"ಬಳ್ಳಾರಿ ರಸ್ತೆಯಲ್ಲಿ ವಾಹನದಲ್ಲಿ ಸಂಚರಿಸುವವರು ವಾಹನ ದಟ್ಟಣೆ ನಡುವೆಯೇ ಕನಿಷ್ಠ 35-40 ನಿಮಿಷ ಕಳೆಯುತ್ತಿದ್ದು, ಮತ್ತೆ ಕೆಲವರು ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು 2 ಗಂಟೆ ಮುಂಚಿತವಾಗಿ ಕಚೇರಿ ತಲುಪುತ್ತಿರುವುದರಿಂದ ಪ್ರತಿ ತಿಂಗಳು 6.3 ಲಕ್ಷ ಮಾನವ ಗಂಟೆಗಳು ರಸ್ತೆಯಲ್ಲೇ ವ್ಯರ್ಥವಾಗುತ್ತಿವೆ ಎಂಬುದು ತಾಂತ್ರಿಕ ತಂಡ ನಡೆಸಿದ ಸರ್ವೆಯಿಂದ ಬೆಳಕಿಗೆ ಬಂದಿದೆ."

ಬೆಂಗಳೂರು: ಬಳ್ಳಾರಿ ರಸ್ತೆಯಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಮಾಡುವ ರಾಜ್ಯ ಸರ್ಕಾರದ ಯೋಜನೆ ವಿರೋಧಿಸಿ ನಾನಾ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಇದೀಗ ಯೋಜನೆ ಜಾರಿಗೆ ಒತ್ತಾಯಿಸಿ ನಾಗರಿಕ ಸಂಘವೊಂದು ಸಾಮೂಹಿಕ ಪ್ರದರ್ಶನ ನಡೆಸಲು ಮುಂದಾಗಿದೆ.
ಬಿಡಿಎ ಆರಂಭಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ನಿರ್ಮಾಣ ಯೋಜನೆ​ಯನ್ನು ಯಾವುದೇ ಕಾರಣಕ್ಕೂ ಹಿಂಪಡೆ​ಯ​ಬಾರದು ಒತ್ತಾಯಿಸಿರುವ ಸಹಕಾರ​ನಗರ ನಾಗರಿಕ ಕ್ಷೇಮಾಭಿವೃದ್ಧಿ ಸಂಘ, ಹೆಬ್ಬಾಳ ಬಳಿಯ ಎಸ್ಟೀಮ್‌ ಮಾಲ್‌ ಎದುರು ಅ.22ರಂದು ಬೆಳಗ್ಗೆ 11 ಗಂಟೆಗೆ ಶಾಂತಿಯುತ ಪ್ರದರ್ಶನ ನಡೆಸಲು ನಿರ್ಧರಿಸಿದೆ.
ಮಂಗಳವಾರ ಈ ಕುರಿತು ಸುದ್ದಿಗೋಷ್ಠಿ​ಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಎಂ.ದೇವರಾಜಪ್ಪ, ಸಂಚಾರ ದಟ್ಟಣೆ ತಗ್ಗಿಸಲು ಸರ್ಕಾರ ಉಕ್ಕಿನ ಸೇತುವೆ ನಿರ್ಮಾ​ಣಕ್ಕೆ ಮುಂದಾಗಿದ್ದು, ಉಕ್ಕಿನ ಸೇತುವೆ ನಿರ್ಮಾಣದಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ನೂರಾರು ಮರ​ಗಳು ನಾಶವಾಗುತ್ತವೆ ಎಂದು ಆರೋ​ಪಿ​ಸಿ​ರುವ ಕೆಲವರು ಯೋಜನೆಯನ್ನೇ ವಿರೋ​ಧಿ​ಸುತ್ತಿದ್ದಾರೆ. ಆದರೆ, ಸರ್ಕಾರ ಯಾವುದೇ ಕಾರಣಕ್ಕೂ ಯೋಜನೆ ಹಿಂಪಡೆ​ಯಬಾ​ರದು. ಯೋಜನೆ ಅಗತ್ಯ, ಅನಗತ್ಯದ ಕುರಿತು ಅದು ಅನುಷ್ಠಾನ​ವಾಗುವ ಸ್ಥಳದ ಸುತ್ತಮುತ್ತಲ ಪ್ರದೇಶದ ಜನರ ಅಭಿ​ಪ್ರಾಯ ಪಡೆಯುವುದು ಪ್ರಮುಖ​ವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಯೋಜನೆ ಹಿನ್ನೆಲೆಯಲ್ಲಿ ಮರಗಳನ್ನು ಕಡಿಯುವ ಕುರಿತು ಈಗಾಗಲೇ ಬಿಡಿಎ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಸೇತುವೆ ನಿರ್ಮಾಣದ ವೇಳೆ ಕಡಿಯುವ 800 ಮರಗಳಿಗೆ ಬದಲಿಗೆ ನಗರದ 45 ಭಾಗಗಳಲ್ಲಿ 60 ಸಾವಿರ ಗಿಡಗಳನ್ನು ನೆಡುವ ಕಾರ್ಯವನ್ನು ಬಿಡಿಎ ಈಗಾಗಲೇ ಆರಂಭಿ​ಸಿದೆ. ಈ ಹಿಂದೆಯೂ ಬಳ್ಳಾರಿ ರಸ್ತೆ ವಿಸ್ತರಣೆ ವೇಳೆ ಮರಗಳನ್ನು ಕಡಿದು, ಪಕ್ಕದಲ್ಲೇ ಗಿಡ ನೆಡಲಾಗಿತ್ತು. ಆ ಗಿಡಗಳು ಬೆಳೆದು ಇಂದು ದೊಡ್ಡ ಮರಗಳಾಗಿವೆ ಎಂದರು.
