ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಪುನರಾಯ್ಕೆಯಾದ ಬೆನ್ನಲ್ಲೇ ಬಿಜೆಪಿ ನೇತೃತ್ವದ ಎನ್‌ಡಿಎಯೊಳಗೆ ಸಚಿವ ಸಂಪುಟದ ಲೆಕ್ಕಾಚಾರ ಆರಂಭವಾಗಿದೆ. ಯಾರು ಸಂಪುಟ ಸೇರಬಹುದು, ಯಾರಿಗೆ ಬಡ್ತಿ ಸಿಗಬಹುದು, ಯಾರಿಗೆ ಪ್ರಧಾನಿ ನರೇಂದ್ರ ಮೋದಿ ಕೊಕ್‌ ನೀಡಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ಯಾರು ಮಂತ್ರಿಯಾಗುತ್ತಾರೆ ಎಂಬುದು ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಹೊರತುಪಡಿಸಿ ಬೇರಾರಿಗೂ ಗೊತ್ತಿರುವ ಸಾಧ್ಯತೆ ಕಡಿಮೆ.

ಈ ಹಿಂದೆ ಕೂಡ ಕೇಂದ್ರ ಸಚಿವ ಸಂಪುಟ ರಚನೆ ಹಾಗೂ ಪುನಾರಚನೆ ವೇಳೆ ಯಾರೂ ಊಹೆ ಮಾಡಲು ಆಗದ ಅಚ್ಚರಿಯ ಅಭ್ಯರ್ಥಿಗಳನ್ನು ಮೋದಿ- ಶಾ ಜೋಡಿ ಆಯ್ಕೆ ಮಾಡಿತ್ತು. ಈ ಬಾರಿಯೂ ಅದೇ ರೀತಿಯ ಅಚ್ಚರಿಯ ಸಂಪುಟ ರಚನೆಯಾಗುವ ಎಲ್ಲ ಸಾಧ್ಯತೆಗಳಿವೆ. ಇದರ ಹೊರತಾಗಿಯೂ ಸಚಿವ ಸ್ಥಾನಕ್ಕೆ ಸ್ವತಃ ಅಮಿತ್‌ ಶಾ, ರಾಜನಾಥ ಸಿಂಗ್‌, ಪೀಯೂಷ್‌ ಗೋಯಲ್‌, ಸ್ಮೃತಿ ಇರಾನಿ, ನಿತಿನ್‌ ಗಡ್ಕರಿ, ರವಿಶಂಕರ ಪ್ರಸಾದ್‌, ಮುಖ್ತಾರ್‌ ಅಬ್ಬಾಸ್‌ ನಖ್ವಿ, ಪ್ರಕಾಶ್‌ ಜಾವಡೇಕರ್‌, ಜೆ.ಪಿ. ನಡ್ಡಾ, ಧರ್ಮೇಂದ್ರ ಪ್ರಧಾನ್‌ರಂಥವರ ಹೆಸರು ಕೇಳಿಬರುತ್ತಿದೆ.

ಅನಾರೋಗ್ಯ ಹಿನ್ನೆಲೆಯಲ್ಲಿ ಹಾಲಿ ಹಣಕಾಸು ಸಚಿವರಾಗಿರುವ ಅರುಣ್‌ ಜೇಟ್ಲಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ. ಒಂದು ವೇಳೆ ಕೊಟ್ಟರೂ ಹೆಚ್ಚಿನ ಗಮನ ಅಗತ್ಯವಾದ ಹಣಕಾಸು ಸಚಿವ ಸ್ಥಾನ ನೀಡಲ್ಲ ಎಂದು ಹೇಳಲಾಗಿದೆ. ವಿದೇಶಾಂಗ ಸಚಿವೆಯಾಗಿರುವ ಸುಷ್ಮಾ ಸ್ವರಾಜ್‌ ಕೂಡ ಆರೋಗ್ಯ ಸಮಸ್ಯೆ ಹೊಂದಿರುವ ಕಾರಣ ಸಂಪುಟದಿಂದ ದೂರ ಉಳಿಯಬಹುದು ಎಂಬ ಮಾತುಗಳು ಕೇಳಿಬಂದಿವೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಸುಷ್ಮಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಅವರನ್ನು ಮಂತ್ರಿ ಮಾಡಬೇಕಾದರೆ ರಾಜ್ಯಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಬೇಕಾಗುತ್ತದೆ. ಅಂತಹ ಸಂಭವ ಇಲ್ಲ ಎಂಬ ವಿಶ್ಲೇಷಣೆಗಳಿವೆ.

