ಚೆನ್ನೈ[ಜೂ.15]: ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಸ್ಟೇಷನ್‌ ಮಾಸ್ಟರ್‌ಗಳು ಇಂಗ್ಲಿಷ್‌ ಮತ್ತು ಹಿಂದಿಯಲ್ಲೇ ಕಡ್ಡಾಯವಾಗಿ ಸಂವಹನ ನಡೆಸಬೇಕು ಎಂದು ದಕ್ಷಿಣ ರೈಲ್ವೆ ವಿವಾದಾತ್ಮಕ ಸುತ್ತೋಲೆ ಹೊರಡಿಸಿದೆ. ಹಿಂದಿ ಹೇರಿಕೆ ವಿರೋಧಿ ಹೋರಾಟ ತಣ್ಣಗಾದ ಕೆಲವೇ ದಿನಗಳಲ್ಲಿ ಈ ಸುತ್ತೋಲೆ ವಿಷಯ ಬೆಳಕಿಗೆ ಬಂದಿದ್ದು, ತಮಿಳುನಾಡಿನ ರಾಜಕೀಯ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ಮತ್ತೊಂದು ಪ್ರಯತ್ನ ಇದಾಗಿದೆ ಎಂದು ಪಕ್ಷಗಳು ಕಿಡಿಕಾರಿವೆ. ಇದರ ಬೆನ್ನಲ್ಲೇ ರೈಲ್ವೆ ಇಲಾಖೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಸುತ್ತೋಲೆ ಹಿಂಪಡೆದಿದ್ದು, ವಿವಾದ ತಣ್ಣಗಾಗಿಸುವ ಯತ್ನ ಮಾಡಿದೆ.

ರೈಲ್ವೆ ಅಧಿಕಾರಿಗಳು ಇಂಗ್ಲಿಷ್‌ ಹಾಗೂ ಹಿಂದಿಯಲ್ಲೇ ಸಂವಹನ ನಡೆಸಬೇಕು ಎಂದು ದಕ್ಷಿಣ ರೈಲ್ವೆ ಮೇ ತಿಂಗಳಿನಲ್ಲೇ ಸುತ್ತೋಲೆ ಹೊರಡಿಸಿತ್ತು. ರೈಲ್ವೆ ಅಧಿಕಾರಿಗಳ ನಡುವಣ ಭಾಷಾ ಸಮಸ್ಯೆಯಿಂದಾಗಿ ಮದುರೈ ಜಿಲ್ಲೆಯಲ್ಲಿ ಎರಡು ರೈಲುಗಳು ಒಂದೇ ಹಳಿಯ ಮೇಲೆ ಬಂದಿದ್ದವು. ಅದಾದ ಬೆನ್ನಲ್ಲೇ ಎರಡು ಭಾಷೆ ಮಾತ್ರ ಬಳಸುವಂತೆ ರೈಲ್ವೆ ಆದೇಶಿಸಿತ್ತು. ಈ ಕುರಿತು ಶುಕ್ರವಾರ ಮಾಧ್ಯಮಗಳಲ್ಲಿ ವರದಿಯಾಯಿತು. ಈ ವಿಚಾರ ತಮಿಳುನಾಡಿನಲ್ಲಿ ಆಕ್ರೋಶಕ್ಕೆ ಕಾರಣವಾಯಿತು.

ಹಲವು ರಾಜಕೀಯ ಪಕ್ಷಗಳು ಕೇಂದ್ರದ ವಿರುದ್ಧ ಕಿಡಿಕಾರಿ, ಪ್ರತಿಭಟನೆ ನಡೆಸುವುದಾಗಿ ಗುಡುಗಿದವು. ಈ ನಡುವೆ ಡಿಎಂಕೆ ನಾಯಕ ಸ್ಟಾಲಿನ್‌ ಸೂಚನೆ ಮೇರೆಗೆ ಮುಖಂಡ ದಯಾನಿಧಿ ಮಾರನ್‌ ಅವರು ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಿ ಆಕ್ಷೇಪ ಸಲ್ಲಿಸಿದರು. ತಕ್ಷಣದಿಂದಲೇ ಜಾರಿಗೆ ಬರುವಂತೆ ಸುತ್ತೋಲೆ ಹಿಂಪಡೆಯುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ರಾಷ್ಟ್ರೀಯ ಶೈಕ್ಷಣಿಕ ನೀತಿಯಲ್ಲಿ ತ್ರಿಭಾಷಾ ಸೂತ್ರ ಜಾರಿಗೆ ತರುವಂತೆ ಕಸ್ತೂರಿ ರಂಗನ್‌ ಸಮಿತಿ ತನ್ನ ಕರಡು ವರದಿಯಲ್ಲಿ ಶಿಫಾರಸು ಮಾಡಿದ್ದ ಬಳಿಕ ತಮಿಳುನಾಡಿನಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಬಳಿಕ ಕೇಂದ್ರ ಸರ್ಕಾರ ಕರಡು ವರದಿಗೇ ತಿದ್ದುಪಡಿ ತಂದಿತ್ತು.