ಬೆಂಗಳೂರು, [ಜೂ.24] :ದೇಶದ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನವೊಂದನ್ನು ಯಶಸ್ವಿಯಾಗಿ ಹೊಡೆದುರುಳಿಸಿ, ಮತ್ತೊಂದು ಎಫ್‌-16 ನಾಶ ಮಾಡಲು ಹೋಗಿ ಪಾಕ್‌ ವಶವಾಗಿ, ಪುನಃ ಬಂದ ಪೈಲಟ್‌ ‘ವಿಂಗ್‌ ಕಮಾಂಡರ್‌’ ಅಭಿನಂದನ್‌ ವರ್ತಮಾನ್‌ ಫುಲ್ ಫೇಮಸ್ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಅಭಿನಂದನ್‌ ಅವರಷ್ಟೇ ಅಲ್ಲ, ಅವರ ಮೀಸೆ ಹಾಗೂ ಹೇರ್‌ಸ್ಟೈಲ್‌ ಕೂಡ ಜನಪ್ರಿಯವಾಗಿದ್ದು, ಆನ್‌ಲೈನ್‌ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ಇದೀಗ ಅಭಿನಂದನ್‌ ಅವರ ಮೀಸೆಯನ್ನು ರಾಷ್ಟ್ರೀಯ ಮೀಸೆಯೆಂದು ಘೋಷಿಸಿ, ಗೌರವ ನೀಡಿ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಅಧೀರ್ ರಂಜನ್ ಚೌಧರಿ ಅವರು ಮನವಿ ಮಾಡಿದ್ದಾರೆ.

ಅಭಿನಂದನ್‌ ಮೀಸೆ, ಹೇರ್‌ಸ್ಟೈಲ್‌ ವೈರಲ್‌

 ಈ ಬಗ್ಗೆ ಇಂದು [ಸೋಮವಾರ] ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಚೌಧರಿ, ವಿಂಗ್ ಕಮಾಂಡರ್ ಅಭಿನಂದನ್ ಅವರು ನಮ್ಮ ಹೆಮ್ಮೆಯ ಯೋಧ. ಸರ್ಕಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಬೇಕು ಹಾಗೂ ಅವರ ಮೀಸೆಯನ್ನು ರಾಷ್ಟ್ರೀಯ ಮೀಸೆಯೆಂದು ಘೋಷಿಸಬೇಕು ಎಂದರು.

ಪಾಕಿಸ್ತಾನದಿಂದ ಅಭಿನಂದನ್ ಭಾರತಕ್ಕೆ ಹಿಂದಿರುಗಿದ ಬಳಿಕ ಇಡೀ ದೇಶವೇ ಸಂಭ್ರಮಾಚರಣೆ ಮಾಡಿತ್ತು. ಅಲ್ಲದೆ ಹೆಮ್ಮೆಯಿಂದ ಹಲವು ಪೋಷಕರು ಅಭಿನಂದನ್ ಅವರ ಹೆಸರನ್ನು ತಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದರು. ಅಲ್ಲದೆ ಅವರ ಹೇರ್ ಸ್ಟೈಲ್, ಮಿಸೆ ಎಲ್ಲೆಡೆ ಸಖತ್ ಟ್ರೆಂಡ್ ಆಗಿತ್ತು.