ಪೀಯೂಷ್‌ ಗೋಯಲ್‌ಗೆ ಯಾವ ಖಾತೆ?:

ಅಮಿತ್‌ ಶಾ ಅವರಿಗೆ ಗೃಹ ಅಥವಾ ಹಣಕಾಸು ಖಾತೆ ಸಿಗಬಹುದು ಎನ್ನಲಾಗುತ್ತಿದೆ. ವಿತ್ತ ಖಾತೆ ಅಮಿತ್‌ ಶಾಗೆ ಸಿಗದೇ ಇದ್ದರೆ ಅದು ಇಂಧನ ಸಚಿವ ಪೀಯೂಷ್‌ ಗೋಯಲ್‌ ಪಾಲಾಗುವ ಸಂಭವ ಇದೆ. ಅರುಣ್‌ ಜೇಟ್ಲಿ ಅವರು ಅಸ್ವಸ್ಥರಾಗಿದ್ದಾಗ ಆ ಖಾತೆಯನ್ನು ನಿಭಾಯಿಸಿದ ಅನುಭವ ಗೋಯಲ್‌ಗೆ ಇದೆ.

ಮಿಕ್ಕಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಅವರ ಭದ್ರಕೋಟೆ ಅಮೇಠಿಯಲ್ಲೇ ಮಣಿಸಿರುವ ಜವಳಿ ಸಚಿವೆ ಸ್ಮೃತಿ ಇರಾನಿಗೆ ಸಂಪುಟದಲ್ಲಿ ಪ್ರಭಾವಿ ಹುದ್ದೆ ದೊರೆಯುವ ನಿರೀಕ್ಷೆ ಇದೆ. ಪಟನಾ ಸಾಹೀಬ್‌ ಕ್ಷೇತ್ರದಲ್ಲಿ ಶತ್ರುಘ್ನ ಸಿನ್ಹಾ ಅವರನ್ನು ಸೋಲಿಸಿರುವ ರವಿಶಂಕರ ಪ್ರಸಾದ್‌ ಅವರಿಗೆ ಕಾನೂನು ಖಾತೆ ಬದಲಿಗೆ ಮತ್ತೊಂದು ಇಲಾಖೆಯ ಹೊಣೆಗಾರಿಕೆ ವಹಿಸುವ ಸಾಧ್ಯತೆ ಇದೆ. ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರ ಕಾರ್ಯವೈಖರಿ ಬಗ್ಗೆ ಮೋದಿಗೆ ಮೆಚ್ಚುಗೆ ಇದೆ. ಆ ಖಾತೆಯಲ್ಲೇ ಅವರನ್ನು ಮುಂದುವರಿಸುವ ಎಲ್ಲ ಸಂಭವವಿದೆ ಎಂದು ಹೇಳಲಾಗುತ್ತಿದೆ.

ರಕ್ಷಣಾ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್‌ ಅವರನ್ನು ಅದೇ ಖಾತೆಯಲ್ಲಿ ಮುಂದುವರಿಸಲಾಗುತ್ತದೆ. ರಾಜನಾಥ ಸಿಂಗ್‌, ನರೇಂದ್ರ ಸಿಂಗ್‌ ತೋಮರ್‌, ಪ್ರಕಾಶ್‌ ಜಾವಡೇಕರ್‌, ಧರ್ಮೇಂದ್ರ ಪ್ರಧಾನ್‌, ಜೆ.ಪಿ. ನಡ್ಡಾ ಅವರ ಸ್ಥಾನ ಸಂಪುಟದಲ್ಲಿ ಭದ್ರವಾಗಿರಲಿದೆ. ಮೋದಿ ತಂಡದಲ್ಲಿರುವ ಏಕೈಕ ಮುಸ್ಲಿಂ ಮುಖ ಮುಖ್ತಾರ್‌ ಅಬ್ಬಾಸ್‌ ನಖ್ವಿ ಅವರಿಗೆ ಸಂಪುಟ ದರ್ಜೆಗೆ ಬಡ್ತಿ ನೀಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

2ನೇ ಹಂತದ ನಾಯಕರಿಗೆ ಮಣೆ:

2ನೇ ಹಂತದ ನಾಯಕರನ್ನು ಬೆಳೆಸುವ ಉದ್ದೇಶ ಮೋದಿ ಹಾಗೂ ಅಮಿತ್‌ ಶಾ ಜೋಡಿಗೆ ಇದೆ. ಹೀಗಾಗಿ ಯುವ ಮುಖಗಳನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಬಿಜೆಪಿಗೆ ಈ ಬಾರಿ ಹೆಚ್ಚಿನ ಸ್ಥಾನ ನೀಡಿರುವ ಪಶ್ಚಿಮ ಬಂಗಾಳ, ಒಡಿಶಾ ಹಾಗೂ ತೆಲಂಗಾಣಕ್ಕೂ ಸಂಪುಟದಲ್ಲೂ ಪ್ರಾತಿನಿಧ್ಯ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ. ಇದಲ್ಲದೆ, ಬಿಜೆಪಿಯ ಮಿತ್ರಪಕ್ಷಗಳಾದ ಶಿವಸೇನೆ ಹಾಗೂ ಜೆಡಿಯು ಅತ್ಯುತ್ತಮ ಪ್ರದರ್ಶನ ತೋರಿದ್ದು, ಆ ಪಕ್ಷಗಳಿಗೂ ಸಂಪುಟದಲ್ಲಿ ಹುದ್ದೆ ಸಿಗುವುದು ಗ್ಯಾರಂಟಿ ಎಂದು ವರದಿಗಳು ಹೇಳಿವೆ.

ಅಮಿತ್‌ ಶಾಗೆ ಟಾಪ್‌-4 ಹುದ್ದೆಗಳಲ್ಲಿ ಒಂದು?

ಬಿಜೆಪಿಯ ಗೆಲುವಿನಲ್ಲಿ ಮೋದಿ ನಂತರ ಪ್ರಮುಖ ಪಾತ್ರ ನಿರ್ವಹಿಸಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಗೃಹ ಹಾಗೂ ಹಣಕಾಸು ಖಾತೆಗೆ ಶಾ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.

ಕೇಂದ್ರ ಸಚಿವ ಸಂಪುಟದಲ್ಲಿ 4 ಪ್ರಮುಖ ಖಾತೆಗಳಿವೆ. ಅವೆಂದರೆ- ಗೃಹ, ಹಣಕಾಸು, ವಿದೇಶಾಂಗ ವ್ಯವಹಾರ ಹಾಗೂ ರಕ್ಷಣೆ. ಆ ಪೈಕಿ ಒಂದು ಅಮಿತ್‌ ಶಾ ಪಾಲಾಗಲಿದೆ ಎಂದು ಹೇಳಲಾಗುತ್ತಿದೆ.

