ಹೆದ್ದಾರಿಯಲ್ಲಿರುವ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಸುಪ್ರಿಂಕೋರ್ಟ್ ನೀಡಿರುವ ಆದೇಶದ ಪರಿಣಾಮ ರಾಜ್ಯದ ಸುಮಾರು 1900 ಬಾರ್‌ಗಳು ಬಾಗಿಲು ಮುಚ್ಚಲು ಇನ್ನು ಕೇವಲ 48 ಗಂಟೆಗಳು ಮಾತ್ರ ಬಾಕಿ ಉಳಿದಿದೆ.
ಬೆಂಗಳೂರು (ಜೂ.28): ಹೆದ್ದಾರಿಯಲ್ಲಿರುವ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಸುಪ್ರಿಂಕೋರ್ಟ್ ನೀಡಿರುವ ಆದೇಶದ ಪರಿಣಾಮ ರಾಜ್ಯದ ಸುಮಾರು 1900 ಬಾರ್ಗಳು ಬಾಗಿಲು ಮುಚ್ಚಲು ಇನ್ನು ಕೇವಲ 48 ಗಂಟೆಗಳು ಮಾತ್ರ ಬಾಕಿ ಉಳಿದಿದೆ.
ರಾಜ್ಯದ ನಗರ-ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿರುವ 858 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಿ ಸ್ಥಳೀಯ ರಸ್ತೆಗಳನ್ನಾಗಿ ಘೋಷಿಸುವಂತೆ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪ್ರಸ್ತಾವ ಕಳಿಸಿದೆ. ಆದರೆ, ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳ ಡಿನೋಟಿಫಿಕೇಶನ್ ಪ್ರಸ್ತಾವಕ್ಕೆ ಇನ್ನೂ ಒಪ್ಪಿಗೆ ನೀಡಿಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ೫೦೦ ಮೀಟರ್ ವ್ಯಾಪ್ತಿಯಲ್ಲಿರುವ ರಾಜ್ಯದಲ್ಲಿನ 1900 ಬಾರ್ಗಳನ್ನು ಮುಚ್ಚಲೇಬೇಕಿದೆ. ಸುಪ್ರಿಂಕೋರ್ಟ್ ಜೂನ್ 30 ರ ಗಡುವು ನೀಡಿದ್ದು, ಇನ್ನು ಕೇವಲ ಎರಡು ದಿನ ಬಾಕಿ ಇದೆ.
ಈ ಮಧ್ಯೆ ರಾಜ್ಯ ಮದ್ಯ ಮಾರಾಟಗಾರರ ಸಂಘದ ಸದಸ್ಯರು ಕಳೆದ ಎಂಟು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿ ಕೇಂದ್ರ ಸಚಿವ ಅನಂತ್ಕುಮಾರ್ ಹಾಗೂ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, ಆದಷ್ಟು ಬೇಗನೆ ರಾಷ್ಟ್ರೀಯ ಹೆದ್ದಾರಿ ಡಿನೋಟಿಫಿಕೇಶನ್ ಮಾಡುವಂತೆ ಒತ್ತಡ ಹೇರಿದ್ದಾರೆ. ಆದರೆ, ದೇಶದ ಬಹುತೇಕ ರಾಜ್ಯಗಳಿಂದ ಇದೇ ಮಾದರಿಯ ಪ್ರಸ್ತಾವಗಳು ಕೇಂದ್ರ ಭೂಸಾರಿಗೆ ಸಚಿವಾಲಯಕ್ಕೆ ಸಲ್ಲಿಕೆಯಾಗಿದ್ದರಿಂದ ಎಲ್ಲಾ ರಾಜ್ಯಗಳ ಡಿ-ನೋಟಿಫಿಕೇಶನ್ ಏಕಕಾಲಕ್ಕೆ ಮಾಡಬೇಕಾದ ಅನಿವಾರ್ಯತೆಯಿಂದ ವಿಳಂಬವಾಗುತ್ತಿದೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೇಂದ್ರ ಸಚಿವ ಗಡ್ಕರಿ ಅವರನ್ನು ಭೇಟಿ ಮಾಡಲು ಯತ್ನಿಸಿದ್ದು, ಸಮಯದ ಅಭಾವದಿಂದ ಬುಧವಾರ ಭೇಟಿ ಮಾಡದೇ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್, ಡಿಸೆಂಬರ್ 30 ರಂದು ನೀಡಿರುವ ತೀರ್ಪಿನ ಅನ್ವಯ ದೇಶದ ಎಲ್ಲಾ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಪಕ್ಕದ ೫೦೦ ಮೀಟರ್ ವ್ಯಾಪ್ತಿಯಲ್ಲಿರುವ ಬಾರ್ಗಳನ್ನು ಮುಚ್ಚಬೇಕಿತ್ತು. ಅದಕ್ಕಾಗಿ ಜೂನ್ 30 ರ ಗಡುವು ಕೂಡ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ನಗರ ಮತ್ತು ಪಟ್ಟಣ ಪ್ರದೇಶದ ವ್ಯಾಪ್ತಿಯ 618 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ 1600 ಬಾರ್ಗಳು ಮತ್ತು 858 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ 1900 ಬಾರ್ಗಳು ಮದ್ಯ ಮಾರಾಟ ಮಾಡುತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ತನ್ನ ವ್ಯಾಪ್ತಿಗೆ ಒಳಪಡುವ ೬೧೮ ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳನ್ನು ಸ್ಥಳೀಯ ರಸ್ತೆಗಳೆಂದು ಈಗಾಗಲೇ ಡಿನೋಟಿಫಿಕೇಶನ್ ಮಾಡಿದೆ. ಇದರಿಂದ 1,600 ಬಾರ್ಗಳು ಮುಚ್ಚುವ ಭೀತಿಯಿಂದ ಪಾರಾಗಿವೆ. ಆದರೆ, ರಾಷ್ಟ್ರೀಯ ಹೆದ್ದಾರಿಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವುದರಿಂದ ಕೇಂದ್ರಕ್ಕೆ ಪ್ರಸ್ತಾವ ಕಳಿಸಿದೆ. ಈ ತನಕ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಅಬಕಾರಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪಕ್ಕದ 1,900 ಬಾರ್ಗಳಿಗೆ ಮುಚ್ಚುವಂತೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ 340 ಬಾರ್ಗಳು ಬಂದ್!
ಬೆಂಗಳೂರು ನಗರದ ಕೇಂದ್ರ ಭಾಗವಾದ ಎಂ.ಜಿ. ರಸ್ತೆ, ಕ್ವೀನ್ಸ್ ರಸ್ತೆ, ಅಂಬೇಡ್ಕರ್ ವೀಧಿ, ಕೆ.ಜಿ. ರಸ್ತೆ, ಜೆ.ಸಿ. ರಸ್ತೆ, ಕನ್ನಿಂಗ್ಹ್ಯಾಮ್ ರಸ್ತೆ, ರೇಸ್ಕೋರ್ಸ್ ರಸ್ತೆ, ಬಳ್ಳಾರಿ ರಸ್ತೆ, ಜಯಮಹಲ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿರುವ 340 ಬಾರ್ಗಳಿಗೆ ಶುಕ್ರವಾರ ರಾತ್ರಿವರೆಗೆ ಮಾತ್ರ ಮದ್ಯ ಮಾರಾಟ ಮಾಡಲು ಸರ್ಕಾರ ಪರವಾನಗಿ ನೀಡಿದೆ. ಹೀಗಾಗಿ ಮುಂದಿನ 48 ಗಂಟೆಗಳ ನಂತರ ಎಲ್ಲಾ 340 ಬಾರ್ಗಳಿಗೆ ಬೀಗ ಹಾಕುವುದು ಅನಿವಾರ್ಯ. ವಿಶೇಷವೆಂದರೆ ಈ 340 ಬಾರ್ಗಳ ಪೈಕಿ 19 ಸ್ಟಾರ್ ಹೊಟೆಲ್ಗಳು ಕೂಡ ಸೇರಿವೆ. ಬೆಂಗಳೂರು ನಗರದ ೪೫ ಕಿ.ಮೀ. ರಸ್ತೆಗಳು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಸೇರಿರುವುದು ಇದಕ್ಕೆ ಕಾರಣ.
ಸುಪ್ರಿಂಕೋರ್ಟ್ ಆದೇಶವನ್ನು ನಾವು ಪಾಲಿಸಲೇಬೇಕು. ರಾಷ್ಟ್ರೀಯ ಹೆದ್ದಾರಿ ಡಿನೋಟಿಫಿಕೇಶನ್ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗಿದ್ದು, ಆರ್ಥಿಕ ಇಲಾಖೆ ಅಧಿಕಾರಿಗಳು ಕೂಡ ದೆಹಲಿಗೆ ತೆರಳಿದ್ದಾರೆ. ಈ ಬಗ್ಗೆ ಸುಪ್ರಿಂಕೋರ್ಟ್ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಚಿಂತನೆ ನಡೆದಿದೆ.
- ಟಿ.ಬಿ. ಜಯಚಂದ್ರ, ಕಾನೂನು ಸಚಿವ
