ಕುಮಾರಣ್ಣ ಆಯ್ತು; ಇದೀಗ ರೇವಣ್ಣ, ಪರಂ ಗ್ರಾಮ ವಾಸ್ತವ್ಯ| ಬೇಲೂರಿನಿಂದ ಗ್ರಾಮ ವಾಸ್ತವ್ಯ ಆರಂಭಿಸಲು ಚಿಂತನೆ: ರೇವಣ್ಣ| ಎಲ್ಲಿಂದ, ಯಾವಾಗ ಎಂಬುದನ್ನು ಇನ್ನು ನಿರ್ಧರಿಸಿಲ್ಲ: ಪರಂ

ಮೈಸೂರು[ಜೂ.25]: ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಖುದ್ದಾಗಿ ಅರಿತು, ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಆರಂಭಿಸಿರುವ ಬೆನ್ನಲ್ಲೇ, ತಾವು ಸಹ ಗ್ರಾಮವಾಸ ಮಾಡುವುದಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಸೋಮವಾರ ಘೋಷಿಸಿದ್ದಾರೆ.

Add Asianetnews Kannada as a Preferred SourcegooglePreferred

ಬೇಲೂರಿನಿಂದ ತಮ್ಮ ಗ್ರಾಮವಾಸ್ತವ್ಯ ಆರಂಭಿಸುವ ಚಿಂತನೆಯಿದೆ ಎಂದು ರೇವಣ್ಣ ಹೇಳಿದರೆ, ಯಾವಾಗ ಮತ್ತು ಎಲ್ಲಿಂದ ಎಂಬುದರ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಪರಮೇಶ್ವರ್‌ ಹೇಳಿದ್ದಾರೆ. ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಚರ್ಚಿಸಿ ಗ್ರಾಮ ವಾಸ್ತವ್ಯದ ರೂಪುರೇಷೆಗಳನ್ನು ರೂಪಿಸಿ ನಂತರ ಗ್ರಾಮ ವಾಸ್ತವ್ಯ ಆರಂಭಿಸಲಾಗುವುದು. ಗ್ರಾಮ ವಾಸ್ತವ್ಯವನ್ನು ಬೇಲೂರಿನಿಂದ ಆರಂಭಿಸುವ ಚಿಂತನೆಯಿದೆ ಎಂದು ತಿಳಿಸಿದ್ದಾರೆ.

ಇನ್ನೂ ಮೈಸೂರಿನಲ್ಲಿ ಮಾತನಾಡಿದ ಪರಮೇಶ್ವರ್‌, ನಾನೂ ಕೂಡ ಗ್ರಾಮ ವಾಸ್ತವ್ಯ ಮಾಡಲು ನಿರ್ಧರಿಸಿದ್ದೇನೆ. ಈ ಕುರಿತು ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇನೆ. ಯಾವಾಗ ಮತ್ತು ಎಲ್ಲಿಂದ ಎಂಬುದನ್ನು ಇನ್ನೂ ತೀರ್ಮಾನಿಸಬೇಕಿದೆ ಎಂದಿದ್ದಾರೆ.