2008ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌'ಗೆ 141 ಡಾಲರ್‌'ಗೆ ಏರಿಕೆಯಾಗಿತ್ತು. ಆಗ ಭಾರತದಲ್ಲಿ ಪೆಟ್ರೋಲ್ ಬೆಲೆ 50.56 ರು. ಇತ್ತು. ಆದರೆ ಈ ದಿನಗಳಲ್ಲಿ ಕಚ್ಚಾತೈಲದ ಬೆಲೆ ಅಂ.ರಾ. ಮಾರುಕಟ್ಟೆ ಯಲ್ಲಿ 41-42 ರು.ಗೆ ಇಳಿದಿದೆ. ಆದರೂ ನಮ್ಮ ದೇಶದಲ್ಲಿ ಬೆಲೆ ಮಾತ್ರ ನಿರಂತರವಾಗಿ ಏರಿಕೆಯಾಗುತ್ತಿದೆ. ಇದು ಪ್ರಧಾನಿ ಮೋದಿ ಮಾಡಿದ ವಿಸ್ಮಯವೇ ಸರಿ!
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಶೇ.50ರಷ್ಟು ಇಳಿಕೆಯಾಗಿದ್ದರೂ ದೇಶದಲ್ಲಿ ಮಾತ್ರ ಪೆಟ್ರೋಲ್ ಬೆಲೆ ದಿನನಿತ್ಯ ಏರಿಕೆಯಾಗುತ್ತಲೇ ಇದೆ. ಹಾಲಿ, ಪ್ರತಿ ಲೀಟರ್ ಪೆಟ್ರೋಲ್ ಬೆಲೆ ವಾಣಿಜ್ಯ ನಗರಿ ಮುಂಬೈಯಲ್ಲಿ 80 ರು., ಚೆನ್ನೈ ಮತ್ತು ಕೊಲ್ಕತ್ತಾದಲ್ಲಿ 73 ರು., ಬೆಂಗಳೂರಿನಲ್ಲಿ 71.50 ರು. (ಜುಲೈ 1ಕ್ಕೆ 64.24, ಆಗಸ್ಟ್ 1ಕ್ಕೆ 66.39 ರು., ಸೆಪ್ಟೆಂಬರ್ 1ಕ್ಕೆ 70.34 ರು., ಇದೀಗ 73 ರು. ಆಗಿದೆ) ಹಾಗೂ ದೆಹಲಿಯಲ್ಲಿ 70 ರು.ಗೆ ಏರಿದೆ. ಡೀಸೆಲ್ ದರ ಕೂಡ ಇದೇ ರೀತಿಯಲ್ಲಿ ಹೆಚ್ಚಳವಾಗಿದೆ. ತೈಲ ಬೆಲೆ ಹೆಚ್ಚಳವು ಶ್ರೀಸಾಮಾನ್ಯರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡಲಿದೆ. ಪ್ರಧಾನಿಯಾಗುವ ಮುನ್ನ ಮೋದಿ ದೇಶವಾಸಿಗಳಿಗೆ ಅಚ್ಛೇದಿನ್ ನೀಡುವ ಭರವಸೆ ನೀಡಿದ್ದರು. ಅವರ ಮಾತು ಇದೀಗ ತನ್ನ ಅರ್ಥ ಕಳೆದುಕೊಂಡಿದೆ.
