ನವದೆಹಲಿ(ಸೆ.21): ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯ ಆಪ್‌ ಶಾಸಕ ಅಮಾನತುಲ್ಲಾ ಖಾನ್‌ರನ್ನು ದೆಹಲಿ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಖಾನ್‌ ವಿರುದ್ಧ ಅವರ ಅತ್ತಿಗೆಯೇ ಲೈಂಗಿಕ ಕಿರುಕುಳ ಆರೋಪದ ದೂರು ನೀಡಿದ್ದರಿಂದ ಅವರನ್ನು ಬಂಧಿಸಲಾಗಿದ್ದು, ಈ ಮೂಲಕ ಕಳೆದ 3 ತಿಂಗಳೊಳಗಾಗಿ 2ನೇ ಬಾರಿಗೆ ಬಂಧನಕ್ಕೊಳಪಟ್ಟಿದ್ದಾರೆ. ಅಲ್ಲದೆ, ಖಾನ್‌ಗೆ ಜಾಮೀನು ನೀಡಲು ನಿರಾಕರಿಸಿದ ದೆಹಲಿ ಕೋರ್ಟ್‌, ಅವರನ್ನು ಗುರುವಾರದವರೆಗೂ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶ ಹೊರಡಿಸಿದೆ.

‘‘ಸಾಮಾನ್ಯ ವಿಚಾರದ ಕುರಿತು ಚರ್ಚೆಗೆ ಬರುವಂತೆ ನನ್ನನ್ನು ಕರೆಯಿಸಿದ ಪೊಲೀಸರು ನನ್ನನ್ನು ಬಂಧಿಸಿದ್ದಾರೆ,’’ ಎಂದು ಖಾನ್‌ ಆರೋಪ ಮಾಡಿದ್ದಾರೆ. ನನ್ನ ಮೇಲಿನ ಈ ಆರೋಪಗಳೆಲ್ಲವೂ ಪೊಲೀಸರ ಪಿತೂರಿ ಎಂದು ಅವರು ದೂರಿದ್ದಾರೆ.

ಸಿಎಂ ವಿರುದ್ಧ ಎಫ್‌ಐಆರ್‌: ದೆಹಲಿ ಮಹಿಳಾ ಆಯೋಗದಲ್ಲಿ ನಡೆದಿದೆ ಎಂದು ಹೇಳಲಾಗಿರುವ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧ ಎಫ್‌ಆರ್‌ದಾಖಲಿಸಿದೆ. ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಿಎಂ ಕೇಜ್ರಿವಾಲ್‌ ಪ್ರಧಾನಿ ಮೋದಿ ಕಟ್ಟಪ್ಪಣೆ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನನ್ನ ಹೆಸರನ್ನು ಉಲ್ಲೇಖಿಸಿದೆ ಎಂದು ದೂರಿದರು.

ಎನ್‌ಜಿಟಿ ಛೀಮಾರಿ: ಚಿಕೂನ್‌ಗುನ್ಯಾ, ಡೆಂಘೀ ಹೆಚ್ಚಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗೆ ಎನ್‌ಜಿಟಿ ತರಾಟೆಗೆ ತೆಗೆದುಕೊಂಡಿದೆ.ಎಂಸಿಡಿ, ಡಿಡಿಎ, ದೆಹಲಿ ಸರ್ಕಾರ ಮತ್ತು ಎನ್‌ಡಿಎಂಸಿಗಳು ಒಟ್ಟಾಗಿ ಕುಳಿತು ಚರ್ಚಿಸಿ ಏಕೆ ಕಾರ್ಯಯೋಜನೆ ರೂಪಿಸುತ್ತಿಲ್ಲ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ.