ತಮಿಳು ವಾಹಿನಿಯೊಂದರಲ್ಲಿ ಪ್ರಸಾರವಾಗುವ ಕಮಲ್ ಹಾಸನ್ ನಿರೂಪಣೆ ಮಾಡುವ 'ಬಿಗ್ ಬಾಸ್' ಸೆಟ್'ನಲ್ಲಿ ದುರಂತವೊಂದು ನಡೆದಿದೆ. ಬಿಗ್ ಬಾಸ್ ಶೋ ಸೆಟ್'ನಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಮುಂಬೈ ಮೂಲದ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.

ಚೆನ್ನೈ(ಆ.04): ತಮಿಳು ವಾಹಿನಿಯೊಂದರಲ್ಲಿ ಪ್ರಸಾರವಾಗುವ ಕಮಲ್ ಹಾಸನ್ ನಿರೂಪಣೆ ಮಾಡುವ 'ಬಿಗ್ ಬಾಸ್' ಸೆಟ್'ನಲ್ಲಿ ದುರಂತವೊಂದು ನಡೆದಿದೆ. ಬಿಗ್ ಬಾಸ್ ಶೋ ಸೆಟ್'ನಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಮುಂಬೈ ಮೂಲದ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.

ಬಿಗ್ ಬಾಸ್ ಸೆಟ್'ನಲ್ಲಿ ಇಬ್ರಾಹಿಂ ಶೇಕ್ ಎಂಬಾತ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ. ತನ್ನ 15 ಜನರ ತಂಡದೊಂದಿಗೆ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ಈತ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಇದನ್ನು ಕಂಡ ಸಹೋದ್ಯೋಗಿಗಳು ಆತನನ್ನು ಆ ಕೂಡಲೇ ಅಲ್ಲೇ ಇದ್ದ ಮೆಡಿಕಲ್ ಸೆಂಟರ್'ಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆದರೂ ಪ್ರಜ್ಞೆ ಮರಳದ ಕಾರಣ ಹತ್ತಿರದ ಕಿಲಪೌ ಮೆಡಿಕಲ್ ಕಾಲೇಜಿಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆತ ಕೊನೆಯುಸಿರೆಳೆದಿದ್ದ ಎಂಬ ವಿಚಾರ ತಿಳಿದು ಬಂದಿದೆ.

ಈ ಕುರಿತಾಗಿ ಹೇಳಿಕೆ ನೀಡಿರುವ ಇಬ್ರಾಹಿಂ ಸಹೋದ್ಯೋಗಿಗಳು 'ಕುಸಿದು ಬೀಳುವುದಕ್ಕೂ ಮುನ್ನ ನಡುಗುತ್ತಿದ್ದ ಇಬ್ರಾಹಿಂ ತನಗೆ ಉಸಿರಾಡಲು ಕಷ್ಟವಾಗುತ್ತಿದೆ ಎಂದಿದ್ದ. ಹೀಗೆ ಹೇಳಿ ಮರುಕ್ಷಣವೇ ಆತ ಕುಸಿದು ಬಿದ್ದಿದ್ದಾನೆ' ಎಂದಿದ್ದಾರೆ.

ತಮಿಳು ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮವನ್ನು ಖ್ಯಾತ ನಟ ಕಮಲ್ ಹಾಸನ್ ನಡೆಸಿಕೊಡುತ್ತಿದ್ದು, ತಮಿಳುನಾಡಿನಲ್ಲಿ ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ರಿಯಾಲಿಟಿ ಶೋ ಎಂಬ ಖ್ಯಾತಿ ಗಳಿಸಿದೆ.