ಗೃಹ ಖಾತೆ ಕೇಂದ್ರ ಸಚಿವ ಸಂಪುಟದ ನಂ.2 ಹುದ್ದೆ. ಅಂದರೆ ಪ್ರಧಾನಿ ನಂತರದ ಮಹತ್ವದ ಸ್ಥಾನ. ಗುಜರಾತ್‌ನಲ್ಲಿ ಅಮಿತ್‌ ಶಾ ಗೃಹ ಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆ ಸ್ಥಾನವನ್ನೇ ಅವರು ಆರಿಸಿಕೊಂಡರೂ ಅಚ್ಚರಿ ಇಲ್ಲ. ಹಾಗಾದಲ್ಲಿ ಹಾಲಿ ಗೃಹ ಸಚಿವರಾಗಿರುವ ರಾಜನಾಥ ಸಿಂಗ್‌ ಅವರಿಗೆ ಮತ್ತೊಂದು ಮಹತ್ವದ ಹುದ್ದೆ ಹುಡುಕಬೇಕಾಗುತ್ತದೆ. ಅವರಿಗೆ ರಕ್ಷಣಾ ಖಾತೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಂದು ವೇಳೆ ಅಮಿತ್‌ ಶಾ ಹಣಕಾಸು ಖಾತೆ ಆಯ್ದುಕೊಂಡರೆ ಪೀಯೂಷ್‌ ಗೋಯಲ್‌ಗೆ ಆ ಖಾತೆ ತಪ್ಪಲಿದೆ. ರಕ್ಷಣಾ ಖಾತೆ ಆಯ್ಕೆ ಮಾಡಿಕೊಂಡರೆ ನಿರ್ಮಲಾ ಸೀತಾರಾಮನ್‌ ಅವರಿಗೆ ಬೇರೆ ಸ್ಥಾನ ತೋರಿಸಬೇಕಾಗುತ್ತದೆ. ನಿರ್ಮಲಾ ಕಾರ್ಯನಿರ್ವಹಣೆ ಬಗ್ಗೆ ಮೋದಿ ಅವರಿಗೆ ಮೆಚ್ಚುಗೆ ಇರುವ ಕಾರಣ ಅವರನ್ನು ಬದಲಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.

ಪಕ್ಷಾಧ್ಯಕ್ಷ ಹುದ್ದೆ ಜತೆಗೆ ಸಚಿವರಾಗಲು ಶಾ ಸಿದ್ಧ?

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯನ್ನೂ ಇಟ್ಟುಕೊಂಡು ಕೇಂದ್ರ ಸಚಿವ ಸಂಪುಟ ಸೇರಲು ಅಮಿತ್‌ ಶಾ ಅವರಿಗೆ ಯಾವುದೇ ಅಡ್ಡಿ ಇಲ್ಲ. ಆದರೆ ಬಿಜೆಪಿಯ ‘ಒಂದು ವ್ಯಕ್ತಿ ಒಂದೇ ಹುದ್ದೆ’ ನೀತಿ ಅವರಿಗೆ ಅಡ್ಡಿಯಾಗುತ್ತಿದೆ ಎಂಬ ವರದಿಗಳು ಇವೆ. ಬಿಜೆಪಿಯ ಪಂಜಾಬ್‌ ಘಟಕದ ಅಧ್ಯಕ್ಷರಾಗಿದ್ದ ವಿಜಯ್‌ ಸಂಪ್ಲಾ ಅವರು ಕೇಂದ್ರ ಸಚಿವರಾಗಿದ್ದುಕೊಂಡೇ ಆ ಹುದ್ದೆಯನ್ನೂ ನಿರ್ವಹಿಸಿದ್ದರು. ಅದನ್ನೇ ಉದಾಹರಣೆಯಾಗಿಟ್ಟುಕೊಂಡು ಅಮಿತ್‌ ಶಾಗೆ ಎರಡೂ ಹುದ್ದೆ ನೀಡಿದರೂ ಅಚ್ಚರಿ ಇಲ್ಲ ಎಂಬ ಮಾತುಗಳೂ ಇವೆ.

ಮೋದಿ ಸಂಪುಟದಲ್ಲಿ ಗಡ್ಕರಿ ಮತ್ತಷ್ಟುಪ್ರಭಾವಿ?

ಚುನಾವಣೆ ಸಂದರ್ಭದಲ್ಲಿ ಕೆಲವೊಂದು ಹೇಳಿಕೆಗಳ ಮೂಲಕ ಬಿಜೆಪಿಗೆ ಮುಜುಗರ ತಂದೊಡ್ಡಿದ್ದ ರಸ್ತೆ ಸಾರಿಗೆ, ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಸಂಪುಟದಲ್ಲಿ ಮುಂದುವರಿಸುವುದರ ಜತೆಗೆ ಅವರ ಖಾತೆಯನ್ನೇ ಪ್ರಧಾನಿ ಮೋದಿ ಪ್ರಬಲಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಿರ್ಗಮಿತ ಸರ್ಕಾರದಲ್ಲಿ ಗಡ್ಕರಿ ಅಡಿ ಹಲವು ಇಲಾಖೆಗಳು ಇದ್ದವು. ಅದರಲ್ಲಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅದೇ ಹುದ್ದೆಯಲ್ಲಿ ಅವರನ್ನು ಮುಂದುವರಿಸಲಾಗುತ್ತದೆ. ಜತೆಗೆ ಸಾರಿಗೆ, ರೈಲ್ವೆ ಹಾಗೂ ನಾಗರಿಕ ವಿಮಾನಯಾನ ಖಾತೆಗಳನ್ನು ವಿಲೀನಗೊಳಿಸಲಾಗುತ್ತದೆ. ಆ ಖಾತೆಗೆ ಗಡ್ಕರಿ ಅವರನ್ನೇ ಸಚಿವರನ್ನಾಗಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನಮೋ ಸಂಪುಟಕ್ಕೆ ಯಾರು?

- ಭರ್ಜರಿ ಗೆಲುವಿನ ಬಳಿಕ ಸಂಪುಟ ರಚನೆಗೆ ಸಿದ್ಧತೆ

ಮೋದಿ, ಶಾ ಬಳಿ ಸಚಿವರ ಸೀಕ್ರೆಟ್‌

- ಜೇಟ್ಲಿ, ಸುಷ್ಮಾಗೆ ಮತ್ತೆ ಸಚಿವ ಸ್ಥಾನ ಇಲ್ಲ?

ಅಮಿತ್‌ ಶಾ ಸೇರ್ಪಡೆ ಬಹುತೇಕ ಖಚಿತ

- ರಾಹುಲ್‌ರನ್ನು ಮಣಿಸಿದ ಸ್ಮೃತಿಗೆ ಪ್ರಮುಖ ಖಾತೆ?

ಬಂಗಾಳ, ಒಡಿಶಾಕ್ಕೂ ಆದ್ಯತೆ?

ಸಂಭಾವ್ಯ ಕೇಂದ್ರ ಸಚಿವರ ಪಟ್ಟಿ

- ಅಮಿತ್‌ ಶಾ    ಗೃಹ/ವಿತ್ತ/ವಿದೇಶಾಂಗ

- ರಾಜನಾಥ್‌ ಸಿಂಗ್‌    ಗೃಹ/ರಕ್ಷಣೆ

- ನಿರ್ಮಲಾ ಸೀತಾರಾಮನ್‌    ರಕ್ಷಣೆ

- ಪೀಯೂಷ್‌ ಗೋಯಲ್‌    ಹಣಕಾಸು

- ನಿತಿನ್‌ ಗಡ್ಕರಿ    ಹೆದ್ದಾರಿ


ಕರ್ನಾಟಕದಿಂದ

ಯಾರಾರ‍ಯರು ರೇಸಲ್ಲಿ?

- ಡಿ.ವಿ.ಸದಾನಂದಗೌಡ/ಶೋಭಾ ಕರಂದ್ಲಾಜೆ

- ಸುರೇಶ್‌ ಅಂಗಡಿ/ ಶಿವಕುಮಾರ್‌ ಉದಾಸಿ

- ಉಮೇಶ್‌ ಜಾಧವ್‌

- ಪ್ರಹ್ಲಾದ್‌ ಜೋಶಿ

- ಅನಂತ್‌ ಕುಮಾರ್‌ ಹೆಗಡೆ

- ರಮೇಶ್‌ ಜಿಗಜಿಣಗಿ

ಅಮಿತ್‌ ಶಾಗೆ ಗೃಹ ಖಾತೆ?

ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಪಕ್ಷಾಧ್ಯಕ್ಷ ಅಮಿತ್‌ ಶಾ ಅವರು ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಅವರಿಗೆ ಪ್ರಧಾನಿ ನಂತರದ ಸ್ಥಾನ ಎಂದೇ ಬಿಂಬಿತವಾಗುವ ಗೃಹ ಖಾತೆ ಸಿಗುವ ಸಾಧ್ಯತೆ ಇದೆ. ವಿತ್ತ, ರಕ್ಷಣೆ ಅಥವಾ ವಿದೇಶಾಂಗ ಖಾತೆ ಸಿಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.