ಧಾರವಾಡ (ಜ. 05): ಕನ್ನಡದ ಉಳಿವಿಗಾಗಿ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಕಂಬಾರರು ಸೂಚಿಸಿರುವ ಐದು ಅಂಶದ ಕಾರ್ಯಕ್ರಮಗಳು ಇವು.

ಕನ್ನಡಕ್ಕಾಗಿ ಸರ್ಕಾರ ಏನೇನು ಮಾಡಬೇಕು ಅನ್ನುವುದನ್ನೇ ಕಂಬಾರರು ತಮ್ಮ ಭಾಷಣದ ಪ್ರಧಾನ ಆಶಯವನ್ನಾಗಿ ಮಾಡಿಕೊಂಡಿದ್ದರು. ಕನ್ನಡದ ಸ್ಥಿತಿ, ಗತಿ, ಅಳಿವು, ಉಳಿವು, ಇಂಗ್ಲಿಷ್‌ ಭಾಷೆ ಕನ್ನಡಕ್ಕೆ ಮಾಡಿರುವ ದ್ರೋಹ, ಕನ್ನಡದ ಕೀಳರಿಮೆ, ಇಂಗ್ಲಿಷ್‌ ಭಾಷೆಯ ಅಹಂಕಾರದ ಕುರಿತು ಅವರು ಕೇವಲ ಒಂಬತ್ತು ಪುಟಗಳ ಕಿರುಭಾಷಣ ಮಂಡಿಸಿದರು.

ಪ್ರಾಥಮಿಕ ಹಾಗೂ ಪ್ರಾಥಮಿಕ ಪೂರ್ವ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಿ, ಸರ್ಕಾರಿ ಶಾಲೆಗಳನ್ನು ಸುಧಾರೀಕರಣ ಮಾಡದೇ ಹೋದರೆ ರಾಜ್ಯಭಾಷೆಗಳಿಗೆ ಭವಿಷ್ಯವಿಲ್ಲ ಎನ್ನುವುದನ್ನು ಅವರು ಪುನರುಚ್ಚರಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು ಬ್ರಿಟಿಷರು ತೊಲಗಿ ಎಪ್ಪತ್ತು ವರ್ಷಗಳಾದರೂ ಇಂಗ್ಲಿಷ್‌ ನಮ್ಮಿಂದ ತೊಲಗಿಲ್ಲ. ದಿನೇ ದಿನೇ ಹೆಚ್ಚು ಹೆಚ್ಚು ವ್ಯಾಪಿಸುತ್ತ ಹೆಚ್ಚು ಹೆಚ್ಚು ಆಳವಾಗಿ ಪ್ರಭಾವಶಾಲಿಯಾಗಿ ದೇಶೀಯ ಭಾಷೆಗಳ ಕತ್ತು ಹಿಸುಕುತ್ತಿದೆ ಎಂದು ಕಂಬಾರ ವಿಷಾದಿಸಿದರು.

ನಮ್ಮ ದೇಶದ ಯಾವುದೇ ರಾಜ್ಯಭಾಷೆ ಕಾವ್ಯ, ಕಥೆ, ನಾಟಕಗಳಲ್ಲಿ ತನ್ನನ್ನು ಅಭಿವ್ಯಕ್ತಿಸಿಕೊಂಡಂತೆ ಶಾಸ್ತ್ರದ ಕಡೆಗೆ ಗಮನ ಹರಿಸಿಯೇ ಇಲ್ಲ. ಬ್ರಿಟಿಷರು ಕೊಟ್ಟಶಿಕ್ಷಣ ವ್ಯವಸ್ಥೆಯಲ್ಲೇ ನಮ್ಮ ಮನಸ್ಸುಗಳು ತರಬೇತಿ ಹೊಂದಿದವೆಂಬ ತಿಳಿವಳಿಕೆಯಿಂದಲೇ ನಾವೀಗ ಮುಂದುವರೆದೆವು. ಹಾಗಾಗಿ ನಮ್ಮವೇ ಮನಸ್ಸುಗಳನ್ನು ಪ್ರಶ್ನಿಸುವ ಸಾಮರ್ಥ್ಯವನ್ನೂ ಕಳೆದುಕೊಂಡೆವು.

