Asianet Suvarna News Asianet Suvarna News

ಏರೋ ಇಂಡಿಯಾಗೆ ಕ್ಷಣಗಣನೆ... ರಾಫೆಲ್ ಚಮತ್ಕಾರ ನೋಡಲು ಮರೆಯದಿರಿ...

ಏರ್ ಶೋ ಮೂಲಕ ದೇಶದಲ್ಲಿ ಯುದ್ಧ ವಿಮಾನಗಳ ಉತ್ಪಾದನೆಗೆ ಒತ್ತು ನೀಡುವುದು ಮತ್ತು ಆ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಗೆ ಬಲ ತುಂಬುವ ಉದ್ದೇಶ ಇದೆ.

Aero India 2017 Countdown Start Now All eyes on Rafale

ಬೆಂಗಳೂರು(ಫೆ.14): ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಲೋಹದ ಹಕ್ಕಿಗಳ ಹವಾ ಶುರುವಾಗಲಿದೆ. 11 ನೇ ಆವೃತ್ತಿಯ ಏರೋ ಇಂಡಿಯಾ-2017 ರ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಏರ್ ಶೋ ವಿಶೇಷಗಳೇನು...? ಯಾವೆಲ್ಲ ಯುದ್ಧ ವಿಮಾನಗಳು ತಮ್ಮ ಶಕ್ತಿ ಪ್ರದರ್ಶನ ನಡೆಸಲಿವೆ ಅನ್ನೋ ಡೀಟೇಲ್ಸ್ ಇಲ್ಲಿದೆ...

ಪ್ರತೀ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನಲ್ಲಿ ನಡೆಯಲಿರುವ ಏರ್ ಶೋ ಆರಂಭಕ್ಕೆ ಕ್ಷಣಗಣನೆ ಅರಂಭವಾಗಿದೆ. ಇಂದು ಬೆಳಗ್ಗೆ 9.30ಕ್ಕೆ ಅಧಿಕೃತವಾಗಿ ಉದ್ಘಾಟನೆಯಾಗಲಿದೆ. ಇಂದು ಆರಂಭವಾಗಲಿರುವ ಏರ್ ಶೋ ಐದು ದಿನಗಳ ಕಾಲ ಅಂದರೆ ಶನಿವಾರದವರೆಗೆ ನಡೆಯಲಿದೆ. ಮೊದಲ ಎರಡು ದಿನ ವ್ಯಾವಹಾರಿಕ ಪ್ರಕ್ರಿಯೆಗಳು ನಡೆಯಲಿದ್ದು, ಗುರುವಾರದಿಂದ ಸಾರ್ವಜನಿಕರಿಗೆ ಪ್ರವೇಶ ನೀಡಲಾಗುತ್ತದೆ. ವಿಶ್ವದ ಮೂವತ್ತು ಬಲಾಡ್ಯ ಮಿಲಿಟರಿ ದೇಶಗಳು ಈ ಬಾರಿಯ ಏರ್ ಶೋನಲ್ಲಿ ಭಾಗವಹಿಸಲಿವೆ. ದೇಶದ 270 ಕಂಪನಿಗಳು ಮತ್ತು ವಿದೇಶಗಳ 279 ಕಂಪನಿಗಳು ಈ ಬಾರಿಯ ಪ್ರದರ್ಶನದಲ್ಲಿ ಭಾಗಿಯಾಗಲಿವೆ. 70ಕ್ಕೂ ಹೆಚ್ಚು ವಿಮಾನಗಳ ಪ್ರದರ್ಶನ ಮತ್ತು ಹಾರಾಟ ನಡೆಯಲಿದೆ. ಜೊತೆಗೆ ಮಿಲಿಟರಿ ತಂತ್ರಗಾರಿಕೆ, ಸಾಧನಗಳು, ತಂತ್ರಜ್ಞಾನದ ಅನಾವರಣವಾಗಲಿದೆ. ಮೇಕ್ ಇನ್ ಇಂಡಿಯಾ ಯೋಜನೆಗೆ ಪೂರಕವಾಗುವಂತೆ ರಕ್ಷಣಾ ಕ್ಷೇತ್ರದಲ್ಲಿ ದೇಶದಲ್ಲಿ ಯುದ್ಧ ವಿಮಾನಗಳ ತಯಾರಿಗೆ ಈ ಏರ್ ಶೋ ಸಹಕಾರಿಯಾಗಲಿದೆ.

