ಯುವೋತ್ಸಾಹಿಗಳ ಜಮಾನಾ ಇದು. ಒಬ್ಬೊಬ್ಬರಿಗೂ ಒಂದೊಂದು ಉತ್ಸಾಹ. ಉನ್ನತ ಶಿಖರವೇರುವ, ಆಳ ಸಮುದ್ರದಲ್ಲಿ ಮುಳುಗುವ, ದುಡ್ಡೇ ಇಲ್ಲದೆ ಪ್ರಪಂಚ ಸುತ್ತುವ, ದುರ್ಗಮ ಹಾದಿ ಕ್ರಮಿಸುವ... ಹೀಗೆ ಸಾಹಸೀ ಮನೋಭಾವದವರಿಗೆ ಹತ್ತಾರು ಹುಚ್ಚು. ಅಂತಹುದೇ ಒಂದು ಸಾಹಸಕ್ಕೆ ಕೈ ಹಾಕಿದ್ದಾರೆ ಮೂವರು ಅಚ್ಚ ಕನ್ನಡಿಗರು. 6 ದೇಶಗಳ ಮೂಲಕ ಬರೋಬ್ಬರಿ 12 ಸಾವಿರ ಕಿಲೋಮೀಟರುಗಳ ದ್ವಿಚಕ್ರವಾಹನ ಯಾನ. ಅದೂ 45 ದಿನಗಳಲ್ಲಿ.

ಬೆಂಗಳೂರು(ಮೇ.11): ಯುವೋತ್ಸಾಹಿಗಳ ಜಮಾನಾ ಇದು. ಒಬ್ಬೊಬ್ಬರಿಗೂ ಒಂದೊಂದು ಉತ್ಸಾಹ. ಉನ್ನತ ಶಿಖರವೇರುವ, ಆಳ ಸಮುದ್ರದಲ್ಲಿ ಮುಳುಗುವ, ದುಡ್ಡೇ ಇಲ್ಲದೆ ಪ್ರಪಂಚ ಸುತ್ತುವ, ದುರ್ಗಮ ಹಾದಿ ಕ್ರಮಿಸುವ... ಹೀಗೆ ಸಾಹಸೀ ಮನೋಭಾವದವರಿಗೆ ಹತ್ತಾರು ಹುಚ್ಚು. ಅಂತಹುದೇ ಒಂದು ಸಾಹಸಕ್ಕೆ ಕೈ ಹಾಕಿದ್ದಾರೆ ಮೂವರು ಅಚ್ಚ ಕನ್ನಡಿಗರು. 6 ದೇಶಗಳ ಮೂಲಕ ಬರೋಬ್ಬರಿ 12 ಸಾವಿರ ಕಿಲೋಮೀಟರುಗಳ ದ್ವಿಚಕ್ರವಾಹನ ಯಾನ. ಅದೂ 45 ದಿನಗಳಲ್ಲಿ.

ಭಾರತದ ವಾಯವ್ಯ ದಿಕ್ಕಿನಲ್ಲಿರುವ ಮಧ್ಯ ಏಷ್ಯಾ ದೇಶವಾದ ಉಜ್ಬೇಕಿಸ್ತಾನ್‌ ರಾಜಧಾನಿ ತಾಷ್ಕೆಂಟ್‌ನಿಂದ 3 ಬೈಕ್‌ಗಳಲ್ಲಿ ಹೊರಟು ಸೈಬೀರಿಯಾವೂ ಸೇರಿದಂತೆ ಕಠಿಣಾತಿಕಠಿಣ ಹಾದಿಗಳನ್ನು ಕ್ರಮಿಸಿ ರಷ್ಯಾದ ಪೂರ್ವ ತುದಿಯಲ್ಲಿರುವ ಬಂದರು ನಗರಿ ಮಗದಾನ್‌ ತಲುಪುವ ಸಾಹಸವಿದು. ಇದು ಬರಿಯ ಸಾಹಸವಷ್ಟೇ ಅಲ್ಲ, ದಾಖಲೆಗಳ ಯಾನ.

ಭಾರತದಲ್ಲೇ ತಯಾರಾದ ಬೈಕೊಂದು ಈ ಮಾರ್ಗದಲ್ಲಿ ಕ್ರಮಿಸುವುದು ಇದೇ ಮೊದಲು ಎಂಬುದು ಒಂದು ದಾಖಲೆ. ಸರ್ವಭಾರತೀಯರ ತಂಡವೊಂದು ಈ ಹಾದಿಯಲ್ಲಿ ಸಾಗುತ್ತಿದೆ ಎಂಬುದು ಮತ್ತೊಂದು ದಾಖಲೆ. ತಾಷ್ಕೆಂಟ್‌-ಮಗದಾನ್‌ ನಡುವೆ ಬೈಕ್‌ ಚಲಾಯಿಸುತ್ತಿರುವ ಮೊದಲ ಕನ್ನಡಿಗರು ಎಂಬುದು ಮಗದೊಂದು ದಾಖಲೆ. ಹಾಗಾಗಿಯೇ, ಇದು ಕನ್ನಡಿಗರೆಲ್ಲ ಹೆಮ್ಮೆಪಡುವಂತಹ ಸಂಗತಿ.

ದಾಖಲೆವೀರನ ನೇತೃತ್ವ: ಬೈಕ್‌ನಲ್ಲಿ ಈ ಪರಿಯ ಸಾಹಸಮಯ ಪಯಣದ ಮುಂಚೂಣಿ ವಹಿಸಿರುವವರು ನುರಿತ ರೈಡರ್‌ ದೀಪಕ್‌ ಕಾಮತ್‌. 1994ರಲ್ಲಿ ಅಂದರೆ ಸರಿಸುಮಾರು 23 ವರ್ಷಗಳ ಹಿಂದೆಯೇ ವಿಶ್ವದಾಖಲೆ ಬರೆದ ಖ್ಯಾತಿ ಇವರದು. ಯೆಜ್ಡಿ ಬೈಕ್‌ನಲ್ಲಿ ಕೇವಲ 47 ದಿನಗಳಲ್ಲಿ 42 ಸಾವಿರಕ್ಕೂ ಅಧಿಕ ಕಿಲೋಮೀಟರ್‌ ಕ್ರಮಿಸಿ ವಿಶ್ವ ಪರ್ಯಟನೆ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದರು ದೀಪಕ್‌.

3 ದಕ್ಷಿಣ ಕನ್ನಡಿಗರು: ಇದೀಗ ಮತ್ತೊಂದು ಸಾಹಸಕ್ಕೆ ಸಜ್ಜಾಗಿ ನಿಂತಿರುವ ದೀಪಕ್‌ ಕಾಮತ್‌ ಹಾಗೂ ಅವರ ಸಹ ರೈಡರ್‌ಗಳಾದ ದಿಲೀಪ್‌ ಕೃಷ್ಣ ಭಟ್‌ ಮತ್ತು ಸುಧೀರ್‌ ಪ್ರಸಾದ್‌ ಮೂವರೂ ಕನ್ನಡಿಗರು. ದಕ್ಷಿಣ ಕನ್ನಡ ಜಿಲ್ಲೆಯವರು ಎಂಬುದು ಮತ್ತೊಂದು ವಿಶೇಷ. ಮೂವರಿಗೂ ಬೆಂಗಳೂರಲ್ಲಿ ಉದ್ಯೋಗ. ನುರಿತ ಬೈಕರ್‌ ಆಗಿರುವ ದೀಪಕ್‌ಗೆ ವಿತ್ತೀಯ ಸೇವೆ ಒದಗಿಸುವ ಸಂಸ್ಥೆಯೊಂದರಲ್ಲಿ ಕೆಲಸ. ದಿಲೀಪ್‌ ಹಾಗೂ ಸುಧೀರ್‌ಗೆ ಪ್ರತ್ಯೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸಾಫ್ಟ್‌ವೇರ್‌ ಕ್ಷೇತ್ರದ ನೌಕರಿ.

ಬಜಾಜ್‌ ಡಾಮಿನಾರ್‌ ಬೈಕ್‌: ಇವರ ಸಾಹಸಕ್ಕೆ ಸಹಕಾರ ಒದಗಿಸುತ್ತಿರುವುದು ದೇಶದ ಅಗ್ರಣಿ ಬೈಕ್‌ ತಯಾರಿಕಾ ಕಂಪನಿಗಳಲ್ಲೊಂದಾದ ಬಜಾಜ್‌. ಅದರ ಡಾಮಿನಾರ್‌-400 ಶ್ರೇಣಿಯ ಮೂರು ಬೈಕ್‌ಗಳನ್ನು ಈ ಸವಾರಿಗೆಂದೇ ಸಜ್ಜುಗೊಳಿಸಲಾಗಿದೆ. ಪುಣೆಯಲ್ಲಿರುವ ಬಜಾಜ್‌ನ ಸಂಶೋಧನಾ ಮತ್ತು ಅಭಿವೃದ್ಧಿ ತಂಡ ಹಗಲಿರುಳು ಶ್ರಮಿಸಿ ದುರ್ಗಮ ಹಾದಿಗೂ ಅನುಕೂಲವಾಗುವಂತೆ ಬೈಕ್‌ಗಳನ್ನು ಸಿದ್ಧಪಡಿಸಿದೆ.