ಕ್ರಾಂತಿಯಂತೆ ಜರುಗಿದ ಈ ಶಿಕ್ಷಣಕ್ಕೆ ನಾವು ಬಹುಬೇಗ ಒಗ್ಗಿ ಹೋದೆವು. ನಮ್ಮಲ್ಲಿ ಸಿಗುವ ಇಂಗ್ಲಿಷ್‌ ವಿದ್ಯೆಗಿಂತ ಇನ್ನೂ ಹೆಚ್ಚಿನ ವಿದ್ಯೆ ಇಂಗ್ಲೆಂಡಿನಲ್ಲಿದೆ ಎಂದಾಗ ಗಾಂಧೀಜಿ, ನೆಹರೂ, ಅಂಬೇಡ್ಕರ್‌ ಮುಂತಾದವರು ಅಲ್ಲಿಗೂ ಹೋಗಿ ಬ್ಯಾರಿಸ್ಟರುಗಳಾಗಿ ಹಿಂದಿರುಗಿದರು. ಅದನ್ನೇ ಇಲ್ಲಿ ಮುಂದುವರೆಸಿ ಆಕ್ಸ್‌ಫರ್ಡ್ ಮಾದರಿಯ ಕಾಲೇಜು ವಿಶ್ವವಿದ್ಯಾಲಯಗಳ ಕಟ್ಟಡಗಳೂ ಬಂದವು. ಆದರೆ ಇಂಗ್ಲಿಷ್‌ ಸಾಹಿತ್ಯವನ್ನು ಸ್ಥಳೀಕರಿಸಿಕೊಂಡಂತೆ ವಿಜ್ಞಾನ ಶಿಕ್ಷಣವನ್ನು ನಾವು ಸ್ಥಳೀಕರಿಸಲಿಲ್ಲ. ನಮ್ಮ ದೇಶದ ಎಲ್ಲಾ ದೇಶೀ ಭಾಷೆಗಳ ದೌರ್ಬಲ್ಯವೂ ಇದೇ ಆಗಿದೆ ಎಂದು ಕಂಬಾರರು ವಿಶ್ಲೇಷಿಸಿದರು.

ಸರ್ಕಾರದ ಜವಾಬ್ದಾರಿಯಿದು:

ಒಂದು ರಾಜ್ಯದ ಭಾಷೆ, ಸಂಸ್ಕೃತಿ, ಪರಂಪರೆಗಳನ್ನು ಸಂರಕ್ಷಿಸುವ ಜವಾಬ್ದಾರಿ ಸರ್ಕಾರದ್ದು. ಇದನ್ನರಿತು ತನ್ನ ರಾಜ್ಯದ ಪ್ರಜೆಗಳಿಗೆ ಎಂಥ ಶಿಕ್ಷಣ ಕೊಡಬೇಕೆಂದು ನಿರ್ಧರಿಸುವ ಕರ್ತವ್ಯ ಮತ್ತು ಅಧಿಕಾರ ಸರ್ಕಾರದ್ದು. ಕನ್ನಡವೇ ನಮ್ಮೆಲ್ಲ ದೈನಿಕ ವ್ಯವಹಾರಕ್ಕೆ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವಿಕಾಸಕ್ಕೆ ಬೇಕಾದ್ದು. ಸರಕಾರವಾಗಲಿ, ಶಿಕ್ಷಣ ಮತ್ತು ಸಂಸ್ಕೃತಿ ಸಂಸ್ಥೆಗಳಾಗಲಿ ವ್ಯಾಪಾರ ವಾಣಿಜ್ಯ ವ್ಯವಹಾರಗಳಲ್ಲಿ ಕೂಡ ಕನ್ನಡ ಭಾಷೆಗೆ ಮೊದಲ ಆದ್ಯತೆಯ ಸ್ಥಾನ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಶಾಲೆಗಳಲ್ಲಿ ಮಾತೃಭಾಷೆ, ರಾಜ್ಯಭಾಷೆ ಮತ್ತು ಕಲಿಕೆಯ ಭಾಷೆ ಯಾವುದಾಗಬೇಕು ಎಂಬ ಚರ್ಚೆ ನ್ಯಾಯಾಲಯದ ತೀರ್ಮಾನ ಹೊರಬಿದ್ದಾಗ ಕನ್ನಡ ಭಾಷೆಯ ಕುತ್ತಿಗೆಗೇ ಸಂಕಟ ಬಂದುದು ಗೊತ್ತಾಯಿತು. ಜನಪ್ರತಿನಿಧಿಗಳು, ಶಾಸಕರು ಇಂಗ್ಲಿಷು ಅನ್ನದ ಭಾಷೆ. ಇಂಗ್ಲಿಷಿನಲ್ಲಿ ಓದಿದವರು ಪ್ರಪಂಚದ ಯಾವುದೇ ಭಾಗದಲ್ಲಿ ನೌಕರಿ ಮಾಡಲು ಅರ್ಹರಾಗುವರೆಂದು ಪ್ರಚಾರ ಮಾಡಿ ಆಂಗ್ಲ ಮಾಧ್ಯಮದ ಶಾಲೆಗಳನ್ನು ಸ್ಥಾಪಿಸಿ ಆ ಕಡೆಗೆ ಮಕ್ಕಳನ್ನು ಸೆಳೆಯತೊಡಗಿದರು.

