Asianet Suvarna News Asianet Suvarna News

ನಕಲಿ ದಾಖಲೆ ನೀಡಿ ಆಧಾರ್ ಪಡೆದ 6 ಬಾಂಗ್ಲನ್ನರ ಬಂಧನ

ಅಕ್ರಮವಾಗಿ ನಗರದಲ್ಲಿ ನೆಲೆಸಿ ನಕಲಿ ದಾಖಲೆ ಸೃಷ್ಟಿಸಿ ಆಧಾರ್ ಕಾರ್ಡ್ ಪಡೆದಿದ್ದ ಆರು ಬಾಂಗ್ಲಾ ಪ್ರಜೆಗಳು ಸೇರಿ ಏಳು ಮಂದಿಯನ್ನು ವೈಟ್ ಫೀಲ್ಡ್ ವಿಭಾಗದ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

Aadhaar cards Racket busted 6 Bangladeshis Arrested in Bengaluru

ಬೆಂಗಳೂರು (ಡಿ.19): ಅಕ್ರಮವಾಗಿ ನಗರದಲ್ಲಿ ನೆಲೆಸಿ ನಕಲಿ ದಾಖಲೆ ಸೃಷ್ಟಿಸಿ ಆಧಾರ್ ಕಾರ್ಡ್ ಪಡೆದಿದ್ದ ಆರು ಬಾಂಗ್ಲಾ ಪ್ರಜೆಗಳು ಸೇರಿ ಏಳು ಮಂದಿಯನ್ನು ವೈಟ್ ಫೀಲ್ಡ್ ವಿಭಾಗದ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆಧಾರ್ ಸಂಖ್ಯೆ ಪಡೆಯಲು ಸಹರಿಸಿದ್ದ ಅರೋಪದಡಿ ವೈದ್ಯರೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

ಬಾಂಗ್ಲಾ ಪ್ರಜೆಗಳಾದ ರೂಬಿವುಲ್ಲಾ (23), ರಿಯಾದ್ ಖಾನ್ (25), ಮೊಹಮ್ಮದ್ ಖೋಖೊನ್ (20), ಓಹಿದುಲ್ಲಾ (29), ಮೊಹಮ್ಮದ್ ಕಲಾಂ (34), ಜಾಕೀರ್ ಹುಸೈನ್ (28) ಹಾಗೂ ಇವರಿಂದ ಹಣ ಪಡೆದು ಆಧಾರ್ ಮಾಡಿಸಿಕೊಟ್ಟಿದ್ದ ಪ್ರಮುಖ ಆರೋಪಿ ಬಿಟಿಎಂ ಲೇಔಟ್ ನಿವಾಸಿ ಸೈಯದ್ ಸೈಫುಲ್ಲಾ (38) ಬಂಧಿತರು. ಆರೋಪಿಗಳಿಂದ ಆಧಾರ್ ಕಾರ್ಡ್'ಗಳು ಹಾಗೂ ನಕಲಿ ದಾಖಲೆ ಜಪ್ತಿ ಮಾಡಲಾಗಿದೆ.

ಆಧಾರ್ ಸಂಖ್ಯೆ ಪಡೆಯಲು ಸಹಕರಿಸಿದ್ದ ಆರೋಪದಡಿ ದೊಮ್ಮಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಚ್.ಸಿ.ಲೋಕೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಬಾಂಗ್ಲಾ ಪ್ರಜೆಗಳ ಗುಂಪು ಅಕ್ರಮವಾಗಿ ಭಾರತಕ್ಕೆ ನುಸುಳಿ ಕಳೆದ ಆರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಅಕ್ರಮವಾಗಿ  ನಗರದ ಮಾರತ್‌ಹಳ್ಳಿ ಹಾಗೂ ಇಬ್ಬಲೂರಿನಲ್ಲಿ ಶೆಡ್ ಹಾಕಿಕೊಂಡು ವಾಸವಿದ್ದರು. ನಿರ್ಮಾಣ ಹಂತದ ಕಟ್ಟಡ ಹಾಗೂ ಖಾಸಗಿ ಕಂಪನಿಗಳಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕಿದ್ದರು. ಇಲ್ಲಿನ ಸವಲತ್ತುಗಳನ್ನು ಪಡೆಯಲು ಬ್ಯಾಂಕ್ ಖಾತೆ ಹೊಂದಲು ಹಾಗೂ ತಾವು ಕೆಲಸ ಮಾಡುವ ಸಂಸ್ಥೆಗಳಿಗೆ ದಾಖಲೆ ನೀಡಲು, ನಕಲಿ ದಾಖಲೆ ಸೃಷ್ಟಿಸಿಕೊಂಡು ಸೈಫುಲ್ಲಾನ ನೆರವಿನಿಂದ ಅಕ್ರಮವಾಗಿ ಆಧಾರ್ ಕಾರ್ಡ್ ಪಡೆದಿದ್ದರು ಎಂದು ಪೊಲೀಸರು ಹೇಳಿದರು.

ಬಾಂಗ್ಲಾ ಪ್ರಜೆಗಳ ಬಳಿ ಆಧಾರ್ ಕಾರ್ಡ್ ಇರುವ ಬಗ್ಗೆ ಸಾರ್ವಜನಿಕರೊಬ್ಬರು ಯುಐಡಿಯ ಬೆಂಗಳೂರು ಪ್ರಾದೇಶಿಕ ಕಚೇರಿಗೆ ಮಾಹಿತಿ ನೀಡಿದ್ದರು. ಕಚೇರಿ ಅಧಿಕಾರಿಗಳು ವಿಳಾಸ ಪರಿಶೀಲನೆ ನಡೆಸಿದಾಗ ಆಧಾರ್ ಪಡೆದಿರುವುದು ಪತ್ತೆಯಾಗಿದೆ. ಈ ಸಂಬಂಧ ಬೆಂಗಳೂರು ಪ್ರಾದೇಶಿಕ ಕಚೇರಿಯ ಉಪ ನಿರ್ದೇಶಕ ಅಶೋಕ್ ಲೆನಿನ್ ನ.31 ರಂದು ಬೆಳ್ಳಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಾಂಗ್ಲಾ ಪ್ರಜೆಗಳು ಸೈಫುಲ್ಲಾನ ಅಣತಿಯಂತೆ ಬಾಡಿಗೆಯ ನಕಲಿ ಕರಾರು ಪತ್ರ ಸಿದ್ಧಪಡಿಸಿ ಸೈಯದ್‌ಗೆ ನೀಡಿದ್ದರು. ನಕಲಿ ಕರಾರು ಪತ್ರಗಳಿಗೆ ವೈದ್ಯಾಧಿಕಾರಿಯಿಂದ ಸಹಿ ಮಾಡಿಸಿದ್ದ ಎಂದು ಪೊಲೀಸರು ಹೇಳಿದರು.

ಬಂಧಿತರ ವಿರುದ್ಧ ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸುವುದು, ನಕಲಿ ದಾಖಲೆ ಸೃಷ್ಟಿ , ವಂಚನೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

Follow Us:
Download App:
  • android
  • ios