ಈಗಾಗಲೇ ಬೈಕ್‌ಗಳು ಬೆಂಗಳೂರಿಗೆ ಬಂದಿಳಿದಿವೆ. ಇನ್ನು ಸುಮಾರು 15 ದಿನಗಳ ಕಾಲ ಮೂವರೂ ಬೈಕರುಗಳು ಅವುಗಳನ್ನು ಚಲಾಯಿಸಿ ಒಗ್ಗಿಕೊಳ್ಳಲಿದ್ದಾರೆ. ಮೇ ತಿಂಗಳ ಅಂತ್ಯಕ್ಕೆ ಬೆಂಗಳೂರಿನಿಂದ ಪುಣೆಗೆ ಸವಾರಿ ಮಾಡಲಿದ್ದಾರೆ. ಅಲ್ಲಿಂದ ವಿಮಾನದ ಮೂಲಕ ಬೈಕ್‌ ಹಾಗೂ ಬೈಕರ್‌ಗಳು ಉಜ್ಬೇಕಿಸ್ತಾನ್‌ಗೆ ಹಾರಲಿದ್ದಾರೆ.

ದೇಶಗಳ ಗಡಿ ದಾಟಿ: ಅದು ಭಾರತದ ವಾಯವ್ಯದಲ್ಲಿರುವ, ನೈಋುತ್ಯ ರಷ್ಯಾದ ದಕ್ಷಿಣಕ್ಕಿರುವ ದೇಶ. ತಾಷ್ಕೆಂಟ್‌ ಅದರ ರಾಜಧಾನಿ. ಅಲ್ಲಿಂದಲೇ ಕನ್ನಡಿಗರ ಸುದೀರ್ಘ ಬೈಕ್‌ ಯಾನಕ್ಕೆ ಮುನ್ನುಡಿ. ಜೂ.9ರಂದು ತಾಷ್ಕೆಂಟ್‌ನಿಂದ ಹೊರಟು ಸುಮಾರು 450 ಕಿ.ಮೀ. ದೂರದ ತಾಜಿಕಿಸ್ತಾನ ರಾಜಧಾನಿ ದುಶಾನ್ಬೆ ತಲುಪುವುದು ಅವರ ಮೊದಲ ಹಂತ. ಅಲ್ಲಿಂದ ಆರಂಭವಾಗುವುದು ನೈಜ ಯಾನ.

ತಾಜಿಕಿಸ್ತಾನ್‌ನಿಂದ ಶುರುವಾಗುವ ಪ್ರಯಾಣ ಬಹುತೇಕ ಪೂರ್ವ ಹಾಗೂ ಈಶಾನ್ಯ ದಿಕ್ಕಿನಲ್ಲಿ ಸಾಗುತ್ತದೆ. ಕಿರ್ಗಿಸ್ತಾನ್‌, ಕಜಕ್‌ಸ್ತಾನ್‌ ದೇಶಗಳನ್ನು ಚೀನಾ ಗಡಿಯ ಸಮೀಪವೇ ಹಾದು ರಷ್ಯಾ ಪ್ರವೇಶಿಸುವುದು ಯಾನದ ದ್ವಿತೀಯ ಹಂತ. ಅಲ್ಲಿಂದ ಮಂಗೋಲಿಯಾ ದೇಶದ ಒಳಹೊಕ್ಕು ಹತ್ತಾರು ದಿನಗಳ ಕಾಲ ಪ್ರಯಾಣಿಸಿ ಮತ್ತೆ ರಷ್ಯಾ ಪ್ರವೇಶಿಸಲಿದೆ ಬೈಕರುಗಳ ತಂಡ. ಅಲ್ಲಿಗೆ ಪ್ರವಾಸದ ಮೂರನೇ ಹಂತ ಅಂತ್ಯ.

