ನೆಹರು, ಇಂದಿರಾ, ವಾಜಪೇಯಿಗಿಂತ ಮೋದಿ ಬೆಸ್ಟ್ ಪ್ರಧಾನಿ: ಎಬಿಪಿ ಸಮೀಕ್ಷೆ!
ನೆಹರು, ಇಂದಿರಾಗಿಂತ ಮೋದಿ ಬೆಸ್ಟ್ ಪ್ರಧಾನಿ| ಮೋದಿ ಆಡಳಿತಕ್ಕೆ ಜನರ ಬಹುಪರಾಕ್| 100 ದಿನ ತುಂಬಿದ ಹಿನ್ನೆಲೆಯಲ್ಲಿ ಎಬಿಪಿ ಸಮೀಕ್ಷೆ| ಜಮ್ಮು- ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ್ದು ಸರ್ಕಾರದ ಅತ್ಯುನ್ನತ ಸಾಧನೆ
ನವದೆಹಲಿ[ಮೇ.07]: ಎರಡನೇ ಅವಧಿಯಲ್ಲಿ ಮೊದಲ 100 ದಿನಗಳನ್ನು ಶುಕ್ರವಾರವಷ್ಟೇ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಈಗಲೂ ದೇಶದ ಜನಪ್ರಿಯ ನಾಯಕ. ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ವಾಜಪೇಯಿ ಅವರನ್ನು ಹಿಂದಿಕ್ಕಿ ಅತ್ಯುತ್ತಮ ಪ್ರಧಾನಿ ಎನಿಸಿಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
ದೇಶದ ಎಲ್ಲಾ ರಾಜ್ಯಗಳ 11,308 ಜನರನ್ನು ಸಂದರ್ಶಿಸಿ ಎಬಿಪಿ ನ್ಯೂಸ್ ವಾಹನಿ ಈ ಸಮೀಕ್ಷೆ ಪ್ರಕಟಿಸಿದೆ. ಸಮೀಕ್ಷೆಯ ವೇಳೆ ಶೇ.67ರಷ್ಟುಜನರು ಮೋದಿ ಅವರನ್ನು ಭಾರತ ಎಂದೂ ಕಂಡಿರದ ಅತ್ಯಂತ ಪ್ರಬಲ ಪ್ರಧಾನಿ ಎಂದು ಹೇಳಿದ್ದಾರೆ. ಶೇ.10.1ರಷ್ಟುಮಂದಿ ಇಂದಿರಾಗಾಂಧಿ ಅವರನ್ನು ಮತ್ತು ಶೇ.9.7ರಷ್ಟುಮಂದಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಹಾಗೂ ಶೇ. 7.2ರಷ್ಟುಜನರು ಜವಾಹರಲಾಲ್ ನೆಹರು ಅವರನ್ನು ದೇಶದ ಅತ್ಯುತ್ತಮ ಪ್ರಧಾನಿ ಎಂದು ಹೇಳಿದ್ದಾರೆ.
ಇನ್ನು ಮೋದಿ ಅವರ 100 ದಿನದ ಆಡಳಿತ ಹಾಗೂ ಕಾರ್ಯ ವಿಧಾನಕ್ಕೆ ಬಹುತೇಕ ಜನರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಶೇ.41ರಷ್ಟುಮಂದಿ ಮೋದಿ ಸರ್ಕಾರದ ಆಡಳಿತ ‘ಅತ್ಯುತ್ತಮ’ ಶೇ.27ರಷ್ಟುಮಂದಿ ಉತ್ತಮ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರದ ಅತ್ಯುತ್ತಮ ಸಾಧನೆ ಕುರಿತು ಕೇಳಿದ ಪ್ರಶ್ನೆಗೆ ಶೇ.54ರಷ್ಟುಮಂದಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದು, ಸರ್ಕಾರದ ಅತ್ಯುನ್ನತ ಸಾಧನೆ ಎಂದು ಹೇಳಿದ್ದಾರೆ. ಈ ನಿರ್ಧಾರದಿಂದ ಎನ್‌ಡಿಎ ಸರ್ಕಾರಕ್ಕೆ ಪ್ರಯೋಜನವಾಗಲಿದೆ ಎಂದು ಶೇ. 73.1ರಷ್ಟುಜನರು ಹೇಳಿದ್ದಾರೆ. ಭಯೋತ್ಪಾದನೆಯ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಿದ್ದು ಸರ್ಕಾರದ ಮಹತ್ವದ ಸಾಧನೆಗಳ ಪೈಕಿ ಒಂದು ಎಂದು ಶೇ.21ರಷ್ಟುಮಂದಿ ಅಭಿಪ್ರಾಯಪಟ್ಟಿದ್ದಾರೆ.
ಅಮಿತ್ ಶಾಗೂ ಫುಲ್ ಮಾರ್ಕ್ಸ್:
ಇದೇ ವೇಳೆ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯವೈಖರಿಗೂ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಮಿತ್ ಶಾ ಅವರ ಸಾಧನೆ ಅತ್ಯುತ್ತಮ ಎಂದು ಶೇ.39.7ರಷ್ಟುಮಂದಿ, ಶೇ.24.3ರಷ್ಟುಜನರು ಉತ್ತಮ ಎಂದು ಹೇಳಿದ್ದಾರೆ. ಮೋದಿ ಸರ್ಕಾರದಲ್ಲಿ ಅತ್ಯಂತ ಜನಪ್ರಿಯ ಸಚಿವರ ಪೈಕಿ ಶೇ.50.8ರಷ್ಟುಮಂದಿ ಅಮಿತ್ ಶಾ ಅವರನ್ನು ಆಯ್ಕೆ ಮಾಡಿದ್ದಾರೆ.
ಹರ್ಯಾಣ, ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದ್ದು, ಮೋದಿ ಸರ್ಕಾರದ ಸಾಧನೆ ಈ ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಶೇ.76.3ರಷ್ಟುಮಂದಿ ಅಭಿಪ್ರಾಯಪಟ್ಟಿದ್ದಾರೆ.
ದೇಶದ ಬೆಸ್ಟ್ ಪ್ರಧಾನಿ
ನರೇಂದ್ರ ಮೋದಿ 67%
ಇಂದಿರಾ ಗಾಂಧಿ 10.1%
ವಾಜಪೇಯಿ 9.7%
ನೆಹರು 7.2%
ಮೋದಿ ಆಡಳಿತ ಹೇಗಿದೆ?
ಅತ್ಯುತ್ತಮ 41%
ಉತ್ತಮ 27%