ಐದು ದಿನಗಳ ಬೆಂಗಳೂರಿನ ಬೃಹತ್ ಬಾನಿನ ಹಬ್ಬಕ್ಕೆ ಶನಿವಾರ ಸಂಜೆ ವಾಯುಪಡೆಯ ಬ್ಯಾಂಡ್‌ನ ಲಯಬದ್ಧ ವಿದಾಯ ಗೀತೆಯೊಂದಿಗೆ ತೆರೆ ಬಿತ್ತು. ಕಳೆದ ಮಂಗಳವಾರದಿಂದ ಯಲಹಂಕದ ವಾಯುನೆಲೆಯಲ್ಲಿ ಆಯೋಜಿಸಲಾಗಿದ್ದ ಏರೋ ಇಂಡಿಯಾ-2017 ಹನ್ನೊಂದನೇ ಆವೃತ್ತಿ ಪ್ರದರ್ಶನವು ಲಕ್ಷಾಂತರ ಜನರ ಮನಸೂರೆಗೊಂಡಿದ್ದು, ಕೊನೆಯ ಎರಡು ದಿನಗಳ ಕಾಲ ಎರಡೂವರೆ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿರುವ ಅಂದಾಜು ಮಾಡಲಾಗಿದೆ.
ಬೆಂಗಳೂರು(ಫೆ.18):ಲೋಹದ ಹಕ್ಕಿಗಳ ಚಿತ್ತಾರ ಬೆಂಗಳೂರು ಬಾನಂಗಳದಲ್ಲಿ ನಡೆಸಿದ ಐದು ದಿನಗಳ ಸಂಭ್ರಮಕ್ಕೆ ಶನಿವಾರ ಸಂಜೆ ತೆರೆ ಬಿದ್ದಿದೆ. ಆದರೆ ಏಷ್ಯಾ ಖಂಡದ ಅತಿದೊಡ್ಡ ಏರ್ ಶೋ ಎಂಬ ಖ್ಯಾತಿ ಪಡೆದ ಭಾರತೀಯ ವಾಯುಪಡೆಯ ಈ ವೈಮಾನಿಕ ಪ್ರದರ್ಶನ ಮುಂದಿನ ಸಲವೂ, ಅಂದರೆ 2019ರಲ್ಲೂ ಬೆಂಗಳೂರಿನಲ್ಲೇ ನಡೆಯುತ್ತಾ? ಅಥವಾ ರಕ್ಷಣಾ ಸಚಿವರ ತವರಾದ ಗೋವಾಕ್ಕೆ ಸ್ಥಳಾಂತರಗೊಳ್ಳುತ್ತಾ ಎಂಬ ಆತಂಕದ ಗೆರೆಗಳನ್ನು ಬೆಂಗಳೂರಿಗರಲ್ಲಿ ಮೂಡಿಸಿದೆ.
ಐದು ದಿನಗಳ ಬೆಂಗಳೂರಿನ ಬೃಹತ್ ಬಾನಿನ ಹಬ್ಬಕ್ಕೆ ಶನಿವಾರ ಸಂಜೆ ವಾಯುಪಡೆಯ ಬ್ಯಾಂಡ್ನ ಲಯಬದ್ಧ ವಿದಾಯ ಗೀತೆಯೊಂದಿಗೆ ತೆರೆ ಬಿತ್ತು. ಕಳೆದ ಮಂಗಳವಾರದಿಂದ ಯಲಹಂಕದ ವಾಯುನೆಲೆಯಲ್ಲಿ ಆಯೋಜಿಸಲಾಗಿದ್ದ ಏರೋ ಇಂಡಿಯಾ-2017 ಹನ್ನೊಂದನೇ ಆವೃತ್ತಿ ಪ್ರದರ್ಶನವು ಲಕ್ಷಾಂತರ ಜನರ ಮನಸೂರೆಗೊಂಡಿದ್ದು, ಕೊನೆಯ ಎರಡು ದಿನಗಳ ಕಾಲ ಎರಡೂವರೆ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿರುವ ಅಂದಾಜು ಮಾಡಲಾಗಿದೆ.