ದುರ್ಗಮ ಹಾದಿ: ನಾಲ್ಕನೇ ಹಂತ ಅತ್ಯಂತ ಕಠಿಣ ಮತ್ತು ಹಾದಿ ದುರ್ಗಮ. ವಿಶ್ವದ ಅತಿದೊಡ್ಡ ಸರೋವರ ಎಂದೇ ಖ್ಯಾತಿವೆತ್ತ ಬೈಕಲ್‌ ಲೇಕ್‌ ಸನಿಹದಲ್ಲೇ ಸುಳಿಯುತ್ತ ಸಾಗುತ್ತದೆ ಪ್ರಯಾಣ. ಸುಮಾರು 2300 ಕಿ.ಮೀ. ಉದ್ದದ ದಂಡೆ ಹೊಂದಿರುವ ಈ ಸರೋವರದ ವಿಸ್ತೀರ್ಣ ಸರಿಸುಮಾರು ಬ್ರಿಟನ್‌ ದೇಶದ ವಿಸ್ತೀರ್ಣಕ್ಕೆ ಸಮ ಎಂದರೆ ಅದರ ಗಾತ್ರ ಊಹಿಸಿಕೊಳ್ಳಿ. ಈ ಸರೋವರಕ್ಕೆ ಒಂದು ಸುತ್ತು ಹೊಡೆಯಲು ಏಳೆಂಟು ದಿನಗಳೇ ಬೇಕು.

ತಾಪಮಾನ ಶೂನ್ಯದ ಸುತ್ತ ಸುಳಿಯುತ್ತಿದ್ದಂತೆ ಕೊರೆಯುವ ಚಳಿ, ಸಿದ್ಧ ರಸ್ತೆಯೇ ಇಲ್ಲದ ಹಳ್ಳ-ದಿಣ್ಣೆಗಳ ಮಾರ್ಗ, ಜನವಸತಿಯೇ ಇಲ್ಲದ ಪ್ರದೇಶಗಳಲ್ಲಿ ಯಾನ, ಸೈಬೀರಿಯಾದಲ್ಲಿ ಕರಡಿಗಳಂತಹ ಅಪಾಯಕಾರಿ ಹಿಮಮೃಗಗಳ ಆವಾಸಸ್ಥಾನಗಳ ಸವಾಲುಗಳನ್ನು ಮೀರಿ ಮಗದಾನ್‌ ಬಂದರು ತಲುಪುವಲ್ಲಿಗೆ ಕನ್ನಡಿಗರ ಯಾತ್ರೆಗೆ ಪೂರ್ಣವಿರಾಮ.

-3 ದಾಖಲೆ: ಈ ಮಾರ್ಗದಲ್ಲಿ ಪ್ರಯಾಣಿಸುತ್ತಿರುವ ಮೊದಲ ಭಾರತೀಯ ಬೈಕ್‌, ಮೊದಲ ಸರ್ವಭಾರತೀಯ ತಂಡ ಮತ್ತು ಮೊದಲ ಕನ್ನಡಿಗರು ಎಂಬ ವಿಶಿಷ್ಟದಾಖಲೆ

-3 ಮಂದಿ: ಮೂವರೂ ಬೈಕರ್‌ಗಳು ಅಚ್ಚ ಕನ್ನಡಿಗರು. ಅಷ್ಟೂಮಂದಿ ದಕ್ಷಿಣ ಕನ್ನಡ ಮೂಲದ ವರು. ಬೆಂಗಳೂರಿನಲ್ಲಿ ಇವರ ಉದ್ಯೋಗ

-6 ದೇಶ: ಉಜ್ಬೇಕಿಸ್ತಾನ್‌, ತಾಜಿಕಿಸ್ತಾನ್‌, ಕಿರ್ಗಿಸ್ತಾನ್‌, ಕಜಕ್‌ಸ್ತಾನ್‌, ಮಂಗೋಲಿಯಾ, ರಷ್ಯಾ ದೇಶಗಳಲ್ಲಿ ಸಾಗಲಿದೆ ಕನ್ನಡಿಗರ ಯಾನ

-12000 ಕಿ.ಮೀ.: ಮಧ್ಯ ಏಷ್ಯಾದ ಉಜ್ಬೇಕಿಸ್ತಾನ್‌ ದೇಶದ ರಾಜಧಾನಿ ತಾಷ್ಕೆಂಟ್‌ನಿಂದ ಪೂರ್ವ ರಷ್ಯಾದ ಸೈಬೀರಿಯಾದಲ್ಲಿರುವ ಮಗದಾನ್‌ವರೆಗಿನ ಪ್ರಯಾಣದ ದೂರ

-45 ದಿನ: ಇದೇ ಜೂನ್‌ 9ರಿಂದ ಆರಂಭವಾಗಲಿರುವ ಸುದೀರ್ಘ ದ್ವಿಚಕ್ರವಾಹನ ಯಾನ ಜುಲೈ 25ರ ಸುಮಾರಿಗೆ ಸಂಪೂರ್ಣಗೊಳ್ಳುವ ಅಂದಾಜು

ವರದಿ: ರವಿಶಂಕರ್ ಭಟ್, ಕನ್ನಡಪ್ರಭ