Asianet Suvarna News Asianet Suvarna News

ಭೀಮಾ ನಾಯ್ಕ್ ಸೇರಿ 5 ಅಧಿಕಾರಿಗಳ ಮನೆಯಲ್ಲಿ ಭಾರಿ ಸಂಪತ್ತು ಪತ್ತೆ

ಬೆಂಗ​ಳೂರು, ತುಮ​ಕೂರು, ಕಲ​ಬು​ರ​ಗಿ ಮತ್ತಿ​ತರ ಕಡೆ ಎಸಿಬಿ ದಾಳಿ

acb seize huge properties during raid on five officers residences

ಬೆಂಗಳೂರು: ಬೆಂಗಳೂರಿನ ಸದಾಶಿವ ನಗರ, ಯಲ​ಹಂಕ ನ್ಯೂಟೌ​ನ್‌​'ನಲ್ಲಿ 3 ಮಹಡಿಗಳ ತಲಾ ಒಂದು ಕಟ್ಟಡ, ಬಳ್ಳಾರಿ ಜಿಲ್ಲೆಯಲ್ಲಿ 26 ಎಕರೆ ಕೃಷಿ ಭೂಮಿ, ಸಹೋದರನಿಗೆ ಹೋಂಡಾ ಸಿಟಿ, ಇನ್ನೋವಾ ಕಾರು, ರೂ.15 ಲಕ್ಷ ಮೌಲ್ಯದ ಚಿನ್ನಾಭರಣ, ಲಕ್ಷಾಂತರ ರುಪಾಯಿ ಮೌಲ್ಯದ ಗೃಹೋ​ಪ​ಯೋಗಿ ವಸ್ತು​ಗ​ಳು.

ಇವಿ​ಷ್ಟು ಕಾರು ಚಾಲಕನ ಆತ್ಮಹತ್ಯೆಗೆ ಕಾರಣನಾದ ಆರೋಪದ ಮೇಲೆ ಬಂಧನದಲ್ಲಿರುವ ಬೆಂಗಳೂರಿನ ವಿಶೇಷ ಭೂ ಸ್ವಾಧೀನಾಧಿಕಾರಿ ಎಲ್‌.ಭೀಮಾನಾಯ್ಕ್ ಆಸ್ತಿ ವಿವರ. ಭ್ರಷ್ಟಾಚಾರ ನಿಗ್ರಹ ದಳ(ಎ​ಸಿ​ಬಿ​)ದ ಅಧಿಕಾರಿಗಳು ಶುಕ್ರವಾರ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ಐವರು ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆ​ಸಿ​ದ್ದು, ಭಾರೀ ಪ್ರಮಾಣದಲ್ಲಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ. 

ಪತ್ನಿ, ಅತ್ತೆ ಹೆಸರಲ್ಲಿ ಆಸ್ತಿ: ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ಕಾರ್ಯನಿರ್ವಾಹಕ ಅಭಿಯಂತರ ಟಿ.ಆರ್‌.ಶಿವರಾಮು ಅವರ ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌'ನಲ್ಲಿರುವ ನಿವಾಸ, ಕಚೇರಿ ಹಾಗೂ ಮೈಸೂರಿನಲ್ಲಿರುವ ಸಂಬಂಧಿಕರ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆದು ಕೋಟ್ಯಂತರ ಅಕ್ರಮ ಆಸ್ತಿ ಮಾಡಿರುವುದು ಬೆಳಕಿಗೆ ಬಂದಿದೆ. ಈ ಅಧಿಕಾರಿ ಬೆಂಗಳೂರಿನ ಪ್ರೆಸ್ಟೀಜ್‌ ಸೇಂಟ್‌ ಜಾನ್‌'ವುಡ್‌ ಅಪಾರ್ಟ್‌'ಮೆಂಟ್‌'ನಲ್ಲಿ ಮೂರು ಬೆಡ್‌'ಗಳ ಎರಡು ಫ್ಲಾಟ್‌ಅನ್ನು ಪತ್ನಿ ಹಾಗೂ ಅತ್ತೆ ಹೆಸರಲ್ಲಿ ಖರೀದಿಸಿದ್ದಾರೆ. ಇದರ ಮೌಲ್ಯ ರೂ.1.27 ಕೋಟಿ ಎಂದು ಅಂದಾಜಿಸಲಾಗಿದೆ. ಅದೇ ರೀತಿ ರೂ.2.3 ಕೋಟಿ ಮೌಲ್ಯದ ಮೂರು ಮಹಡಿಗಳ ಕಟ್ಟಡವನ್ನು ಹೊಂದಿದ್ದಾರೆ. ಸುಮಾರು ರೂ.20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪತ್ತೆಯಾಗಿವೆ. ಜತೆಗೆ, ಮೈಸೂರಿನಲ್ಲಿ ಎರಡು ನಿವೇಶನದ ವಾರಸುದಾರರಾಗಿರುವುದೂ ಗೊತ್ತಾ​ಗಿ​ದೆ. 

ಪಶುಆರೋಗ್ಯಾಧಿಕಾರಿ ಸಂಪಾದನೆ: ಬೆಂಗಳೂರು ಗ್ರಾಮಾಂತರ ನೆಲಮಂಗಲ ತಾಲೂಕಿನ ಪಶುಆರೋಗ್ಯಾಧಿಕಾರಿ ಡಾ ಎಚ್‌.ಎಂ. ಶಿವಪ್ರಸಾದ್‌ ಅವರ ಕಚೇರಿ, ತುಮಕೂರು ಜಿಲ್ಲೆಯ ಕುವೆಂಪು ನಗರದ ನಿವಾಸ, ತುಮಕೂರಿನ ಕೊರಟಗೆರೆ ತಾಲೂಕಿನ ಪುಟ್ಟಸಂದ್ರ ಗ್ರಾಮದಲ್ಲಿರುವ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿದ ಎಸಿಬಿ ಭಾರಿ ಪ್ರಮಾಣದಲ್ಲಿ ಅಕ್ರಮ ಆಸ್ತಿ ಪತ್ತೆ ಹಚ್ಚಿದೆ. ಈ ಅಧಿಕಾರಿ ತುಮಕೂರಿನ ಕುವೆಂಪುನಗರದಲ್ಲಿ ರೂ.1.20 ಕೋಟಿ ಮೌಲ್ಯದ ಮನೆ ಹೊಂದಿದ್ದಾರೆ. ಬೆಂಗಳೂರಿನಲ್ಲಿ ನಾಲ್ಕು ನಿವೇಶನ, ನೆಲಮಂಗಲದ ಬಳಿ ವಿವಿಧೆಡೆ ಒಟ್ಟು 11.36 ಎಕರೆ ಜಮೀನನ್ನು ಹೊಂದಿದ್ದಾರೆ. ಎರಡು ಕಾರು ಹಾಗೂ 270 ಗ್ರಾಂ ಚಿನ್ನಾಭರಣ ಹಾಗೂ 2.5 ಕೆ.ಜಿ. ಬೆಳ್ಳಿ ವಸ್ತುಗಳನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ.

ಸಹೋದರನ ಹೆಸರಲ್ಲಿ ಆಸ್ತಿ: ತುಮಕೂರು ವಲಯ ಅರಣ್ಯಾಧಿಕಾರಿ ಡಿ.ನರಸಿಂಹಮೂರ್ತಿ ಅವರು ರೈತನಾಗಿರುವ ತಮ್ಮ ಸಹೋದರನ ಹೆಸರಲ್ಲಿ ಕೋಟ್ಯಂತರ ರುಪಾಯಿ ಬೇನಾಮಿ ಆಸ್ತಿ ಮಾಡಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ. ಸಹೋದರ ಕದ​ರಪ್ಪ ಹೆಸರಲ್ಲಿ ಕುಣಿಗಲ್‌ನ ಕೆಆರ್‌ಎಸ್‌ ಬಡಾವಣೆಯಲ್ಲಿ ಮೂರು ಮನೆ ಖರೀದಿಸಿದ್ದಾರೆ. ಅಲ್ಲದೆ ಹೆರೂರು ಗ್ರಾಮ ಕಂಚಗಾಲಪುರ ಅಮಾನಿಕೆರೆಯಲ್ಲಿ ರೂ.15 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಕದ​ರಪ್ಪ ಹೆಸರಲ್ಲಿ ಒಂದು ನಿವೇಶನ ಹಾಗೂ ಬೆಂಗಳೂರಿನಲ್ಲಿ ಪತ್ನಿ ಹೆಸರಲ್ಲಿ ಒಂದು ನಿವೇಶನ ಖರೀದಿಸಿದ್ದಾರೆ. ಇಷ್ಟೇ ಅಲ್ಲದೆ, ಸಹೋದರನ ಹೆಸರಲ್ಲಿ ರೂ.7 ಲಕ್ಷ ಮೌಲ್ಯದ ಸ್ವಿಫ್ಟ್‌ ಕಾರು, ಪತ್ನಿ ಹೆಸರಲ್ಲಿ ರೂ.57 ಸಾವಿರದ ದ್ವಿಚಕ್ರ ವಾಹನ ಖರೀದಿಸಿದ್ದಾರೆ. ಇವರ ಬ್ಯಾಂಕ್‌ ಖಾತೆಯಲ್ಲಿ ಒಟ್ಟು ರೂ.19.5 ಲಕ್ಷ ಠೇವಣಿ ಪತ್ತೆಯಾಗಿದ್ದು, ಮನೆಯಲ್ಲಿ 670 ಗ್ರಾಂ ಚಿನ್ನ ಮತ್ತು 3 ಕೆ.ಜಿ. ಬೆಳ್ಳಿವಸ್ತುಗಳು ಸಿಕ್ಕಿ​ವೆ.

ಆರ್‌ಎಫ್‌ಓ ಡಿ.ನರಸಿಂಹಮೂರ್ತಿ ಮೂಲತಃ ಕುಣಿಗಲ್‌ ತಾಲೂಕು ಕಸಬಾ ಹೋಬಳಿ ಹೇರೂರು ಗ್ರಾಮದವರು. ಇ ವರ ಸಹೋದರ ಕದರಪ್ಪ ಅಂಬೇಡ್ಕರ್‌ ಅವಾಜ್‌ ಯೋಜನೆಯಡಿ ರೂ.1.40 ಲಕ್ಷ ಸಹಾಯಧನ ಪಡೆದು ಹೇರೂರಿನಲ್ಲಿ ಸುಮಾರು ರೂ.30 ಲಕ್ಷ ವೆಚ್ಚದಲ್ಲಿ ಎರಡಂತಸ್ತಿನ ಮನೆ ನಿರ್ಮಿಸಿದ್ದರು. ಅಲ್ಲದೆ ಕದರಪ್ಪ ಬಿಪಿಎಲ್‌ ಕಾರ್ಡ್‌ ಪಡೆದಿರುವುದೂ ತನಿಖೆಯಿಂದ ಬೆಳ​ಕಿಗೆ ಬಂದಿ​ದೆ. ಕದರಪ್ಪನಿಗೆ ಪಿತ್ರಾರ್ಜಿತವಾಗಿ ಕೇವಲ 36 ಗುಂಟೆ ಜಮೀನು ಬಂದಿದ್ದು, ಹೊಸದಾಗಿ 1.5 ಎಕರೆ ಜಮೀನು ಖರೀದಿಸಿ 500 ರಿಂದ 600 ಅಡಕೆ ಗಿಡಗಳನ್ನು ಹಾಕಿದ್ದಾರೆ. 

ಹಳ್ಳಿಯಲ್ಲಿ ರೂ.85 ಲಕ್ಷದ ಮನೆ: ಕಲಬುರಗಿ ಲೋಕೋಪಯೋಗಿ ಇಲಾಖೆಯ ಎಇಇ ಶಿವಲಿಂಗಪ್ಪ ಕಲಶೆಟ್ಟಿಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿ​ದಾ​ಗಲೂ ಕೋಟ್ಯಂತರ ಆಸ್ತಿ ಪತ್ತೆಯಾಗಿ​ದೆ. ಶಿವ​ಲಿಂಗಪ್ಪ ಅವರು ಪತ್ನಿ ಹೆಸರಲ್ಲಿ ಎರಡು ನಿವೇಶನ ಮತ್ತು ಒಟ್ಟಾರೆ 4 ಎಕರೆ ಜಮೀನು ಮಾಡಿದ್ದಾರೆ. ಕಲಬುರಗಿ ಆಳಂದ ತಾಲೂಕಿನ ಮಡಿಯಾಳ ಗ್ರಾಮದ 9.11 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಕೋಟನೂರು ಡಿ. ಗ್ರಾಮದಲ್ಲಿ ರೂ.85 ಲಕ್ಷ ಖರ್ಚು ಮಾಡಿ ಮೂರಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ. ರೂ.7 ಲಕ್ಷ ಮೌಲ್ಯದ ಸ್ವಿಫ್ಟ್‌ ಕಾರು, ರೂ.45 ಸಾವಿರ ಮೌಲ್ಯದ ಬೈಕ್‌ ಹೊಂದಿದ್ದು, ರೂ.33.25 ಚರಾಸ್ತಿ ಹೊಂದಿದ್ದಾರೆ. 

ಎಲ್ಲೆಲ್ಲಿ ದಾಳಿ?
* ಭೀಮಾನಾಯ್ಕ್ ಅವರ ಬೆಂಗಳೂರಿನ ಯಲಹಂಕ ನ್ಯೂಟೌನ್‌ನಲ್ಲಿರುವ ನಿವಾಸ, ಬೆಳಗಾವಿ ಸದಾಶಿವನಗರದ ನಿವಾಸ ಮತ್ತು ಹೊಸಪೇಟೆಯ ಮರೇನಹಳ್ಳಿ ತಾಂಡದಲ್ಲಿರುವ ಇಬ್ಬರು ಸಹೋದರರ ನಿವಾಸಗಳು ಹಾಗೂ ವಿಶ್ವೇಶ್ವರಯ್ಯ ಕಟ್ಟಡದಲ್ಲಿರುವ ಕರ್ನಾಟಕ ಗೃಹ ಮಂಡಳಿ ಕಚೇರಿ 
* ಟಿ.ಆರ್‌.ಶಿವರಾಮು ಅವರ ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ನಿವಾಸ, ಮೈಸೂರಿನಲ್ಲಿ ಸಂಬಂಧಿಕರ ನಿವಾಸ. ಲೋಕೋಪಯೋಗಿ ಇಲಾಖೆ ಕಚೇರಿ
* ಡಾ.ಎಚ್‌.ಎಂ.ಶಿವಪ್ರಸಾದ್‌ ಅವರ ತುಮಕೂರು ಜಿಲ್ಲೆಯ ಕುವೆಂಪು ನಗರದ ನಿವಾಸ, ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯಲ್ಲಿರುವ ಕಚೇರಿ, ತುಮಕೂರಿನ ಕೊರಟಗೆರೆ ತಾಲೂಕಿನ ಪುಟ್ಟಸಂದ್ರ ಗ್ರಾಮದಲ್ಲಿರುವ ಸಂಬಂಧಿಕರ ಮನೆಗಳು
* ನರಸಿಹಮೂರ್ತಿ ಅವರ ತುಮಕೂರಿನ ಬನಶಂಕರಿಯಲ್ಲಿರುವ ವಸತಿಗೃಹ, ಕುಣಿಗಲ್‌ ತಾಲೂಕಿನ ಹೇರೂರು ಗ್ರಾಮದಲ್ಲಿ ಸಹೋದರನ ಮನೆ, ತುಮಕೂರಿನ ಕಚೇರಿ
* ಎಇಇ ಶಿವಲಿಂಗಪ್ಪ ಕಲಶೆಟ್ಟಿಅವರ ಕಲಬುರಗಿ ಬನಶಂಕರಿ ಬಡಾವಣೆಯಲ್ಲಿರುವ ನಿವಾಸ, ಲೋಕೋಪಯೋಗಿ ಇಲಾಖೆ ಉಪವಿಭಾಗ-1ರ ಮೇಲೆ.

(ಕನ್ನಡಪ್ರಭ ವಾರ್ತೆ)

Follow Us:
Download App:
  • android
  • ios