ರಾಂಪುರ್(ಸೆ.13): ಸಮಾಜವಾದಿ ಪಕ್ಷದ ಸಂಸದ ಆಜಂ ಖಾನ್ ಸದಾ ವಿವಾದಗಳನ್ನೇ ಹೊದ್ದು ಮಲಗುವ ವ್ಯಕ್ತಿ. ಲೋಕಸಭೆಯಲ್ಲೇ ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದ ಮಹಿಳಾ ಸಂಸದೆ ಕುರಿತು ಕೀಳಾಗಿ ಮಾತಾಡಿ ಬೈಯಿಸಿಕೊಂಡ ವ್ಯಕ್ತಿ ಈ ಆಜಂ ಖಾನ್.

ಅಷ್ಟೇ ಅಲ್ಲ ಎಸ್‌ಪಿ ಯ ಹಿರಿಯ ನಾಯಕನ ಮೇಲೆ ಎಮ್ಮೆ ಕದ್ದ ಗಂಭೀರ(?)ಆರೋಪವೂ ಇದೆ. ಇದೀಗ ಖಾನ್ ಸಾಹೇಬರ ವಿರುದ್ಧ ಮೇಕೆ ಕಳ್ಳತನದ ದೂರು ದಾಖಲಾಗಿದೆ.

2016ರ ಅಕ್ಟೋಬರ್ 15 ರಲ್ಲಿ ನಸೀಮಾ ಕಾತೂನ್ ಎಂಬವರು ಆಜಂ ಖಾನ್ ವಿರುದ್ಧ ಮೇಕೆ ಕದ್ದ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಅಜಂ ಖಾನ್ ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ.

ಅಜಂ ಖಾನ್ ಸೇರಿದಂತೆ ಸುಮಾರು 25 ಜನ ಅಕ್ಟೋಬರ್ 15ರಂದು ನಮ್ಮ ಮನೆಗೆ ನುಗ್ಗಿ ಮನೆಯನ್ನು ಧ್ವಂಸಗೊಳಿಸಿದ್ದಲ್ಲದೇ, ಮನೆಯಲ್ಲಿದ್ದ ಚಿನ್ನಾಭರಣ, ಮೂರು ಎಮ್ಮೆ, ಹಸು ಹಾಗೂ ಮೇಕೆಗಳನ್ನು ಕದ್ದಿದ್ದಾರೆ ಎಂದು ದೂರಿನಲ್ಲಿ ನಸೀಮಾ ಉಲ್ಲೇಖಿಸಿದ್ದಾರೆ.