ಭಾರತದ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ಹಾಗೂ ಎಚ್ಎಎಲ್ ನಿರ್ಮಿತ ಹೆಲಿಕಾಪ್ಟರ್ಗಳೊಂದಿಗೆ ಮೇಕ್ ಇನ್ ಇಂಡಿಯಾದ ಸಾಮರ್ಥ್ಯ ಪ್ರದರ್ಶನದ ವೇದಿಕೆಯಾಗಿದ್ದ ಏರೋ ಇಂಡಿಯಾದಲ್ಲಿ ಈ ಬಾರಿ ಅಮೆರಿಕ, ಫ್ರಾನ್ಸ್, ರಷ್ಯಾ, ಸ್ವೀಡನ್, ಇಂಗ್ಲೆಂಡ್, ಜೆಕ್ ರಿಪಬ್ಲಿಕ್, ಆಸ್ಟ್ರೇಲಿಯ, ಇಸ್ರೇಲ್ ಸೇರಿದಂತೆ 30ಕ್ಕೂ ಹೆಚ್ಚು ರಾಷ್ಟ್ರಗಳು ಪಾಲ್ಗೊಂಡಿದ್ದವು. ಚೀನಾ ಇದೇ ಮೊದಲ ಬಾರಿಗೆ ನಿಯೋಗದೊಂದಿಗೆ ಪಾಲ್ಗೊಂಡರೆ, ಉಳಿದ ದೇಶಗಳು ಭಾರತದಲ್ಲಿ ತಮ್ಮ ವೈಮಾನಿಕ ವ್ಯಾಪಾರ ವಹಿವಾಟು ವೃದ್ಧಿಗೆ ಮೇಕ್ ಇನ್ ಇಂಡಿಯಾ ಅಭಿಯಾನದ ಸಹಭಾಗಿಗಳಾಗಲು ಆಕರ್ಷಕ ಕೊಡುಗೆಗಳೊಂದಿಗೆ ಹೊಸ ‘ರವಸೆ ಮೂಡಿಸಿದವು. ಭಾರತಕ್ಕೆ ಯುದ್ಧ ವಿಮಾನ ಮಾರಾಟಕ್ಕೆ ಅಮೆರಿಕದ ಎಫ್-16, ಸ್ವೀಡನ್ನ ಗ್ರಿಪನ್, ಫ್ರಾನ್ಸ್ನ ರೆಲ್ ಪೈಪೋಟಿಗಿಳಿದಿದ್ದವು.
ಐದು ದಿನಗಳ ವೈಮಾನಿಕ ಹಬ್ಬದಲ್ಲಿ ಪ್ರಮುಖವಾಗಿ ದೇಶದ ತೇಜಸ್, ಎಲ್ಸಿಎಚ್,ಎಲ್ಸಿಎಗಳೊಂದಿಗೆ ಅಮೆರಿಕದ ಎಫ್16, ಸುಖೊಯ್, ರೆಲ್, ಗ್ರಿಪನ್ ಮೊದಲಾದ ವಿಮಾನಗಳು ಪ್ರಮುಖ ಆಕರ್ಷಣೆಯಾಗಿದ್ದವು. ಬಾನಂಗಳದಲ್ಲಿ ಬಣ್ಣದ ಚಿತ್ತಾರ ಬಿಡಿಸುವ ಸಾರಂಗ್ ಹೆಲಿಕಾಪ್ಟರ್ಗಳು ಈ ಬಾರಿ ಬಣ್ಣ ಹೊರ ಸೂಸದೇ, ಸೂರ್ಯ ಕಿರಣ್ ಕೂಡ ಬಣ್ಣದ ಚಿತ್ತಾರ ಬಿಡಿಸದೇ ಲಕ್ಷಾಂತರ ಜನರ ನಿರೀಕ್ಷೆಗಳಿಗೆ ತಣ್ಣೀರೆರಚಿದವು. ಸ್ಕಾಂಡಿನೇವಿಯದ ಬೆಡಗಿಯರು ವಿಮಾನ ಹಾರಾಡುವಾಗಲೇ ರೆಕ್ಕೆಗಳ ಮೇಲೆ ಕ್ಯಾಟ್ವಾಕ್ ಮಾಡಿ ಮೈನವಿರೇಳಿಸುವ ಪ್ರದರ್ಶನ ನೀಡಿದರು. ಇಂಗ್ಲಂಡ್ನ ಹಾಕ್ ಎದೆ ಝಲ್ಲೆನಿಸುವ ಸಾಹಸ ಪ್ರದರ್ಶನಗಳನ್ನು ನೀಡಿದರೆ, ಎಚ್ಎಎಲ್ ಹೆಲಿಕಾಪ್ಟರ್ಗಳು ಮೇಕ್ ಇನ್ ಇಂಡಿಯಾ ಮೆರವಣಿಗೆ ನಡೆಸಿದವು.
ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಉದ್ಘಾಟಿಸಿದ ಏರೋ ಇಂಡಿಯಾ 2017ರಲ್ಲಿ ಕೇಂದ್ರ ಸಚಿವರಾದ ಅಶೋಕ್ ಗಜಪತಿ ರಾಜು, ರಾಜೀವ್ ಪ್ರತಾಪ್ ರೂಢಿ, ರಾಜ್ಯದ ಸಚಿವರಾದ ಆರ್.ವಿ.ದೇಶಪಾಂಡೆ, ಪ್ರಿಯಾಂಕ ಖರ್ಗೆ ಮೊದಲಾದವರು ಭಾಗವಹಿಸಿದ್ದರು. ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಮೂರು ದಿನಗಳ ಕಾಲ ಏರೋ ಇಂಡಿಯಾಕ್ಕೆ ಬಂದು, ಮುಂದಿನ ಏರೋ ಇಂಡಿಯಾವನ್ನು ಗೋವಾಕ್ಕೆ ಕೊಂಡೊಯ್ಯುವ ಲಾಬಿ ನಡೆಸಿದರು. ಆದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಇತ್ತ ಸುಳಿಯಲೇ ಇಲ್ಲ. ಉದ್ಯಮದ ದಿಗ್ಗಜರಾದ ರಿಲಯನ್ಸ್ನ ಅನಿಲ್ ಅಂಬಾನಿ, ಟಾಟಾ ಸಮೂಹದ ರತನ್ಟಾಟಾ, ಭಾಗವಹಿಸಿದ್ದ ಪ್ರಮುಖರಾಗಿದ್ದರೆ ಅನಿಲ್ ಅಂಬಾನಿ, ರಾಜೀವ್ ಪ್ರತಾಪ್ ರೂಢಿ ವಿಮಾನವನ್ನು ಸಹ ಪೈಲಟ್ ಹಾಗೂ ಪ್ರಯಾಣಿಕರಾಗಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.
ಐದು ದಿನಗಳ ದ್ವೈವಾರ್ಷಿಕ ವಿಮಾನ ಹಬ್ಬಕ್ಕೆ ಶನಿವಾರ ಸಂಜೆ ತೆರೆ ಬಿದ್ದಿದ್ದು, ಮುಂದಿನ ಏರೋ ಇಂಡಿಯಾದ ಆತಿಥ್ಯ ಬೆಂಗಳೂರಿನಲ್ಲೇ ಉಳಿಯುವುದೇ ಎಂಬ ಪ್ರಶ್ನೆಯೊಂದಿಗೆ ಲಕ್ಷಾಂತರ ಜನರು ವಿಮಾನಗಳ ಆಕಾಶ ಚಿತ್ತಾರ, ಕಿವಿಗಡಚಿಕ್ಕುವ ಬೋರ್ಗರೆತದ ದನಿಗಳ ನೆನಪುಗಳೊಂದಿಗೆ ಮರಳಿದ್ದಾರೆ. ಗೋವಾ ಸರ್ಕಾರ ಹಾಗೂ ಕೇಂದ್ರದಲ್ಲಿರುವ ಗೋವಾ ಮೂಲದ ಪ್ರಭಾವಿ ಸಚಿವರು ಈ ವೈಮಾನಿಕ ಉತ್ಸವವನ್ನು ಗೋವಾಕ್ಕೆ ಒಯ್ಯಲು ಪ್ರಬಲ ಲಾಬಿ ನಡೆಸುತ್ತಿರುವುದು ಈ ವೈಮಾನಿಕ ಪ್ರದರ್ಶನದ ವೇಳೆಯೂ ಕಂಡು ಬಂತು. ಇಂತಹುದೇ ಪ್ರಯತ್ನವನ್ನು ಕಳೆದ ಬಾರಿಯೂ ಗೋವಾ ಮಾಡಿ ವಿಫಲವಾಗಿತ್ತು. ಮುಂದಿನ ಬಾರಿಗೂ ಗೋವಾ ಪ್ರಯತ್ನ ವಿಫಲವಾಗಲಿ ಎಂಬುದು ಬೆಂಗಳೂರಿಗರ ಆಶಯ.
-------
