ಬೆಂಗಳೂರು[ಆ.20]: ರಾಜ್ಯ ಬಿಜೆಪಿ ಸರ್ಕಾರದ ಮೊದಲ ಸಚಿವ ಸಂಪುಟ ವಿಸ್ತರಣೆ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಿಂದ ಆದಷ್ಟುಬೇಗ ಬಿಡುಗಡೆಗೊಳಿಸಿ ಬೇರೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಪ್ರಕ್ರಿಯೆ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.

ಯಡಿಯೂರಪ್ಪ ಅವರು ಸರ್ಕಾರದ ಆಡಳಿತದೆಡೆ ಹೆಚ್ಚು ಗಮನ ನೀಡಬೇಕಾಗುವುದರಿಂದ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ಹೆಚ್ಚು ವಿಳಂಬ ಮಾಡದೆ ನೂತನ ಅಧ್ಯಕ್ಷರನ್ನು ನೇಮಿಸುವ ಬಗ್ಗೆ ಬಿಜೆಪಿ ವರಿಷ್ಠರು ಒಲವು ಹೊಂದಿದ್ದಾರೆ ಎನ್ನಲಾಗಿದೆ.

ಪಕ್ಷದ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಸಾಂಸ್ಥಿಕ ಚುನಾವಣೆಗಳು ಮುಗಿಯುವುದು ನವೆಂಬರ್‌ನಲ್ಲಿ. ಹೀಗಾಗಿ, ಡಿಸೆಂಬರ್‌ನಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಬೇಕು. ಆದರೆ, ಇಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಮತ್ತು ರಾಜ್ಯಾಧ್ಯಕ್ಷರೇ ಮುಖ್ಯಮಂತ್ರಿಯಾಗಿರುವುದರಿಂದ ವಿಳಂಬ ಮಾಡದೆ ಆದಷ್ಟುಶೀಘ್ರ ನೇಮಕ ಮಾಡುವ ಚರ್ಚೆ ನಡೆದಿದೆ. ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡದಿದ್ದರೆ ರಾಷ್ಟ್ರೀಯ ಘಟಕದಲ್ಲಿ ಮಾಡಿದಂತೆ ಕರ್ನಾಟಕದಲ್ಲೂ ತಾತ್ಕಾಲಿಕವಾಗಿ ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಸಬಹುದು ಎಂದು ತಿಳಿದು ಬಂದಿದೆ.

ಯಾರಿಗೆ ಅವಕಾಶ?:

ಸದ್ಯಕ್ಕೆ ನೂತನ ರಾಜ್ಯಾಧ್ಯಕ್ಷರ ರೇಸ್‌ನಲ್ಲಿ ಶಾಸಕ ಸಿ.ಟಿ.ರವಿ, ಸಂಸದ ನಳಿನ್‌ಕುಮಾರ್‌ ಕಟೀಲ್‌, ಶಾಸಕ ವಿ.ಸುನಿಲ್‌ಕುಮಾರ್‌ ಅವರ ಹೆಸರು ಮುಂಚೂಣಿಯಲ್ಲಿವೆ. ಆದರೆ, ಮಂಗಳವಾರ ಸಿ.ಟಿ.ರವಿ ಮತ್ತು ಸುನಿಲ್‌ಕುಮಾರ್‌ ಪೈಕಿ ಯಾರಿಗೆ ಸಚಿವ ಸ್ಥಾನ ಸಿಗಬಹುದು ಎಂಬುದರ ಮೇಲೆ ಮುಂದಿನ ಬೆಳವಣಿಗೆ ಊಹಿಸಬಹುದಾಗಿದೆ. ಒಂದು ವೇಳೆ ಸಂಸದರೊಬ್ಬರು ಅಧ್ಯಕ್ಷರಾಗಲಿ ಎಂಬ ನಿಲುವನ್ನು ವರಿಷ್ಠರು ಕೈಗೊಂಡಲ್ಲಿ ನಳಿನ್‌ಕುಮಾರ್‌ ಕಟೀಲ್‌ ಅವರಿಗೆ ಸಿಗುವ ಸಾಧ್ಯತೆಯಿದೆ.

ಒಂದಂತೂ ಸತ್ಯ. ಈ ಬಾರಿ ಯುವ ಮುಖಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಅದರಲ್ಲೂ ಸಂಘ ಪರಿವಾರದೊಂದಿಗೆ ನಿಕಟ ಸಂಬಂಧ ಹೊಂದಿದವರನ್ನೇ ಪರಿಗಣಿಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.

ಬಹುತೇಕ ರಾಜ್ಯಗಳಲ್ಲಿ ಬಿಜೆಪಿಗೆ ಸಂಸದರೇ ರಾಜ್ಯಾಧ್ಯಕ್ಷರಾಗಿದ್ದಾರೆ. ಹೀಗಾಗಿ, ಇಲ್ಲೂ ನಳಿನ್‌ ಅವರಿಗೆ ಅವಕಾಶ ಸಿಗಬಹುದು ಎಂಬ ಮಾತು ಕೇಳಿಬರುತ್ತಿದೆ. ಆದರೆ, ನಳಿನ್‌ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂಬ ದೂರು ಇದೆ. ಇದೇ ಮುಖ್ಯವಾದಲ್ಲಿ ನಳಿನ್‌ ಅವರನ್ನು ಪರಿಗಣಿಸದೇ ಇರಬಹುದು.

ಸಾಧ್ಯಾ ಸಾಧ್ಯತೆಗಳು

1. ದೇಶದ ಬಹಳ ರಾಜ್ಯಗಳಲ್ಲಿ ಬಿಜೆಪಿಗೆ ಸಂಸದರೇ ರಾಜ್ಯಾಧ್ಯಕ್ಷರು

2. ಅಲ್ಲದೆ, ಸಂಘ ಪರಿವಾರಕ್ಕೆ ನಿಕಟವಾಗಿರುವವರಿಗೇ ಹೆಚ್ಚು ಆದ್ಯತೆ

3. ಅದರಲ್ಲೂ ಯುವ ನಾಯಕರಿಗೆ ಬಿಜೆಪಿ ಹೈಕಮಾಂಡ್‌ನಿಂದ ಮಣೆ

4. ಕರ್ನಾಟಕದಲ್ಲೂ ಅದೇ ಮಾದರಿಯನ್ನು ಅನುಸರಿಸುವ ಸಾಧ್ಯತೆ

5. ನಳಿನ್‌ ಕುಮಾರ್‌ ಕಟೀಲ್‌, ಸುನಿಲ್‌ ಕುಮಾರ್‌, ಸಿ.ಟಿ.ರವಿ ರೇಸಲ್ಲಿ

6. ರವಿ, ಸುನಿಲ್‌ಗೆ ಸಚಿವರಾದರೆ ನಳಿನ್‌ ರಾಜ್ಯಾಧ್ಯಕ್ಷ ಸಂಭವ ಹೆಚ್ಚು