ನವದೆಹಲಿ(ಜು.28): ಜೀವನದಲ್ಲಿ ಎದುರಾಗುವ ಹಿನ್ನಡೆ ನಿವಾರಿಸಿ ಮತ್ತೆ ಗುರಿಯತ್ತ ಮುನ್ನುಗ್ಗುವ ಸಾಮರ್ಥ್ಯ ನಮ್ಮೊಳಗೇ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತಮ್ಮ ಎರಡನೇ ಅವಧಿಯ ಎರಡನೇ ಮನ ಕೀ ಬಾತ್ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಎಲ್ಲ ಅಡೆತಡೆಗಳನ್ನು ನಿವಾರಿಸಿ ಚಂದ್ರಯಾನ-2 ಯಶಸ್ವಿಯಾಗಿರುವುದನ್ನು ಉಲ್ಲೇಖಿಸಿದರು.

ಚಂದ್ರಯಾನ-2ಯಶಸ್ವಿ ನಿಜಕ್ಕೂ ಭಾರತದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದ್ದು, ಈ ಯೋಜನೆಯ ಯಶಸ್ವಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುವುದಾಗಿ ಪ್ರಧಾನಿ ನುಡಿದರು.

ಚಂದ್ರಯಾನ-2 ಆರಂಭಿಕ ಹಂತದಲ್ಲಿ ಅಡೆತಡೆ ಎದುರಾದರೂ ಅಂತಿಮವಾಗಿ ಯೋಜನೆ ಯಶಸ್ವಿಯಾದಂತೆ, ಜೀವನದಲ್ಲಿ ಎದುರಾಗುವ ಎಲ್ಲಾ ಕಷ್ಟಗಳನ್ನು ನಿವಾರಿಸಿ ಯಶಸ್ವಿಯಾಗುವ ಸಾಮರ್ಥ್ಯ ಪ್ರತಿಯೊಬ್ಬರ ಬಳಿ ಇರುತ್ತದೆ ಎಂದು ಮೋದಿ ಹೇಳಿದರು.

ಇದೇ ವೇಳೆ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಕಣಿವೆಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರು ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದು ಅವರ ಯೋಜನೆ ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಂದೂಕು, ಬಾಂಬ್’ಗಳಿಗಿಂತ ಅಭಿವೃದ್ಧಿ ಹೆಚ್ಚು ಶಕ್ತಿಯುತವಾಗಿರುತ್ತದೆ ಎಂದ ಪ್ರಧಾನಿ, ಹಿಂಸೆಯ ಮಾರ್ಗ ಬಿಟ್ಟು ಅಭಿವೃದ್ಧಿ ಮಾರ್ಗ ಆಯ್ದುಕೊಳ್ಳುವಂತೆ ಕರೆ ನೀಡಿದರು.