಲಿಸಲು ನಡೆಸಿದ ಪ್ರಯತ್ನ ವಿಲವಾಗಿದೆ.

ಪರಿಸ್ಥಿತಿ ಕೈ ಮೀರುವುದನ್ನು ಅರಿತ ಅಗ್ನಿಶಾಮಕ ಸಿಬ್ಬಂದಿ, ಕಬ್ಬಿಣದ ಏಣಿ ತೆಗೆದು ಮರಕ್ಕೆ ಹಾಕಿದ್ದಾರೆ. ಅಲ್ಲದೇ ಸಿಬ್ಬಂದಿ ಏಣಿಯಿಂದ ಮರ ಏರಲು ಮುಂದಾಗಿದ್ದಾರೆ. ಆದರೂ ಆತ ದೊಡ್ಡ ಕೊಂಬೆ ಮೇಲೆ ವೌನವಾಗಿ ನಿಂತಿದ್ದ. ಸಿಬ್ಬಂದಿ ನಿಧಾನವಾಗಿ ಮರ ಏರಿ ಇನ್ನೇನು ಆತನನ್ನು ಹಿಡಿದುಕೊಳ್ಳಬೇಕೆನ್ನುವಷ್ಟರಲ್ಲಿ ಸೋಮಶೇಖರ್ ಏಕಾಏಕಿ ಕೆಳಗೆ ನೆರೆದಿದ್ದ ಜನರತ್ತ ಜಿಗಿದಿದ್ದಾನೆ. ಅದೃಷ್ಟವಶಾತ್ ಪೊಲೀಸರು ಹಾಗೂ ಜನರು ಆತನನ್ನು ಹಿಡಿದಿದ್ದರಿಂದ ಅಪಾಯ ತಪ್ಪಿದೆ. ತಕ್ಷಣ ಆತನನ್ನು ವಶಕ್ಕೆ ಪಡೆದ ಪೊಲೀಸರು, ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದದರು. ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಲ್ಲಿ ಜಗಳ

ಕೃಷಿ ಕುಟುಂಬದ ಹಿನ್ನೆಲೆಯ ಸೋಮಶೇಖರ್, ಮನೆಯಲ್ಲಿ ತಾಯಿ ಹಾಗೂ ಸದಸ್ಯರ ಜತೆ ಕಟ್ಟಿಗೆ ಸುಡುವ ವಿಚಾರವಾಗಿ ಜಗಳವಾಡಿಕೊಂಡು ನಾಲ್ಕು ದಿನದ ಹಿಂದೆ ಬೆಂಗಳೂರಿಗೆ ಬಂದಿದ್ದ. ಜಗಳದ ವೇಳೆ ತಾಯಿ ಬೈಯ್ದಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಆತ, ಬೇಸರಗೊಂಡು ಮರ ಏರಿದ್ದ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