ಮಹಿಳೆ ಬಲಿ ಪಡೆದ ಚಿರತೆ ಕೊನೆಗೂ ಸೆರೆ, ದಾಳಿ ಮಾಡಿದ ಅದೇ ಸ್ಥಳದಲ್ಲೇ ಕಾರ್ಯಾಚರಣೆ ಮಾಡಿ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಒಂದೇ ದಿನದಲ್ಲಿ ಚಿರತೆ ಸೆರೆ ಹಿಡಿದಿರುವ ಕಾರಣ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ತುಮಕೂರು (ಡಿ.22) ಕಾಡಂಚನಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದೆ. ಹುಲಿ ದಾಲಿ, ಚಿರತೆ ದಾಳಿಯಿಂದ ಜನರು ಕಂಗಾಲಾಗಿದ್ದಾರೆ. ನಿನ್ನೆ (ಡಿ.21) ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಅರೇಮಲ್ಲೇನಹಳ್ಳಿ ಹೊರವಲಯದ ಬೆಟ್ಟದ ಬಳಿ 46 ವರ್ಷದ ಮಹಿಳೆ ಮೇಲೆ ಚಿರತೆ ದಾಳಿ ಮಾಡಿತ್ತು. ಚಿರತೆ ದಾಳಿಗೆ ಮಹಿಳೆ ಬಲಿಯಾಗಿದ್ದರು. ಈ ದಾಳಿಯಿಂದ ಸ್ಥಳೀಯರ ಆತಂಕ ಹೆಚ್ಚಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯಾಧಿಕಾರಿಗಳು ಚಿರತೆ ಮಹಿಳೆ ಮೇಲೆ ದಾಳಿ ಮಾಡಿದ ಸ್ಥಳದಲ್ಲೇ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೋನಿಗೆ ಬಿದ್ದ 8 ವರ್ಷ ಗಂಡು ಚಿರತೆ
8 ವರ್ಷದ ಗಂಡು ಚಿರತೆ ಅರೆಮಲ್ಲೆನಹಳ್ಳಿ ಗ್ರಾಮದ 46 ವರ್ಷದ ಸುಜಾತ ಮೇಲೆ ದಾಳಿ ಮಾಡಿತ್ತು. ಮಾಹಿತಿ ತಿಳಿದುಘಟನಾ ಸ್ಥಳಕ್ಕೆ ತೆರಳಿದ್ದ ತುರುವೇಕೆರೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಭೇಟಿ ನೀಡಿದ್ದರು. ಇದೇ ವೇಳೆ ಗ್ರಾಮಸ್ಥರು ಚಿರತೆ ಪದೆ ಪದೇ ದಾಳಿ ಮಾಡುತ್ತಿದೆ. ಇಲ್ಲಿ ಬದುಕಲು ಭಯದ ವಾತವಾರಣವಿದೆ . ಹೀಗಾಗಿ ಹೇಗಾದರು ಮಾಡಿ ಚಿರತೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಇಂದು ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಭೇಟಿ ನೀಡಿ ಚಿರತೆ ಸೆರೆಗೆ ಬೋನ್ ಇರಿಸಿದ್ದರು. ಮಹಿಳೆ ಮೇಲೆ ದಾಳಿ ಮಾಡಿದ ಸ್ಥಳದಿಂದ ಕೇವಲ 50 ಮೀಟರ್ ದೂರದಲ್ಲಿ ಬೋನ್ ಇರಿಸಲಾಗಿತ್ತು. ಇಂದು ಕತ್ತಲಾಗುತ್ತಿದ್ದಂತೆ ಚಿರತೆ ಬೋನಿಗೆ ಬಿದ್ದಿದೆ. ಬೋನಿಗೆ ಚಿರತೆ ಬೀಳುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಚಿರತೆ ವಶಕ್ಕೆ ಪಡೆದಿದ್ದಾರೆ. ನಿನ್ನೆ ಸಂಜೆ 6 ಗಂಟೆ ಹೊತ್ತಿಗೆ ಚಿರತೆ ದಾಳಿ ನಡೆದಿತ್ತು. ಇದೀಗ ಚಿರತೆ ಸೆರೆ ಸಿಕ್ಕ ಕಾರಣ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಚಾಮರಾಜನಗರದಲ್ಲಿ ಚಿರತೆ, ಹುಲಿ ಆತಂಕ
ಚಾಮರಾಜನಗರದ ಕ್ವಾರಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರ ಆತಂಕ ಹೆಚ್ಚಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗುಡ್ಡ ಬಳಿ ಚಿರತೆ ಪ್ರತ್ಯಕ್ಷವಾಗಿದೆ. ಎರಡು ವರ್ಷದ ಹಿಂದೆ ಮಡಹಳ್ಳಿ ಗುಡ್ಡ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದರು. ಹೀಗಾಗಿ ಗಣಿ ಕೆಲಸಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದೀಗ ಇದೇ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.
ಚಾಮರಾಜನಗರದ ನಂಜೇದೇವನಪುರ ಗ್ರಾಮದ ಸುತ್ತಲೂ 5 ಹುಲಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರ ನಿದ್ದೆಗೆಡಿಸಿದ. ಅರಣ್ಯಾಧಿಕಾರಿಗಳ ಡ್ರೋನ್‌ನಲ್ಲಿ ಹುಲಿ ಪತ್ತೆಯಾಗಿದೆ. ಇದೀಗ ಸಾಕಾನೆ ಬಳಿಸಿ ಹುಲಿ ಹಿಡಿಯಲು ಕೂಂಬಿಂಗ್ ಕಾರ್ಯ ನಡೆಯುತ್ತಿದೆ. ನಂಜೇದೇವನಪುರ,ಉಡಿಗಾಲ, ವೀರನಪುರ ಗ್ರಾಮದ ರೈತರು ಜಮೀನುಗಳಿಗೆ ಹೋಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಮೂರು ವರ್ಷಗಳ ಹಿಂದೆಯೇ ಹುಲಿ ಈ ಭಾಗದಲ್ಲಿ ಹುಲಿ ಸೇರಿಕೊಂಡಿದೆ ಎಂದು ರೈತರು ಹೇಳಿದ್ದಾರೆ. ಹಲವು ದನಗಳ ಮೇಲೆ ದಾಳಿ ಮಾಡಿದೆ. ಆದರೆ ಜನರಿಗೆ ಸಮಸ್ಯೆಯಾಗಿಲ್ಲ. ಆದರೆ ಹುಲಿ ಸಂತತಿ ಹೆಚ್ಚಾಗಿರುವ ಕಾರಣ ಜನರ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.


