ರೈತರೇ ನೀವು ಸಾಲಮನ್ನಾ ಯೋಜನೆಗೆ ಒಳಪಡುತ್ತೀರಾ ನಿಮ್ಮ ಸಾಲ ಮನ್ನಾ ಆಗಲಿದ್ಯಾ..?ಆದ್ರೆ ನಿಮ್ಮ ಬಳಿ ಈ ದಾಖಲೆ ಇರಲೇಬೇಕು. ಇಲ್ಲವಾದಲ್ಲಿ ನಿಮ್ಮ ಸಾಲ ಮನ್ನಾ ಆಗುವುದು ಡೌಟ್

ಆತ್ಮಭೂಷಣ್‌

ಮಂಗಳೂರು : ಸರ್ಕಾರದಿಂದ ಸಾಲಮನ್ನಾ ಬಗೆಗಿನ ಮಾರ್ಗಸೂಚಿ ಇನ್ನೂ ಹೊರಬಂದಿಲ್ಲ. ಆದರೆ, ಯೋಜನೆಯ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಫಲಾನುಭವಿಗಳಿಗೆ ಆಧಾರ್‌ ಕಡ್ಡಾಯ ಮಾಡುವ ಎಲ್ಲಾ ಸಾಧ್ಯತೆಗಳು ಇದೆ. ಅಷ್ಟೇ ಅಲ್ಲ, ಆಧಾರ್‌ ಕಾರ್ಡ್‌ನ್ನು ಪರಿಶೀಲನೆ ಮಾಡುವ ವೇಳೆ ಹೊಂದಾಣಿಕೆಯಾಗದಿದ್ದರೂ ಸಾಲ ಮನ್ನಾ ಸೌಲಭ್ಯ ಸಿಗುವುದು ಡೌಟು! ಈ ಬಗ್ಗೆ ಅಧಿಕಾರಿಗಳು ಫಲಾನುಭವಿಗಳಿಗೆ ಸೂಚನೆಯನ್ನೂ ನೀಡುತ್ತಿದ್ದಾರೆ.

ರಾಜ್ಯ ಸಹಕಾರ ಕಳೆದ ವರ್ಷವೇ ಆಧಾರ್‌ ಕಾರ್ಡ್‌ ಕಡ್ಡಾಯವನ್ನು ಜಾರಿಗೆ ತಂದಿತ್ತು. ಆದರೆ, ಕೊನೆಗಳಿಗೆಯಲ್ಲಿ ಆಧಾರ್‌ ಕಾರ್ಡ್‌ ಇಲ್ಲದಿದ್ದರೆ ಅಥವಾ ಆಧಾರ್‌ ಕಾರ್ಡ್‌ ವಿವರದಲ್ಲಿ ತಾಂತ್ರಿಕ ತೊಂದರೆಗಳಿದ್ದರೆ ಅಫಿದವಿತ್‌ ಸಲ್ಲಿಸುವ ಮೂಲಕ ಸಾಲ ಮನ್ನಾ ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ, ಈ ಬಾರಿ ಆಧಾರ್‌ ಕಾರ್ಡ್‌ ಸಮರ್ಪಕವಾಗಿಟ್ಟುಕೊಳ್ಳುವಂತೆ ಫಲಾನುಭವಿಗಳಿಗೆ ಸೂಚಿಸಲಾಗಿದೆ.

ಕಳೆದ ಬಾರಿ ಸಾಲಮನ್ನಾ ಮಾಡಿದಾಗ ಆರಂಭದಲ್ಲಿ ಆಧಾರ್‌ ಕಾರ್ಡ್‌ ಕಡ್ಡಾಯ ಎಂಬ ಮಾನದಂಡ ಇರಲಿಲ್ಲ. ನಂತರ ಸಾಲಮನ್ನಾ ಮಾರ್ಗಸೂಚಿಯಲ್ಲಿ ಆಧಾರ್‌ ಕಾರ್ಡ್‌ ಕಡ್ಡಾಯ ಎಂಬ ಮಾನದಂಡವನ್ನು ಸೇರಿಸಲಾಗಿದೆ. ಸಾಲಮನ್ನಾ ಸೌಲಭ್ಯಕ್ಕೆ ಒಳಪಡುವ ಫಲಾನುಭವಿ ತನ್ನ ಆಧಾರ್‌ ಕಾರ್ಡ್‌ ಸಹಕಾರಿ ಸಂಘಕ್ಕೆ ಹಾಜರುಪಡಿಸಬೇಕು. ಈ ವೇಳೆ ಮೊಬೈಲ್‌ ನಂಬರ್‌ ಸಹ ನೀಡಬೇಕು. ಆಧಾರ್‌ ಕಾರ್ಡ್‌ ವಿವರಗಳು ಹಾಗೂ ಸಹಕಾರಿ ಸಂಘದ ಪೋರ್ಟಲ್‌ನಲ್ಲಿ ಸಾಲಗಾರ ಫಲಾನುಭವಿಯ ವಿವರಕ್ಕೆ ಹೊಂದಾಣಿಕೆ ಆಗಬೇಕು. ಆಧಾರ್‌ ಕಾರ್ಡ್‌ ನಂಬರ್‌ ಪೋರ್ಟಲ್‌ನಲ್ಲಿ ನಮೂದಿಸಿದಾಗ, ಫಲಾನುಭವಿ ತನ್ನ ಹೆಸರಿನಲ್ಲಿ ಇನ್ನೊಂದು ಕಡೆ ಬೆಳೆ ಸಾಲ ಪಡೆದಿದ್ದರೆ ಗೊತ್ತಾಗುತ್ತದೆ. ಇದರಿಂದಾಗಿ ಸಾಲ ಮನ್ನಾ ಸೌಲಭ್ಯವನ್ನು ಒಬ್ಬನೇ ವ್ಯಕ್ತಿ ಏಕಕಾಲಕ್ಕೆ ಎರಡು ಕಡೆ ಪಡೆಯಲು ಸಾಧ್ಯವಾಗುವುದಿಲ್ಲ. ಕಳೆದ ಬಾರಿ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಿದ್ದರೂ ತಾಂತ್ರಿಕ ತೊಂದರೆಗಳು ಇರುವಲ್ಲಿ ಅಧಿಕಾರಿಗಳಿಂದ ಅಫಿದವಿತ್‌ ಪಡೆದುಕೊಂಡು ಸಾಲ ಮನ್ನಾ ಸೌಲಭ್ಯವನ್ನು ಫಲಾನುಭವಿಗಳಿಗೆ ನೀಡಲಾಗಿತ್ತು.

ಈ ಬಾರಿ ನೇರ ಖಾತೆಗೆ:

ಕಳೆದ ವರ್ಷ ಬೆಳೆ ಸಾಲ ಮನ್ನಾ ಮೊತ್ತವನ್ನು ಅಪೆಕ್ಸ್‌ ಬ್ಯಾಂಕ್‌ನಿಂದ ಡಿಸಿಸಿ ಬ್ಯಾಂಕ್‌ ಮೂಲಕ ಆಯಾ ಸಹಕಾರಿ ಸಂಘಗಳಿಗೆ ಕಳುಹಿಸಲಾಗಿತ್ತು. ಆ ಸಂಘಗಳು ಅರ್ಹ ಫಲಾನುಭವಿಗಳ ಖಾತೆಗೆ ಮನ್ನಾ ಮೊತ್ತವನ್ನು ಜಮೆ ಮಾಡುತ್ತಿದ್ದರು. ಆದರೆ, ಈ ಬಾರಿ ಸಾಲ ಮನ್ನಾ ಮೊತ್ತ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಇದು ಕೂಡ ಆಧಾರ್‌ ಕಾರ್ಡ್‌ ಕಡ್ಡಾಯಕ್ಕೆ ಕಾರಣವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಸಾಲ ಮನ್ನಾ ಫಲಾನುಭವಿಗಳು ಎರಡೆರಡು ಕಡೆ ಸಾಲ ಮನ್ನಾ ಪ್ರಯೋಜನ ಪಡೆಯುವುದನ್ನು ತಪ್ಪಿಸಲು ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ಆಧಾರ್‌ ಕಾರ್ಡ್‌ನಲ್ಲಿ ತಾಂತ್ರಿಕ ತೊಂದರೆ ಇರುವಲ್ಲಿ ಅಫಿದವಿತ್‌ ಪಡೆದುಕೊಂಡು ಸಾಲ ಮನ್ನಾ ಸೌಲಭ್ಯವನ್ನು ನೀಡಲಾಗಿದೆ. ಈ ಬಾರಿ ಸಾಲ ಮನ್ನಾ ಬಗೆಗಿನ ಮಾರ್ಗಸೂಚಿ ಇನ್ನೂ ಬಂದಿಲ್ಲ. ಆ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

-ಬಿ.ಕೆ.ಸಲೀಂ, ಸಹಕಾರಿ ಸಂಘಗಳ ಉಪ ನಿಬಂಧಕ ದ.ಕ.