2012ರಲ್ಲಿ ಪ್ರಪಂಚದ ಹಲವು ದೇಶಗಳು ಆರ್ಥಿಕ ಹೊಡೆತಕ್ಕೆ ಸಿಲುಕಿದ್ದವು. ಇದು ಭಾರತದ ಮೇಲೆ ಪ್ರಭಾವ ಬೀರಿತ್ತು. ಹೀಗಾಗಿ ಪೆಟ್ರೋಲ್ ಬೆಲೆಯನ್ನು ಅಂದಿನ ಕೇಂದ್ರ ಸರ್ಕಾರ ಅನಿವಾರ್ಯವಾಗಿ ಏರಿಸಿತು. ನರೇಂದ್ರ ಮೋದಿಯವರು ಗುಜರಾತ್''ನ ಸಿಎಂ ಆಗಿ ಇದನ್ನು ಖಂಡಿಸಿದ್ದರು. ಕೋಟ್ಯಂತರ ಜನರಿಗೆ ಪೆಟ್ರೋಲ್ ಬೆಲೆ ಏರಿಕೆಯು ಹೊರೆಯಾಗಲಿದೆ ಎಂದಿದ್ದರು. ಬಿಜೆಪಿಗರು ಹಾದಿ ಬೀದಿಗಳಲ್ಲಿ ಪ್ರತಿ‘ಟನೆ ನಡೆಸಿದ್ದರು. ಜಾಗತಿಕ ಮಾರುಕಟ್ಟೆಯಲ್ಲಿ ಆರ್ಥಿಕ ತಲ್ಲಣಗಳಾಗಿ ಬೆಲೆ ಏರಿಕೆಗೆ ಕಾರಣವಾಗಿತ್ತು. ಮನಮೋಹನ್ ಸಿಂಗ್ ಅವರಂತಹ ಆರ್ಥಿಕ ತಜ್ಞ ಈ ದೇಶದ ಪ್ರಧಾನಿಯಾಗಿ ನಮ್ಮ ದೇಶದ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸದೇ ಹೋಗಿದ್ದರೆ ಪರಿಸ್ಥಿತಿ ಇಂದಿಗೂ ಸುಧಾರಣೆಯಾಗುತ್ತಿರಲಿಲ್ಲ. ಈ ಎಲ್ಲವೂ ಬಿಜೆಪಿಗರಿಗೆ ತಿಳಿದಿದ್ದರೂ ರಾಜಕಾರಣ ಮಾಡಿ ಅಂದಿನ ಕೇಂದ್ರ ಸರ್ಕಾರದ ವಿರುದ್ಧ ಪೆಟ್ರೋಲ್ ಬೆಲೆ ಏರಿಕೆಯ ನೆಪ ಹಿಡಿದು ರಂಪಾಟಗಳನ್ನು ಮಾಡಿ, ಜನರನ್ನು ತಪ್ಪುದಾರಿಗೆ ಎಳೆದಿದ್ದರು.
ಕಾಲಚಕ್ರ ಉರುಳಿದೆ, ಮೋದಿಯವರೇ ಪ್ರಧಾನಿಯಾಗಿದ್ದಾರೆ. ಸಾರ್ವಕಾಲಿಕ ದಾಖಲೆ ಎಂಬಂತೆ ಪೆಟ್ರೋಲ್ ಬೆಲೆ ಗಗನಕ್ಕೆ ಏರಿದೆ. ಅವರು ನೀಡಿದ್ದ ಅಚ್ಛೇದಿನ್ ಭರವಸೆ ದುರ್ದಿನವಾಗಿದೆ. ತೈಲ ಬೆಲೆಯನ್ನು ದಿನನಿತ್ಯ ಪರಿಷ್ಕರಣೆ ಮಾಡಿದರೆ ಅದರಿಂದ ಗ್ರಾಹಕರಿಗೆ ಲಾಭವೆಂದಿದ್ದರೂ ಅದೂ ಕೂಡ ಕೈ ಕಚ್ಚಿದೆ.
ತೈಲ ಬೆಲೆಯಲ್ಲಿ ಇತ್ತೀಚೆಗೆ ಆಗಿರುವ ಏರಿಕೆಗೆ ಅಮೆರಿಕಕ್ಕೆ ಅಪ್ಪಳಿಸಿರುವ ಇರ್ಮಾ ಮತ್ತು ಹಾರ್ವೆ ಚಂಡಮಾರುತವೇ ಕಾರಣವೆಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಸುಳ್ಳು ಹೇಳುತ್ತಾರೆ. ವಿಶ್ವ ಮಾರುಕಟ್ಟೆಯ ವಲಯದಲ್ಲಿ ಬ್ಯಾರಲ್ ಪೆಟ್ರೋಲ್ ಬೆಲೆ ಕೇವಲ 41-42 ಡಾಲರ್ ಇದೆ. ಆದರೆ ಈ ಹಿಂದಿನ ಸರ್ಕಾರಕ್ಕೆ ಈ ಅನುಕೂಲವಿರಲಿಲ್ಲ.
27ನೇ ಜೂನ್ 2008ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಗರಿಷ್ಠ ಮಟ್ಟ ಮುಟ್ಟಿತ್ತು. ಬ್ಯಾರೆಲ್ ಬೆಲೆ ಡಾಲರ್ 141ಗೆ ಏರಿಕೆಯಾಗಿತ್ತು. ಆಗ ಭಾರತದಲ್ಲಿ ಪೆಟ್ರೋಲ್ ಬೆಲೆ 38.13 ರು. ಇತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ 50.56 ರು.ಗೆ ಪೆಟ್ರೋಲ್ ಮಾರಲಾಗುತ್ತಿತ್ತು. ಆದರೆ ಈ ದಿನಗಳಲ್ಲಿ ಕಚ್ಚಾತೈಲದ ಬೆಲೆ ಅಂ.ರಾ. ಮಾರುಕಟ್ಟೆಯಲ್ಲಿ 41-42 ರು. ಇದ್ದರೂ ನಮ್ಮ ದೇಶದಲ್ಲಿ ಬೆಲೆ ಮಾತ್ರ ನಿರಂತರವಾಗಿ ಏರಿಕೆಯಾಗುತ್ತಿರುವುದು ವಿಸ್ಮಯವೇ ಸರಿ! ಅಮೆರಿಕ, ರಷ್ಯಾಗಳಂತಹ ಮುಂದುವರೆದ ರಾಷ್ಟ್ರಗಳಿಗೆ ಮಾತ್ರವಲ್ಲದೆ, ನೆರೆಯ ಪಾಕಿಸ್ತಾನಕ್ಕೆ ಹೋಲಿಸಿದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿದೆ ಎಂದು ಸಾಬೀತಾಗಿದೆ.
ನಿತ್ಯ ಪರಿಷ್ಕರಣೆಯ ಲಾಭವೇನು?
ಈ ಹಿಂದೆ ತಿಂಗಳಿಗೆ ಎರಡು ಬಾರಿ ಪೆಟ್ರೋಲ್ ಧಾರಣೆ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಇಳಿಕೆಯಾದಲ್ಲಿ ಅದರ ಲಾಭ ಗ್ರಾಹಕರಿಗೆ ಲಭ್ಯವಾಗಲು ತಡವಾಗಲಿದೆ ಎಂಬ ಕಾರಣವನ್ನು ಮುಂದುಮಾಡಿ ಕೇಂದ್ರ ಸರ್ಕಾರ ತೈಲಗಳ ಬೆಲೆಯನ್ನು ದಿನ ನಿತ್ಯ ಪರಿಷ್ಕರಣೆ ಮಾಡತೊಡಗಿತು. ಅದರಂತೆ ಇದೇ ವರ್ಷ ಜೂನ್ ತಿಂಗಳಿಂದ ಜಾರಿಗೆ ಬರುವಂತೆ ನಿತ್ಯ ಪೆಟ್ರೋಲ್ ಬೆಲೆಯಲ್ಲಿ ಏರಿಕೆ - ಇಳಿಕೆಯಾಗುತ್ತಿದೆ. ದುರಂತವೆಂದರೆ ಇಳಿಕೆಗಿಂತಲೂ ಅಧಿಕವಾಗಿರುವುದೇ ಹೆಚ್ಚು. ಹೀಗಾಗಿ ಪೆಟ್ರೋಲ್ ಬೆಲೆಯ ಪರಿಷ್ಕರಣೆ ಎಂಬುದು ಗ್ರಾಹಕರಿಗೆ ಬರೆಯಾಗಿದೆ. ಮೋದಿ ಪ್ರತಿಪಾದಿಸುತ್ತಿದ್ದ ಅಚ್ಛೇದಿನ್ ಎಂದರೆ ಇದೇನಾ?!