ಬಳ್ಳಾರಿ ರಸ್ತೆಯಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುವುದರಿಂದ ನಿತ್ಯ ಸಾಕಷ್ಟುಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್‌ ಉತ್ಪತ್ತಿಯಾಗುತ್ತಿದೆ. ಇದನ್ನು ಪರಿಶೀಲಸಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಈ ಭಾಗದಲ್ಲಿ 5 ಸಾವಿರ ಸಸಿ ನೆಟ್ಟು ಬೆಳೆಸಿದರೂ ಮಾಲಿನ್ಯ ನಿಯಂತ್ರಣಕ್ಕೆ ಬಂದಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಯೋಜನೆ ಹಿಂಪಡೆಯಬಾರದು ಎಂದು ಒತ್ತಾಯಿಸಿ ಶಾಂತಿಯುತ ಪ್ರದರ್ಶನ ನಡೆಸಲಾಗುವುದು ಎಂದು ತಿಳಿಸಿದರು. 
ಸಂಘದ ಪ್ರಧಾನ ಕಾರ್ಯದರ್ಶಿ ಎ.ಶಿವರಾಮಮೂರ್ತಿ ಮಾತನಾಡಿ, ವಸ್ತು ಸ್ಥಿತಿ ತಿಳಿಯಲು ಸಂಘದಿಂದ ತಜ್ಞರ ಸಹಯೋಗದಲ್ಲಿ ಸರ್ವೇ ನಡೆಸಲಾಗಿದ್ದು, ಅಚ್ಚರಿಯ ಅಂಶಗಳು ಬೆಳಕಿಗೆ ಬಂದಿವೆ. ಪ್ರತಿ ದಿನ ಎರಡೂವರೆ ಲಕ್ಷಕ್ಕೂ ಹೆಚ್ಚು ವಾಹನಗಳು ಹೆಬ್ಬಾಳ ಮೇಲ್ಸೇತುವೆ ಮೂಲಕ ಹಾದು ಹೋಗುವ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಬೆಳಗ್ಗೆ ಹಾಗೂ ಸಂಜೆ (ಪೀಕ್‌ ಹವ​ರ್‍ಸ್) ವೇಳೆ ಭಾರಿ ಸಂಖ್ಯೆಯಲ್ಲಿ ವಾಹನಗಳು ಸಂಚರಿಸಲಿದ್ದು, ಗಂಟೆಗೆ ಕೇವಲ 10-15 ಕಿ.ಮೀ. ವೇಗದಲ್ಲಿ ಸಂಚರಿಸುತ್ತವೆ. ಇದರಿಂದ ತಿಂಗಳಿಗೆ 10 ಕೋಟಿ ರೂಗೂ ಹೆಚ್ಚು ಮೌಲ್ಯದ ಲಕ್ಷಾಂತರ ಲೀಟರ್‌ ಇಂಧನ ದಹನವಾಗುತ್ತಿ​ರುವು​ದರಿಂದ ಈ ಮಾರ್ಗದಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ ಎಂದು ತಿಳಿಸಿದರು. 
ಬಳ್ಳಾರಿ ರಸ್ತೆಯಲ್ಲಿ ತೀವ್ರ ಸಂಚಾರ ದಟ್ಟಣೆ ಇರುವುದರಿಂದ ಮಾಲಿನ್ಯ ಹೆಚ್ಚಾಗಿದ್ದು, 5 ಸಾವಿರ ಮರಗಳಿಂದಲೂ ಈ ಮಾಲಿನ್ಯ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರೊಂದಿಗೆ ಬಳ್ಳಾರಿ ರಸ್ತೆಯಲ್ಲಿ ವಾಹನದಲ್ಲಿ ಸಂಚರಿಸುವವರು ವಾಹನ ದಟ್ಟಣೆ ನಡುವೆಯೇ ಕನಿಷ್ಠ 35-40 ನಿಮಿಷ ಕಳೆಯುತ್ತಿದ್ದು, ಮತ್ತೆ ಕೆಲವರು ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು 2 ಗಂಟೆ ಮುಂಚಿತವಾಗಿ ಕಚೇರಿ ತಲುಪುತ್ತಿರುವುದರಿಂದ ಪ್ರತಿ ತಿಂಗಳು 6.3 ಲಕ್ಷ ಮಾನವ ಗಂಟೆಗಳು ರಸ್ತೆಯಲ್ಲೇ ವ್ಯರ್ಥವಾಗುತ್ತಿವೆ ಎಂಬುದು ತಾಂತ್ರಿಕ ತಂಡ ನಡೆಸಿದ ಸರ್ವೆಯಿಂದ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.

(ಕನ್ನಡಪ್ರಭ ವಾರ್ತೆ)