ಈಗ ಕಾವೇರಿ ಹೋರಾಟಕ್ಕೆ ನಟ ಅನಂತನಾಗ್‌ ಪ್ರವೇಶ

news | Tuesday, April 10th, 2018
Suvarna Web Desk
Highlights

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳು ನಟರಿಬ್ಬರು ನೀಡುತ್ತಿರುವ ಪ್ರಚೋದನಕಾರಿ ಹೇಳಿಕೆಗೆ ಹಿರಿಯ ನಟ ಅನಂತನಾಗ್‌ ಕಿಡಿಕಾರಿದ್ದು, ನಾಡಿನ ನೆಲ, ಜಲ, ಭಾಷೆ ಕಾಪಾಡುವ ಕರ್ತವ್ಯದಲ್ಲಿ ಸಮಸ್ತ ಕನ್ನಡಿಗರ ಜತೆ ನಾನಿದ್ದೇನೆ ಎಂದು ಘೋಷಿಸಿದ್ದಾರೆ.

ಬೆಂಗಳೂರು : ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳು ನಟರಿಬ್ಬರು ನೀಡುತ್ತಿರುವ ಪ್ರಚೋದನಕಾರಿ ಹೇಳಿಕೆಗೆ ಹಿರಿಯ ನಟ ಅನಂತನಾಗ್‌ ಕಿಡಿಕಾರಿದ್ದು, ನಾಡಿನ ನೆಲ, ಜಲ, ಭಾಷೆ ಕಾಪಾಡುವ ಕರ್ತವ್ಯದಲ್ಲಿ ಸಮಸ್ತ ಕನ್ನಡಿಗರ ಜತೆ ನಾನಿದ್ದೇನೆ ಎಂದು ಘೋಷಿಸಿದ್ದಾರೆ.

ಈ ಕುರಿತು ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಿರುವ ಅವರು, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಮೊದಲಿನಿಂದಲೂ ಅಸಹನೆ, ಅಸಹಕಾರ ಮತ್ತು ಘರ್ಷಣೆ ನಿಲುವನ್ನೇ ತೋರಿಸುತ್ತಾ ಬಂದಿದೆ. ಈಗ ಮತ್ತೊಮ್ಮೆ ತಮಿಳುನಾಡಿನ ಮುಖಂಡರು ತಮಿಳುನಾಡು ಬಂದ್‌ ಆಚರಿಸಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿರುವುದು ಖಂಡನೀಯ ಎಂದಿದ್ದಾರೆ.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಮುಂದಿರುವುದರಿಂದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಹೆಚ್ಚು ಅನುಕೂಲ ಮಾಡಿಕೊಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಿಜವೆಂದರೆ ಕೇಂದ್ರದಲ್ಲಿ ಯಾವ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ, ನೀರು ಹಂಚಿಕೆಗೆ ಯಾವ ಸೂಕ್ತ ಸೂತ್ರದ ಪರಿಹಾರ ಸೂಚಿಸಿದರೂ ತಮಿಳುನಾಡು ಅಪಸ್ವರ ಎತ್ತುವುದು ವಾಡಿಕೆ. ಕೇಂದ್ರದಲ್ಲಿ ಯಾವುದೇ ಸರ್ಕಾರವಿರಲಿ, ಸುಪ್ರೀಂಕೋರ್ಟ್‌ ಕೂಡ ಯಾವುದೇ ಪರಿಹಾರ ನೀಡಲು ಮುಂದಾದರೂ ಅಲ್ಲಿನ ರಾಜಕಾರಣಿಗಳು ಒಪ್ಪುವುದಿಲ್ಲ.

ಈಗ ಸದ್ಯ ತಮಿಳುನಾಡಿನಲ್ಲಿ ಯಾವುದೇ ಚುನಾವಣೆ ಇಲ್ಲದಿದ್ದರೂ ಅಲ್ಲಿನ ನಟರಿಬ್ಬರು ರಾಜಕೀಯ ಪ್ರವೇಶ ಮಾಡುವ ಆತುರದಲ್ಲಿ ಹಿಂದಿನ ಪೀಳಿಗೆಯವರಂತೆಯೇ ಅನೇಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ರಜನಿಕಾಂತ್‌ ಮತ್ತು ಕಮಲಹಾಸನ್‌ ಅವರ ಹೆಸರು ಹೇಳದೆ ಕಿಡಿಕಾರಿದರು.

ಕಾವೇರಿ ನದಿ ನೀರು ಹಂಚಿಕೆ ಸೇರಿದಂತೆ ಕರ್ನಾಟಕ ರಾಜ್ಯದ ನೆಲ, ಜಲ, ಭಾಷೆಯನ್ನು ಕಾಪಾಡಿಕೊಳ್ಳುವ ಉದಾತ್ತ ಕರ್ತವ್ಯದಲ್ಲಿ ಸಮಸ್ತ ಕನ್ನಡಿಗರ ಜತೆ ನಾನು ಕೂಡ ಟೊಂಕಕಟ್ಟಿನಿಂತಿದ್ದೇನೆ ಎಂದು ತಿಳಿಸಿದರು.

Comments 0
Add Comment

    ಹೇಗಿದೆ ಇಂದು ತೆರೆಕಂಡ "ಅಬ್ಬೆ ತುಮಕೂರ ಸಿದ್ಧಿಪುರುಷ ವಿಶ್ವಾರಾಧ್ಯರು"?

    video | Friday, April 13th, 2018