ಶಾರುಖ್'ಖಾನ್ ಅಭಿನಯದ ಚಕ್ ದೇ ಇಂಡಿಯಾ, , ಮೇರಿ ಕೋಮ್, ಮಿಲ್ಖಾ ಸಿಂಗ್, ಎಂ.ಎಸ್. ಧೋನಿ ಜೀವನವನ್ನಾಧರಿಸಿದ ಚಿತ್ರಗಳು ಯುವ ಜನತೆಗೆ ಒಳ್ಳೆಯ ಸಂದೇಶವನ್ನು ನೀಡಿವೆ.

ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಶುಕ್ರವಾರವಷ್ಟೇ ಬಿಡುಗಡೆಯಾದ ಅಮೀರ್'ಖಾನ್ ಅಭಿನಯದ 'ದಂಗಲ್' ಸಿನೆಮಾದ ಬಗ್ಗೆ 'ಇಂಡಿಯಾ ಟುಡೇ' ವಾಹಿನಿಯೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಅದರ ಸಂಕ್ಷಿಪ್ತ ಸಾರಾಂಶ ನಿಮಗಾಗಿ....

ಭಾರತದಲ್ಲಿ ಕುಸ್ತಿಯ ಬಗ್ಗೆ ಸುಲ್ತಾನ್ ಹಾಗೂ ದಂಗಲ್'ನಂತ ಸಿನೆಮಾಗಳು ಮೂಡಿ ಬರುತ್ತಿರುವುದರ ಬಗ್ಗೆ ಏನಂತೀರಾ?

ಇಡೀ ದೇಶವೇ ನಮ್ಮ ಕ್ರೀಡೆ(ಕುಸ್ತಿ)ಗೆ ಪ್ರೋತ್ಸಾಹ ನೀಡುತ್ತಿದೆ. ಮಹಾಭಾರತ ಕಾಲದಿಂದಲೂ ಕುಸ್ತಿಯನ್ನು ಜನರು ಎಂಜಾಯ್ ಮಾಡುತ್ತಾ ಬಂದಿದ್ದಾರೆ. ಎರಡು ಒಳ್ಳೆಯ ಸಿನೆಮಾದಲ್ಲಿ ಉತ್ತಮವಾಗಿ ಅಭಿನಯಿಸುವ ಮೂಲಕ ಕುಸ್ತಿಯ ಬಗ್ಗೆ ಯುವಜನತೆಯಲ್ಲಿ ಇನ್ನಷ್ಟು ಒಲವು ಮೂಡಿಸಿದ ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್ ಅವರಿಗೆ ಅಭಿನಂದಿಸುತ್ತೇನೆ. ದಂಗಲ್ ಸಿನೆಮಾ ಗೀತಾ ಹಾಗೂ ಬಬಿತಾ ಪೋಗತ್'ರಂತಹ ಇನ್ನಷ್ಟು ಮಹಿಳಾ ಕುಸ್ತಿಪಟುಗಳನ್ನು ಸೃಷ್ಟಿಯಾಗಲೂ ಕಾರಣವಾಗಲಿದೆ.

ದಂಗಲ್ ಸಿನೆಮಾದಲ್ಲಿನ ಅಮೀರ್ ಅಭಿನಯದ ಬಗ್ಗೆ ಏನಂತೀರಾ?

ನಿಮಗೆ ಅವರೊಂದಿಗಿನ ನನ್ನದೇ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತೇನೆ. ದೆಹಲಿಯಲ್ಲಿ ಸಿನೆಮಾದ ಶೂಟಿಂಗ್ ನಡೆಯುವ ವೇಳೆ ನಾನು ಅಮೀರ್ ಅವರನ್ನು ಭೇಟಿ ಮಾಡಲು ಹೋಗಿದ್ದೆ. ನಿಜಕ್ಕೂ ಅಮೀರ್ ಹಾರ್ಡ್'ವರ್ಕಿಂಗ್(ಕಠಿಣ ಪರಿಶ್ರಮಿ) ವ್ಯಕ್ತಿ. ಒಬ್ಬ ಒಲಂಪಿಯನ್'ಗೆ ಕುಸ್ತಿಯ ಬಗ್ಗೆ ಎಷ್ಟು ಜ್ಞಾನವಿರುತ್ತದೋ ಅಷ್ಟೇ ಜ್ಞಾನ ಅಮೀರ್'ಗೆ ಇದೆ. ಅವರು ಕುಸ್ತಿಯ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಅವರ ಅಭಿನಯ ಖಂಡಿತ ಸಾಕಷ್ಟು ಪ್ರಶಂಸೆಗೊಳಪಡಲಿದೆ.

ಕ್ರೀಡೆಯ ಬಗ್ಗೆ ಸಿನೆಮಾ ಟ್ರೆಂಡ್ ಬೆಳೆಯುತ್ತಿದೆ; ಹೇಗನ್ನಿಸುತ್ತಿದೆ ನಿಮಗೆ?

ಈ ರೀತಿಯ ಸಿನೆಮಾಗಳನ್ನು ಮಾಡುವುದರಿಂದ ದೇಶದ ಯುವ ಜನತೆಯಲ್ಲಿ ಇನ್ನಷ್ಟು ಕ್ರೀಡೆಯ ಕುರಿತು ಒಲವು ಹೆಚ್ಚಲಿದೆ. ಶಾರುಖ್'ಖಾನ್ ಅಭಿನಯದ ಚಕ್ ದೇ ಇಂಡಿಯಾ, ಮೇರಿ ಕೋಮ್, ಮಿಲ್ಖಾ ಸಿಂಗ್, ಎಂ.ಎಸ್. ಧೋನಿ ಜೀವನವನ್ನಾಧರಿಸಿದ ಚಿತ್ರಗಳು ಯುವ ಜನತೆಗೆ ಒಳ್ಳೆಯ ಸಂದೇಶವನ್ನು ನೀಡಿವೆ. ಕ್ರೀಡಾಪಟುಗಳ ಜೊತೆ ಇಡೀ ದೇಶವೇ ಬೆಂಬಲವಾಗಿ ನಿಂತಿದೆ. ಇದರ ಜೊತೆಗೆ ಮಾಧ್ಯಮಗಳೂ ಕೂಡ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ.

ಮತ್ತೆ ನೀವು ಕಮ್'ಬ್ಯಾಕ್ ಮಾಡ್ತೀರಾ?

ನಾನು ಕೆಲಕಾಲ ಗಾಯದ ಸಮಸ್ಯೆಯಿಂದಾಗಿ ಕುಸ್ತಿಯಿಂದ ದೂರ ಉಳಿದಿದ್ದೆ. ಜನರ ಹಾರೈಕೆಯಿಂದ ನಿಧಾನವಾಗಿ ಮತ್ತೆ ಅಖಾಡದಲ್ಲಿ ತಯಾರಿ ನಡೆಸುತ್ತಿದ್ದೇನೆ. ಮುಂಬರುವ ಕಾಮನ್'ವೆಲ್ತ್ ಗೇಮ್ಸ್, ಏಷಿಯನ್ ಗೇಮ್ಸ್'ನಲ್ಲಿ ಭಾಗವಹಿಸುವ ವಿಶ್ವಾಸವಿದೆ.

WWEಯಿಂದ ಬಂದ ಆಫರ್ ಬಗ್ಗೆ ಜನರಲ್ಲಿ ಕುತೂಹಲವಿದೆ; ಈ ಕುರಿತು ಯಾವ ತೀರ್ಮಾನ ತೆಗೆದುಕೊಂಡಿದ್ದೀರಾ?

ಹೌದು ನನಗೆ WWE ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಆಫರ್ ಬಂದಿತ್ತು. ಆದರೆ ಅದರ ಬಗ್ಗೆ ಅಷ್ಟೇನೂ ಯೋಚನೆ ನಡೆಸಿಲ್ಲ. ನಾನು ಗಾಯಗೊಂಡಿದ್ದರಿಂದ ಸದ್ಯ ನನ್ನ ಫಿಟ್ನೆಸ್ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದೇನೆ.