Asianet Suvarna News Asianet Suvarna News

ಜುಲೈನಿಂದ ಬಿಎಂಟಿಸಿ ಬಸ್ ಜಾಹೀರಾತು ಮುಕ್ತ!: ಬಿಎಂಟಿಸಿಗೆ ಮಾಸಿಕ 1.50 ಕೋಟಿ ರು. ಆದಾಯ ಖೋತಾ

ಇನ್ನು ಮುಂದೆ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಬಸ್‌ಗಳ ಹೊರ ಕವಚದಲ್ಲಿ ಜಾಹೀರಾತುಗಳು ಇರುವುದಿಲ್ಲ! ಪ್ರಯಾಣಿಕರಿಂದ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬಸ್ ನ ಹೊರ ಕವಚವನ್ನು ಜಾಹೀರಾತುಗಳಿಂದ ಮುಕ್ತಗೊಳಿಸಲು ಬಿಎಂಟಿಸಿ ತೀರ್ಮಾನಿಸಿದೆ.

Advertisements on BMTC buses will be stopped

ಬೆಂಗಳೂರು(ಅ.01): ಇನ್ನು ಮುಂದೆ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಬಸ್‌ಗಳ ಹೊರ ಕವಚದಲ್ಲಿ ಜಾಹೀರಾತುಗಳು ಇರುವುದಿಲ್ಲ! ಪ್ರಯಾಣಿಕರಿಂದ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬಸ್ ನ ಹೊರ ಕವಚವನ್ನು ಜಾಹೀರಾತುಗಳಿಂದ ಮುಕ್ತಗೊಳಿಸಲು ಬಿಎಂಟಿಸಿ ತೀರ್ಮಾನಿಸಿದೆ.

ಈ ದೃಢ ನಿರ್ಧಾರದಿಂದ ಬಿಎಂಟಿಸಿ ಮಾಸಿಕ 1.50 ಕೋಟಿ ಆದಾಯ ಖೋತಾ ಆಗಲಿದ್ದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. 2013ರಲ್ಲಿ ನಿಗಮದ 3500 ಬಸ್ ಗಳ ಹೊರ ಕವಚದಲ್ಲಿ ಜಾಹೀರಾತು ಪ್ರಕಟಣೆಗೆ ನೀಡಿದ್ದ ಟೆಂಡರ್ ಅವಧಿ 2018ರ ಜುಲೈಗೆ ಅಂತ್ಯಗೊಳ್ಳಲಿದೆ. ಅಲ್ಲಿಂದ ನಿಗಮದ ಬಸ್‌ಗಳ ಹೊರ ಕವಚ ಜಾಹೀರಾತುಗಳಿಂದ ಮುಕ್ತವಾಗಲಿದೆ. ಆದರೆ, ಬಸ್‌ನ ಹಿಂಭಾಗದ ಕವಚದಲ್ಲಿ ಜಾಹೀರಾತು ಮುಂದುವರಿಯಲಿದೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ನಿಗಮದ ಬಸ್‌'ಗಳ ಹೊರ ಕವಚದಲ್ಲಿ ಜಾಹೀರಾತು ಹಾಕುವುದರಿಂದ ಬಸ್‌'ನ ಅಂದ ಹಾಳಾಗುತ್ತದೆ. ಕಿಟಕಿ ಗಾಜು ಸ್ಪಷ್ಟವಾಗಿ ಕಾಣುವುದಿಲ್ಲ, ಕಿರಿಕಿರಿ ಅನುಭವ, ಹೊರ ನೋಟಕ್ಕೆ ಖಾಸಗಿ ಬಸ್ ರೀತಿ ಗೋಚರವಾಗುತ್ತದೆ ಎಂಬಿತ್ಯಾದಿ ದೂರುಗಳು ಪ್ರಯಾಣಿಕರಿಂದ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ನಿಗಮದ ನಿದೇರ್ಶಕರ ಮಂಡಳಿ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಸುದೀರ್ಘ ಚರ್ಚೆಯ ಬಳಿಕ ಬಸ್‌ಗಳ ಹೊರ ಕವಚವನ್ನು ಜಾಹೀರಾತುಗಳಿಂದ ಮುಕ್ತಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಆದಾಯ ಖೋತಾ:

ನಿಗಮದ 6250 ಬಸ್‌ಗಳ ಪೈಕಿ 3500 ಬಸ್‌ಗಳ ಹೊರಕವಚವನ್ನು ಜಾಹೀರಾತಿಗೆ ನೀಡಲು 2013ರಲ್ಲಿ ಟೆಂಡರ್ ಆಹ್ವಾನಿಸಿ ಪ್ರಕ್ರಿಯೆ ಮುಗಿಸಲಾಗಿತ್ತು. ಇದರಿಂದ ನಿಗಮಕ್ಕೆ ಮಾಸಿಕ 1.50 ಕೋಟಿ ರು. ಆದಾಯ ಬರುತ್ತಿತ್ತು. ಈಗಿನ ನಿರ್ಧಾರದಿಂದ ನಿಗಮದ ಆದಾಯಕ್ಕೆ ಹೊಡೆತ ಬೀಳಲಿದೆ.

ಆದರೂ ಪ್ರಯಾಣಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ನೀಡುವುದೇ ನಿಗಮದ ಪ್ರಥಮ ಆದ್ಯತೆಯಾಗಿರುವುದರಿಂದ ಈ ತೀರ್ಮಾನ ಅನಿವಾರ್ಯವಾಗಿದೆ. ಈ ತೀರ್ಮಾನದ ಬಳಿಕ 1000 ಸಾವಿರ ಬಸ್‌ಗಳ ಹಿಂಭಾಗದ ಹೊರಕವಚಗಳಿಗೆ ಸೀಮಿತವಾಗಿ ಜಾಹೀರಾತಿಗೆ ನೀಡಲು ಟೆಂಡರ್ ಕರೆದು ಪ್ರಕ್ರಿಯೆ ಮುಗಿಸಲಾಗಿದೆ. ಇನ್ನು ಮುಂದೆಯೂ ಈ ಮಾದರಿಯ ಪ್ರಕ್ರಿಯೆ ಮುಂದುವರಿಯಲಿದೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಯಾಣಿಕರ ಸೇವೆಗೆ ಮೊದಲ ಆದ್ಯತೆ. ಇದರಲ್ಲಿ ಲಾ‘-ನಷ್ಟದ ಲೆಕ್ಕ ಬರುವುದಿಲ್ಲ. ಪ್ರಯಾಣಿಕರ ಸಲಹೆ-ಸೂಚನೆಗೆ ಬಿಎಂಟಿಸಿ ಮುಕ್ತವಾಗಿದೆ. ನಿಗಮದ ಪ್ರಯಾಣಿಕ ಸ್ನೇಹಿ ಯೋಜನೆಗಳಿಗೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ ಎಂದು ಅಧಿಕಾರಿ ಹೇಳುತ್ತಾರೆ.

-ಮೋಹನ್ ಹಂಡ್ರಂಗಿ, ಬೆಂಗಳೂರು

 

Follow Us:
Download App:
  • android
  • ios