ಸರ್ಕಾರ ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ ಕೆ.ಜಿ.ಗೆ 1ರಿಂದ 3ರು.ನಂತೆ 5 ಕೆ.ಜಿ. ಪಡಿತರ ಧಾನ್ಯಗಳನ್ನು ಒದಗಿಸುತ್ತಿದೆ. 80 ಕೋಟಿಗೂ ಅಧಿಕ ಮಂದಿ ಇದರ ಫಲಾನುಭವಿಗಳಾಗಿದ್ದಾರೆ.

ನವದೆಹಲಿ(ಫೆ.09): ಅಡುಗೆ ಅನಿಲ ಸಬ್ಸಿಡಿ ಪಡೆಯಲು ಆಧಾರ್ ಕಡ್ಡಾಯ ಮಾಡಿದ ಬೆನ್ನಲ್ಲೇ, ಇದೀಗ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪಡೆಯುವುದಕ್ಕೆ ಕೂಡ ಆಧಾರ್ ಕಡ್ಡಾಯ ಮಾಡಲಾಗಿದೆ. ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಪಡಿತರ ವಿತರಣೆಗೆ ₹1.4 ಲಕ್ಷ ಕೋಟಿ ಸಬ್ಸಿಡಿ ನೀಡಲಾಗುತ್ತಿದ್ದು, ಇವು ಪೋಲಾಗುವುದನ್ನು ತಪ್ಪಿಸಲು ಪಡಿತರ ಕಾರ್ಡ್‌ಗೂ ಆಧಾರ್ ಜೋಡಣೆ ಮಾಡಲಾಗುತ್ತಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಿರುವ ಸರ್ಕಾರ, ಜೂ.30ರ ಬಳಿಕ ಆಧಾರ್ ಸಂಯೋಜನೆ ಇಲ್ಲದೇ ಪಡಿತರದಾರರಿಗೆ ಸಬ್ಸಿಡಿಗೆ ಒಳಪಟ್ಟ ಪಡಿತರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಸೂಚಿಸಿದೆ. ಹೀಗಾಗಿ ಜೂ.30 ಒಳಗಾಗಿ ಪಡಿತರ ಕಾರ್ಡ್‌ಗಳನ್ನು ಆಧಾರ್ ಜತೆ ಸಂಯೋಜನೆ ಮಾಡುವುದು ಕಡ್ಡಾಯವಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಕಳೆದ ವರ್ಷದ ನವೆಂಬರ್ ವೇಳೆಗೆ ದೇಶದೆಲ್ಲೆಡೆ ಸಂಪೂರ್ಣ ಜಾರಿಯಾಗಿದೆ. ಸರ್ಕಾರ ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ ಕೆ.ಜಿ.ಗೆ 1ರಿಂದ 3ರು.ನಂತೆ 5 ಕೆ.ಜಿ. ಪಡಿತರ ಧಾನ್ಯಗಳನ್ನು ಒದಗಿಸುತ್ತಿದೆ. 80 ಕೋಟಿಗೂ ಅಧಿಕ ಮಂದಿ ಇದರ ಫಲಾನುಭವಿಗಳಾಗಿದ್ದಾರೆ.

ರೇಷನ್ ಕಾರ್ಡ್‌ಗಳನ್ನು ಆಧಾರ್ ಜತೆ ಸಂಯೋಜಿಸಲು ಹಲವು ಗಡುವುಗಳನ್ನು ನೀಡಲಾಗಿದ್ದರೂ, ಈ ಪ್ರಕ್ರಿಯೆ ನಿಧಾನವಾಗಿ ನಡೆಯುತ್ತಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಿಂದ ಈ ಕ್ರಮ ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಶೇ.70ರಷ್ಟು ರೇಷನ್ ಕಾರ್ಡ್‌ಗಳನ್ನು ಆಧಾರ್ ಕಾರ್ಡ್ ಜತೆ ಜೋಡಿಸಲಾಗಿದೆ. 23 ಕೋಟಿ ಪಡಿತರ ಕಾರ್ಡ್‌ಗಳು ಇದ್ದು, ಅವುಗಳಲ್ಲಿ 16.62 ಕೋಟಿ ಕಾರ್ಡ್‌ಗಳು ಆಧಾರ್ ಜತೆ ಜೋಡಿಸಲ್ಪಟ್ಟಿವೆ.ದೇಶದಲ್ಲೆಡೆ 5.27 ಲಕ್ಷ ನ್ಯಾಯಬೆಲೆ ಅಂಗಡಿಗಳು ಸಬ್ಸಿಡಿ ದರದಲ್ಲಿ ಪಡಿತರ ಧಾನ್ಯಗಳನ್ನು ವಿತರಿಸುತ್ತಿವೆ.

ಆಹಾರ ಸಬ್ಸಿಡಿಯ ನಗದು ವರ್ಗಾವಣೆಗೆ ಆಧಾರ್ ನಂಬರ್ ಅನ್ನು ರೇಷನ್ ಕಾರ್ಡ್ ಇಲ್ಲವೇ ಬ್ಯಾಂಕ್ ಖಾತೆಗಳ ಜತೆ ಅಧಿಸೂಚನೆ ಲಭ್ಯವಾದ 30 ದಿನಗಳ ಒಳಗಾಗಿ ಜೋಡಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.