ಬೀದರ್‌ (ಮೇ. 07): ನೀರಿಗಾಗಿ ಹತ್ತಾರು ಕಿಲೋ ಮೀಟರ್‌ ನಡೆಯೋದು, ಕೊಡ ನೀರಿಗಾಗಿ ನಿತ್ಯ ಜಗಳ ಕಾಯುವುದನ್ನೆಲ್ಲ ಕೇಳಿಯೇ ಇರುತ್ತೇವೆ. ಆದರೆ ಭೀಕರ ಜಲಕ್ಷಾಮ ಮೂರ್ನಾಲ್ಕು ಜೀವಗಳನ್ನು ಗರ್ಭದೊಳಗೇ ನುಂಗಿ ಹಾಕಿದೆ ಅಂದ್ರೆ ನಂಬ್ತೀರಾ? ನಂಬಲೇ ಬೇಕು!

ಇಂಥ ಘಟನೆ ನಡೆದಿದ್ದು ಹನಿ ನೀರಿಗಾಗಿ ಜೀವವನ್ನೇ ಒತ್ತೆ ಇಡಬೇಕಾದ ಸ್ಥಿತಿ ಇರುವ ಬೀದರ್‌ ಜಿಲ್ಲೆಯ ಚಿಮ್ಮೇಗಾಂವ್‌ ತಾಂಡಾದಲ್ಲಿ. ಒಂದು ಕೊಡ ನೀರಿಗಾಗಿ ಈ ತಾಂಡಾದ ಜನ ನಡೆಸುತ್ತಿರುವ ಹೋರಾಟದ ಕುರಿತು ‘ಕನ್ನಡಪ್ರಭ’ ಸೋಮವಾರವಷ್ಟೇ ವಿಶೇಷ ವರದಿ ಪ್ರಕಟಿಸಿತ್ತು.

ಈಗ ಜೀವಜಲಕ್ಕಾಗಿನ ಪರದಾಟ ಇಲ್ಲಿ ಬಡ ಹೆಣ್ಣುಮಕ್ಕಳ ಕೂಸಿನ ಕನಸನ್ನೇ ಕಿತ್ತುಕೊಂಡಿರುವ ಕರುಳು ಹಿಂಡುವ ಕಥೆಯೂ ಬೆಳಕಿಗೆ ಬಂದಿದೆ. ಇದೇ ಕಾರಣಕ್ಕೆ ಇಲ್ಲಿನ ಮಹಿಳೆಯರು ನೀರು ಕೊಟ್ಟು ಪೀಳಿಗೆ ಉಳಿಸ್ರಿ ಎಂದು ಕಣ್ಣೀರು ಹಾಕುತ್ತಾರೆ.

ಈ ತಾಂಡಾದಲ್ಲಿ ಬೇಸಿಗೆ ಬಂತೆಂದರೆ ನೀರಿಗಾಗಿ ಹಾಹಾಕಾರ ಏಳುತ್ತದೆ. ಪುರುಷರೇನಾದರೂ ಕೂಲಿ-ನಾಲಿಗೆಂದು ಹೊರಹೋದರೆ ಮನೆಯಲ್ಲಿರುವ ನಾರಿಯರ ನೀರಿಗಾಗಿ ಪರದಾಟ ಮಾತ್ರ ಹೇಳತೀರದು. ಸುಮಾರು 80 ಕುಟುಂಬಗಳು ವಾಸಿಸುವ ಈ ಚಿಕ್ಕ ತಾಂಡಾದಲ್ಲಿ ಬೇಸಿಗೆ ಬಂತೆಂದರೆ ನೀರಿಗೆ ಸಿಗುವ ಬೆಲೆ ಜೀವಕ್ಕೂ ಇಲ್ಲ ಎನ್ನುವಂತಾಗುತ್ತದೆ.

ತಾಂಡಾದಲ್ಲಿರುವ ಏಕೈಕ ಬಾವಿಗೆ ಬೆಳಗ್ಗೆ ಪೈಪ್‌ ಮೂಲಕ ಹರಿಸುವ ನೀರನ್ನು ಸೇದಲು ಜನ ಜಂಗುಳಿಯೇ ಸೇರುತ್ತದೆ. ಒಂದೆರಡು ಗಂಟೆ ಬಂದು ಹೋಗುವ ಈ ನೀರು ಮನೆ ಸೇರಬೇಕಿದ್ದರೆ ಚಿಕ್ಕಮಕ್ಕಳಿಂದ ಹಿಡಿದು ಹಿಡಿದು ಹಣ್ಣು ಹಣ್ಣು ಮದುಕರವರೆಗೂ, ಗರ್ಭಿಣಿಯರಿಂದ ಹಿಡಿಡು ಬಾಣಂತಿಯರ ವರೆಗೂ ಇಲ್ಲಿ ನೀರಿನ ಹೋರಾಟದಲ್ಲಿ ಭಾಗಿಯಾಗಲೇ ಬೇಕು. ಹೀಗೆ ಕುಟುಂಬ ಸದಸ್ಯರ ಜತೆಗೂಡಿಯೋ ಅಥವಾ ಗಂಡಸರು ಇಲ್ಲದ ವೇಳೆಯೋ ಇಲ್ಲಿ ಕೊಡನೀರು ಸೇದಿ ತರುವ ಧಾವಂತದಲ್ಲಿ ಮೂರ್ನಾಲ್ಕು ಮಹಿಳೆಯರಿಗೆ ಗರ್ಭಪಾತವಾಗಿದೆ.

ಮರ್ಯಾದೆಗೆ ಅಂಜಿದರು: ಗರ್ಭಪಾತವಾಗಿರುವ ಕುರಿತು ಯಾರೊಂದಿಗೂ ಚರ್ಚಿಸದ ಕುಟುಂಬಗಳು, ಮರ್ಯಾದೆಗೆ ಅಂಜಿ ತಮಗಾದ ನೋವನ್ನು ಹೊಟ್ಟೆಯೊಳಗೆ ಇಟ್ಟುಕೊಂಡಿದ್ದಾರೆ. ‘ಕನ್ನಡಪ್ರಭ’ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇದೆಲ್ಲ ಬೆಳಕಿಗೆ ಬಂದಿದೆ.

ನೀರಿನ ಬವಣೆ ನಮ್ಮ ಜೀವವಷ್ಟೇ ಅಲ್ಲ, ಜಗತ್ತು ಕಾಣಬೇಕಿದ್ದ ಪುಟ್ಟಜೀವಗಳ ಜೀವವನ್ನೂ ಹಿಂಡಿವೆ. ಇದರಿಂದ ಸಂಸಾರದಲ್ಲಿ ಸಾಕಷ್ಟುತೊಂದರೆಗಳನ್ನು ಎದುರಿಸುವಂತಾಗಿದೆ. ನಮ್ಮ ಈ ದುಸ್ಥಿತಿಗೆ ಕಾರಣರಾದವರಿಗೆ ಶಿಕ್ಷೆಯಾಗಲಿ, ತಾಂಡಾಕ್ಕೆ ಇಂಥ ಸಮಸ್ಯೆ ಮತ್ತೆ ಎದುರಾಗದಂತೆ ನೋಡಿಕೊಳ್ಳಲಿ ಎಂದು ಹೆಸರು ಹೇಳಲಿಚ್ಛಿಸದ ಕುಟುಂಬಗಳು ನೋವು ತೋಡಿಕೊಂಡಿವೆ.

‘ನೀರಿನ ಕಷ್ಟನಮ್ಮವರ ಜೀವ ಹಿಂಡೈತಿ, ನಮ್ಮ ತಾಂಡಾದ ಮೂವರ ಹೊಟ್ಟಿಇಳಿದೈತಿ. ನೀರು ಸೇದಿ ಮನೀಗ ಹೋಗಾದ್ರಾಗ ಹೊಟ್ಟೆಯೊಳಗಿನ ಕೂಸು ಬಿದ್ದಾವ್ರಿ. ಇನ್‌ ನಮ್‌ ಜನಾ ಮರ್ಯಾದಿಗೆ ಅಂಜಿ ಯಾರ್ಗೂ ಹೇಳಿಲ್ಲಾರ್ರಿ. ಈಗ ಹೊಟ್ಟಾಗಿನ ಸಂಕಟ ಒಳಗ ಇಟ್ರ ಹ್ಯಾಂಗ ಅಂತ ನಮಗ ಅನ್ನಿಸಿ, ನಿಮ್‌ ಮುಂದ್‌ ಬಿಚ್ಚಿ ಇಡ್ತಿದ್ದೀವಿ. ನಮ್‌ ಹೆಣ್ಮಕ್ಕಳ ಸಂಕಟ ನೋಡಾಕ ಆಗ್ತಿಲ್ರಿ. ಐದಾರು ತಿಂಗಳು ಹೊಟ್ಟಾಗ ಮಗಾ ಇಟ್ಕೊಂಡವ್ರೀಗ ಒಮ್ಮಿಗೆ ಹೀಂಗ್‌ ಆದ್ರ ಹೆಂಗ್ರಿ. ನೀರಿನ ಸಮಸ್ಯೆ ಬಗೆಹರಿಸಿ ನಮ್‌ ಪೀಳಿಗಿ ಉಳಿಸ್ರಿ’ ಎಂದು ತಾಂಡಾದ ಸಂಕಷ್ಟದ ಕಥೆ ಬಿಚ್ಚಿಡುತ್ತಾರೆ ಘಮಸುಬಾಯಿ.

ಶೌಚಕ್ಕೂ ಪರದಾಟ: ತಾಂಡಾದಲ್ಲಿ ಕುಡಿಯುವುದಕ್ಕೆ ಅಲ್ಲ, ಶೌಚಕ್ಕೂ ನೀರಿಲ್ಲದೆ ಪರದಾಟುವ ಸ್ಥಿತಿ ಇದೆ. ಶೌಚಾಲಯ ಇದ್ದರೂ ಅನಿವಾರ್ಯವಾಗಿ ಬಯಲನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ. ಇನ್ನು ಬೇಸಗೆಯಲ್ಲಿ ಬಾವಿ ತಳ ಕಾಣುವುದರಿಂದ ನೀರು ಬೇಕಿದ್ದರೆ ಮನೆಯ ಯಾರಾದರೊಬ್ಬರು ಸದಸ್ಯ ಬಾವಿಗೆ ಇಳಿಯಲು ಸಿದ್ಧರಾಗಬೇಕು. ಈ ಹಂತದಲ್ಲಿ ಕಾಲು ಜಾರಿ ಕೈಕಾಲು ಮುರಿದುಕೊಂಡ ಉದಾಹರಣೆಗಳೂ ಇವೆ. ತಮಗೆ ಇಂಥ ಪರಿಸ್ಥಿತಿ ಬಂದಿರುವುದು ಸರ್ಕಾರಿ ಯಂತ್ರದ ನಿಷ್ಕಾಳಜಿ, ಅಧಿಕಾರಿಗಳ ನಿರ್ಲಜ್ಜತೆಯ ಪರಮಾವಧಿಯಿಂದ ಎಂದು ಆರೋಪಿಸುತ್ತಾರೆ ತಾಂಡಾದ ಮಂದಿ.