Asianet Suvarna News Asianet Suvarna News

ಬಾಬ್ರಿ ಪ್ರಕರಣ: ಆಡ್ವಾಣಿ, ಜೋಷಿ ಮತ್ತಿತರರ ವಿರುದ್ಧ ಮರುವಿಚಾರಣೆಗೆ ಸುಪ್ರೀಂ ಆದೇಶ

ಪ್ರಕರಣದ ವಿಚಾರಣೆಯನ್ನು 2 ವರ್ಷದಲ್ಲಿ ಮುಕ್ತಾಯಗೊಳಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಲಕ್ನೋ ಕೋರ್ಟ್'ನಲ್ಲಿ ಪ್ರತೀ ದಿನವೂ ವಿಚಾರಣೆ ನಡೆಯಲಿದ್ದು, ಯಾವುದೇ ಕಾರಣಕ್ಕೂ ವಿಚಾರಣೆ ಮುಂದೂಡುವುದಾಗಲೀ, ನ್ಯಾಯಾಧೀಶರು ವರ್ಗಾವಣೆ ಆಗುವುದಾಗಲೀ ಮಾಡುವಂತಿಲ್ಲ ಎಂದು ಸುಪ್ರೀಂ ಕಟ್ಟಪ್ಪಣೆ ಮಾಡಿದೆ.

advani joshi uma bharati and others to face trial on criminal conspiracy on babri masjid demolition case

ನವದೆಹಲಿ(ಏ. 19): ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಅನೇಕ ಹಿರಿಯ ಮುಖಂಡರಿಗೆ ಹಿನ್ನಡೆಯಾಗುವಂಥ ಸುದ್ದಿ ಬಂದಿದೆ. ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ ಸೇರಿದಂತೆ ಹಲವು ಜನರ ವಿರುದ್ಧ ನ್ಯಾಯಾಲಯದಲ್ಲಿ ಮರುವಿಚಾರಣೆ ನಡೆಯಬೇಕೆಂದು ಸುಪ್ರೀಂಕೋರ್ಟ್ ತೀರ್ಪಿತ್ತಿದೆ. ಆಡ್ವಾಣಿ ಸೇರಿದಂತೆ ಎಂಟು ಬಿಜೆಪಿ ಮತ್ತು ವಿಹಿಂಪ ಮುಖಂಡರನ್ನು ಅಲಹಾಬಾದ್ ಹೈಕೋರ್ಟ್ ಆರೋಪಮುಕ್ತಗೊಳಿಸಿದ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ಸಂಬಂಧ ಸಿಬಿಐ ವಾದವನ್ನು ಪುರಸ್ಕರಿಸಿರುವ ಸರ್ವೋಚ್ಚ ನ್ಯಾಯಾಲಯವು 8 ಮಂದಿ ವಿರುದ್ಧ ಮರುವಿಚಾರಣೆ ನಡೆಸಲು ನಿರ್ಧರಿಸಿದೆ.

ಆ 8 ಮಂದಿ ಯಾರು?
ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ, ವಿನಯ್ ಕಟಿಯಾರ್, ಸಾಧ್ವಿ ರಿತಂಬರಾ, ಆಚಾರ್ಯ ಗಿರಿರಾಜ್ ಕಿಶೋರ್, ಅಶೋಕ್ ಸಿಂಘಲ್ ಮತ್ತು ವಿಷ್ಣು ಹರಿದಾಲ್ಮಿಯಾ.

ಮೇಲೆ ತಿಳಿಸಿದ ಈ 8 ಮಂದಿಯ ವಿರುದ್ಧದ ವಿಚಾರಣೆಯನ್ನು ಲಕ್ನೋ ಕೋರ್ಟ್'ಗೆ ವರ್ಗಾಯಿಸಿದೆ. ಆದರೆ, ಗಿರಿರಾಜ್ ಕಿಶೋರ್ ಮತ್ತು ಅಶೋಕ್ ಸಿಂಘಲ್ ಅವರು ವಿಧಿವಶರಾಗಿದ್ದಾರೆ. ಹೀಗಾಗಿ, ಲಕ್ನೋ ಕೋರ್ಟ್'ನಲ್ಲಿ ಉಳಿದ 6 ಮಂದಿಯ ಜೊತೆಗೆ ಇನ್ನೂ 13 ಜನರ ವಿರುದ್ಧ ಇದೇ ವಿಚಾರಣೆ ನಡೆಯುತ್ತಿದೆ. ಅಲ್ಲಿಗೆ ಒಟ್ಟು 21 ಜನರ ವಿರುದ್ಧ ಲಕ್ನೋ ಕೋರ್ಟ್'ನಲ್ಲಿ ವಿಚಾರಣೆ ನಡೆಯಲಿದೆ.

ಅಷ್ಟೇ ಅಲ್ಲ, ಪ್ರಕರಣದ ವಿಚಾರಣೆಯನ್ನು 2 ವರ್ಷದಲ್ಲಿ ಮುಕ್ತಾಯಗೊಳಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಲಕ್ನೋ ಕೋರ್ಟ್'ನಲ್ಲಿ ಪ್ರತೀ ದಿನವೂ ವಿಚಾರಣೆ ನಡೆಯಲಿದ್ದು, ಯಾವುದೇ ಕಾರಣಕ್ಕೂ ವಿಚಾರಣೆ ಮುಂದೂಡುವುದಾಗಲೀ, ನ್ಯಾಯಾಧೀಶರು ವರ್ಗಾವಣೆ ಆಗುವುದಾಗಲೀ ಮಾಡುವಂತಿಲ್ಲ ಎಂದು ಸುಪ್ರೀಂ ಕಟ್ಟಪ್ಪಣೆ ಮಾಡಿದೆ.

ಇದೇ ವೇಳೆ, ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಕಲ್ಯಾಣ್ ಸಿಂಗ್ ಅವರು ರಾಜ್ಯಪಾಲ ಹುದ್ದೆಯಲ್ಲಿರುವುದರಿಂದ ಅವರಿಗೆ ಕಾನೂನು ಸಂರಕ್ಷಣೆಯ ಕವಚವಿದೆ. ಹೀಗಾಗಿ, ಅವರ ವಿರುದ್ಧ ವಿಚಾರಣೆ ನಡೆಸಲು ಸಾಧ್ಯವಿಲ್ಲ.

ಏನಿದು ಪ್ರಕರಣ?
1992ರ ಡಿ.6ರಂದು ಅಯೋಧ್ಯೆಯಲ್ಲಿದ್ದ ವಿವಾದಿತ ಬಾಬರಿ ಮಸೀದಿಯನ್ನು ಕರಸೇವಕರು ಧ್ವಂಸಗೊಳಿಸಿದ್ದರು. ಈ ಘಟನೆಗೆ ಸಂಚು ರೂಪಿಸಿದ ಆರೋಪ ಎಲ್.ಕೆ.ಆಡ್ವಾಣಿ, ಜೋಷಿ, ಉಮಾಭಾರತಿ ಮೊದಲಾದವರ ವಿರುದ್ಧ ಇದೆ. ಆಗಿನ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ವಿರುದ್ಧವೂ ಸಂಚು ಆರೋಪವಿದೆ.

Follow Us:
Download App:
  • android
  • ios