ಹುಬ್ಬಳ್ಳಿ (ಮಾ. 22): ಎಲ್ಲವೂ ಸರಿಯಾಗಿದ್ದರೆ ಈ ಬಾಲಕ ಇಂದು (ಗುರುವಾರ) ಎಸ್ಸೆಸ್ಸೆಲ್ಸಿ ಕನ್ನಡ ಪರೀಕ್ಷೆ ಬರೆಯಬೇಕಿತ್ತು. ಆದರೆ ಧಾರವಾಡದ ಸಾವಿನ ಕಟ್ಟಡ ಈತನ ತಂದೆಯ ಜೀವವನ್ನು ಬಲಿ ಪಡೆದಿದ್ದಲ್ಲದೇ, ಈತನ ಭವಿಷ್ಯವನ್ನೂ
ಮಂಕಾಗಿಸಿದೆ. ಕನ್ನಡ ಪರೀಕ್ಷೆಗೆ ಹೋಗಲಾಗದೇ ಕಣ್ಣೀರ ಕೋಡಿ ಹರಿಸುತ್ತಿದ್ದಾನೆ.

ತಾಯಿಯನ್ನು ತಬ್ಬಿಕೊಂಡು ತಂದೆಯನ್ನು ನೆನೆದು ಗೋಳಿಡುತ್ತಿದ್ದಾನೆ. ಧಾರವಾಡ ಸಾವಿನ ವಾಣಿಜ್ಯ ಸಂಕೀರ್ಣ ಹತ್ತಾರು ಜನರ ಬದುಕನ್ನ ಕಸಿದಂತೆ, ಮೃತಪಟ್ಟ ಕುಟುಂಬಸ್ಥರ ಭವಿಷ್ಯದ ಜೊತೆಗೂ ಚೆಲ್ಲಾಟವಾಡಿದೆ. ಇಲ್ಲಿಯ ನೇಕಾರ ನಗರದ ಶಿವಶಕ್ತಿ ನಗರದ ನಿವಾಸಿ ಅಬ್ದುಲ್ ಖಾದರ್ ಜಿಲಾನಿ ರಾಯಚೂರ ನತದೃಷ್ಟ ಬಾಲಕ. ತಂದೆಯ ಅಕಾಲಿಕ ಮರಣದಿಂದ ಏನು ಮಾಡಬೇಕೆಂದು ತೋಚದೆ ಪರೀಕ್ಷೆ ಸಹ ಬರೆಯಲಾಗದೇ ಮನೆಯಲ್ಲೇ
ದುಃಖಿಸುತ್ತ ಕುಳಿತಿದ್ದಾನೆ.

‘ಇವತ್ತು (ಗುರುವಾರ) ಕನ್ನಡ ಪರೀಕ್ಷೆ ಇತ್ರಿ, ಕಣ್ಣೀರ್ ಇಳಿಯ ಹತ್ರ ಪರೀಕ್ಷೆ ಹ್ಯಾಂಗ್ ಬರೀಲ್ರಿ?’ ಎಂದು ಅಳುತ್ತಲೇ ಅಬ್ದುಲ್ ಅಸಹಾಯಕತೆ ವ್ಯಕ್ತಪಡಿಸಿದ. ಈತ ನೂರಾನಿ ಪೇಟ್‌ನಲ್ಲಿರುವ ಬ್ರಹ್ಮಾನಂದ ಪ್ರೌಢಶಾಲೆಯಲ್ಲಿ ಓದುತ್ತಿದ್ದಾನೆ. ಗುರುವಾರ ಸಿದ್ಧಾರೂಢ ಮಠದ ಬಳಿಯ ಹೈಸ್ಕೂಲ್‌ನಲ್ಲಿ ಪರೀಕ್ಷೆ ನಿಗದಿಯಾಗಿತ್ತು. ಆದರೆ, ದುರ್ಘಟನೆಯಲ್ಲಿ ತಂದೆ ಮಾಬುಸಾಬ್ ರಾಯಚೂರ ತೀರಿಕೊಂಡ ಪರಿಣಾಮ ಪರೀಕ್ಷೆಗೆ ಹೋಗಿಲ್ಲ.