ಪ್ರತಿವರ್ಷ ಸಾವಿರಾರು ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚಿ ಇಂಗ್ಲಿಷ್‌ ಮಾಧ್ಯಮದ ಖಾಸಗಿ ಸ್ಕೂಲುಗಳು ಹಳ್ಳಿ ಹಳ್ಳಿಗಳಲ್ಲಿ ಏಳತೊಡಗಿದವು. ಇಂಥ ಸ್ಕೂಲುಗಳ ಆಡಳಿತ ಮಂಡಳಿಗಳಲ್ಲಿ ರಾಜಕಾರಣಿಗಳು ಜನಪ್ರತಿನಿಧಿಗಳೇ ಇದ್ದಾರೆ ಎಂದು ಕಂಬಾರರು ಇಂಗ್ಲಿಷ್‌ ಭಾಷೆಯ ವಕ್ತಾರರ ಹುನ್ನಾರ ಬಯಲಿಗೆ ಎಳೆದರು.

ಸರ್ಕಾರದಿಂದಲೇ ಆಂಗ್ಲಭಾಷೆ ಪೋಷಣೆ:

ಈಗ ಶಿಕ್ಷಣವೊಂದು ವ್ಯಾಪಾರವಾಗಿ ಪರಿವರ್ತನೆ ಹೊಂದಿವೆ. ಸರ್ಕಾರಿ ಕನ್ನಡ ಶಾಲೆಗಳಲ್ಲಿ ಸೌಕರ್ಯಗಳು ಹೆಚ್ಚಿ ಮಕ್ಕಳಿಗೆ ಬೆಂಚುಗಳು, ಕಂಪ್ಯೂಟರ್‌ಗಳು ಬರಬೇಕಿತ್ತು. ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ಶೌಚಾಲಯಗಳಿರಬೇಕಿತ್ತು. ಆದರೆ ಅಲ್ಲಿಯ ಮಕ್ಕಳನ್ನು ನೋಡಿದರೆ ನಿರ್ಗತಿಕರ ಮಕ್ಕಳಂತೆ ಕಾಣುತ್ತಾರೆ. 2013-14 ರಿಂದ 2017-18ರ ವರೆಗೆ ನಾಲ್ಕು ವರ್ಷಗಳಲ್ಲಿ ಸುಮಾರು 13 ಲಕ್ಷ ಮಕ್ಕಳು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಕಡಿಮೆ ಆಗಿದ್ದಾರೆ. ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಸುಮಾರು 15 ಲಕ್ಷ ಮಕ್ಕಳು ಹೆಚ್ಚಾಗಿದ್ದಾರೆ.

ಸುಪ್ರೀಂ ಕೋರ್ಟ್‌ ಆದೇಶ ಬಂದ ನಂತರ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳು ಅಧಿಕೃತವಾಗಿ ಆಂಗ್ಲ ಮಾಧ್ಯಮವಾಗಿ ಪರಿವರ್ತನೆ ಹೊಂದಿವೆ! ಸಾಲದ್ದಕ್ಕೆ ಪ್ರತಿವರ್ಷ ಸುಮಾರು ಒಂದೂವರೆ ಲಕ್ಷಕ್ಕಿಂತ ಹೆಚ್ಚು ಮಕ್ಕಳನ್ನು ಸರ್ಕಾರವೇ ಫೀಜು ಕೊಟ್ಟು ಶಿಕ್ಷಣ ಹಕ್ಕು ಕಾಯ್ದೆಯಂತೆ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿದೆ. 2018-19ರ ಅವಧಿಯಲ್ಲಂತೂ ಸುಮಾರು ಮೂರೂವರೆ ಲಕ್ಷ ಮಕ್ಕಳು ಆಂಗ್ಲ ಮಾಧ್ಯಮಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಕಂಬಾರರು ಆಘಾತ ವ್ಯಕ್ತಪಡಿಸಿದರು.

ಜಾಣ ಮರೆವು:

ಇದ್ಯಾವುದೂ ತನ್ನ ಗಮನಕ್ಕೆ ಬಂದಿಲ್ಲವೆಂಬಂತೆ ಸರ್ಕಾರ ಜಾಣ ಮರೆವನ್ನು ಅಭಿನಯಿಸುತ್ತಿದೆ. ಇದನ್ನು ಪ್ರಶ್ನಿಸಿದರೆ ಅಕಾಡೆಮಿ ಬೇಕೇ? ಪ್ರಾಧಿಕಾರ ಬೇಕೇ? ಕಾವಲು ಸಮಿತಿ ಬೇಕೇ ಎಂದು ಕೇಳಿ, ಕೊನೆಗೆ ತಪ್ಪಿತಸ್ಥರನ್ನು ಶಿಕ್ಷಿಸಲು ಕಿಂಚಿತ್ತೂ ಅಧಿಕಾರವಿಲ್ಲದ ಒಂದು ಸಂಸ್ಥೆಯನ್ನು ಸ್ಥಾಪಿಸಿ ಪಾರಾಗುತ್ತಿದೆ. ಹೀಗಾದಾಗ ಕನ್ನಡದ ಬಗ್ಗೆ ಯಾವುದಾದರೂ ಆಸೆ ಉಳಿಯುವುದು ಸಾಧ್ಯವೇ ಎಂದು ಕಂಬಾರರು ನಿರಾಶೆಗೊಂಡರು.

- ಜೋಗಿ