ಈ ಬಾರಿಯ ವಿಶೇಷತೆ ಏನು?

ಫ್ರಾನ್ಸ್'ನಿಂದ ಖರೀದಿ ಮಾಡಲು ಮುಂದಾಗಿರುವ ಅತ್ಯಾಧುನಿಕ ಯುದ್ಧ ವಿಮಾನ ರಾಫೆಲ್ ಏರ್ ಶೋನ ಕೇಂದ್ರ ಬಿಂದು. ಇದರ ಜೊತೆಗೆ ಅಮೆರಿಕದ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನ  ಎಫ್ 16 ಏರ್ ಶೋ ನಲ್ಲಿ ಸದ್ದು ಮಾಡಲಿದೆ. ಇನ್ನು ದೇಶೀಯವಾಗಿ ಎಚ್'ಎಎಲ್ ತಯಾರಿಸಿರುವ ತೇಜಸ್ ವಿಮಾನಗಳು ತಮ್ಮ ಶಕ್ತಿಯನ್ನು ಅನಾವರಣಗೊಳಿಸಲಿವೆ. ಇನ್ನು ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ರೋಬೋಟಿಕ್ ತಂಡಗಳಾದ ಸೂರ್ಯಕಿರಣ್, ಸಾರಂಗ್ ಏರ್ ಶೋ ದಲ್ಲಿ ಮಿಂಚಲಿವೆ. 

ಮೇಕ್ ಇನ್ ಇಂಡಿಯಾ ಅಜೆಂಡಾ

ಏರ್ ಶೋ ಮೂಲಕ ದೇಶದಲ್ಲಿ ಯುದ್ಧ ವಿಮಾನಗಳ ಉತ್ಪಾದನೆಗೆ ಒತ್ತು ನೀಡುವುದು ಮತ್ತು ಆ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಗೆ ಬಲ ತುಂಬುವ ಉದ್ದೇಶ ಇದೆ. ವಿಮಾನಯಾನ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಬಂಡವಾಳ ಸೆಳೆಯಲು ಆಂಧ್ರ ಪ್ರದೇಶ ಎಲ್ಲ ರಾಜ್ಯಗಳಿಗಿಂತಲೂ ಮುಂದಿದೆ. ಗುಜರಾತ್, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಈ ಕ್ಷೇತ್ರದಲ್ಲಿ ಬಂಡವಾಳ ಸೆಳೆಯಲು ಪ್ರಯತ್ನ ನಡೆಸಲಿವೆ.

ಈ ಬಾರಿಯ ಏರ್ ಶೋ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿಲ್ಲ. ರಕ್ಷಣಾ ಸಚಿವ ಮನೋಹರ ಪರಿಕ್ಕರ್, ನಾಗರೀಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು, ರಕ್ಷಣಾ ಇಲಾಖೆ ಮತ್ತು ವಾಯು ಸೇನೆಯ ಅಧಿಕಾರಿಗಳು, ದೇಶ ವಿದೇಶಗಳ ವಿಮಾನ ನಿರ್ಮಾಣ ಕಂಪನಿಯ ಉದ್ಯಮಿಗಳು ಏರ್ ಶೋ ದಲ್ಲಿ ಭಾಗವಹಿಸಲಿದ್ದಾರೆ. ಏರ್ ಶೋದಿಂದಾಗಿ ಬೆಂಗಳೂರು ನಗರ ಮುಂದಿನ ಐದು ದಿನಗಳ ಕಾಲ ವಿಶ್ವದ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ.

ಶಶಿಶೇಖರ್ ಕ್ರೈಂ ಬ್ಯೂರೊ ಸುವರ್ಣ ನ್ಯೂಸ್

Follow Us:
Download App:
  • android
  • ios