ಮಾರುಕಟ್ಟೆ ಆಧಾರದಲ್ಲಿ ಪ್ರತಿ ದಿನವೂ ತೈಲ ಬೆಲೆ ಪರಿಷ್ಕರಣೆ ಅತ್ಯಂತ ಪಾರದರ್ಶಕ ಮತ್ತುಗ್ರಾಹಕರ ಪರ ಎಂದು ‘ರ್ಮೇಂದ್ರ ಪ್ರ‘ಾನ್ ಬಣ್ಣಿಸಿದ್ದಾರೆ. ಅಲ್ಲದೆ ಈ ಏರಿಕೆ ಏನಿದ್ದರೂ ಕ್ಷಣಿಕ, ಕೆಲವೇ ದಿನಗಳಲ್ಲಿ ಎಲ್ಲವೂ ಸರಿ ಹೋದೀತು ಎಂದು ಭರವಸೆ ನೀಡುತ್ತಾರೆ. ಹೀಗೆ ಹೇಳುತ್ತಿರುವುದು ಇದೇ ಮೊದಲಲ್ಲ. ತಿಂಗಳ ಹಿಂದೆ ಕೂಡ ಇದೇ ಡೈಲಾಗ್ ಮಾಧ್ಯಮಗಳಲ್ಲಿ ಮೂಡಿ ಬಂದಿದೆ. ಆದರೂ ಪೆಟ್ರೋಲ್ ಬೆಲೆ ಮಾತ್ರ ದಿನ ನಿತ್ಯ ಏರುತ್ತಲೇ ಇದೆ. ದೇಶದ ಎಲ್ಲೆಡೆ ತೈಲ ಬೆಲೆ ಏಕರೂಪದಲ್ಲಿ ಇರಬೇಕಿದ್ದರೆ ಅದನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದೇ ಏಕೈಕ ಮಾರ್ಗ ಎಂಬುದು ಅವರ ಅಭಿಪ್ರಾಯವಾಗಿದೆ. ಆದರೆ ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲನ್ನು ತರಲು ಸಾಧ್ಯವೇ ಎಂಬುದೇ ಈಗಿರುವ ಬಿಲಿಯನ್ ಡಾಲರ್ ಪ್ರಶ್ನೆ.
ಪೆಟ್ರೋಲನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ ನಿಯಮದಂತೆ ಗರಿಷ್ಠ 28% ತೆರಿಗೆ ವಿಧಿಸಬೇಕು. ಒಂದು ಲೆಕ್ಕಾಚಾರದ ಪ್ರಕಾರ ಈಗ ಗ್ರಾಹಕರು ಪಾವತಿಸುತ್ತಿರುವ ತೆರಿಗೆ ಪ್ರಮಾಣ 51.6% ಇದೆ. ಕೇಂದ್ರದ ಸುಂಕ ತೆರಿಗೆ 21.48 ರು. ಮತ್ತು ಮತ್ತು ರಾಜ್ಯಗಳ ವ್ಯಾಟ್ ತೆರಿಗೆ 14.89 ರು. ಸೇರಿ 36.67 ರು. ತೆರಿಗೆ ವಿಧಿಸಲಾಗುತ್ತದೆ. ತೆರಿಗೆಯನ್ನು 28ಕ್ಕೆ ಇಳಿಸಿದರೆ ಪೆಟ್ರೋಲ್ನಿಂದ ಕೇಂದ್ರಕ್ಕೆ ಬರುವ ಆದಾಯಕ್ಕೆ ಕುತ್ತು ಬೀಳಲಿದೆ! ಬಚಾವ್ ಆಗಲು ಕೇಂದ್ರ ಸರ್ಕಾರ ಹೂಡಿದ ತಂತ್ರವೆಂದರೆ ಪೆಟ್ರೋಲನ್ನು ಜಿಎಸ್ಟಿಯಿಂದ ಹೊರಗಿಡುವುದು.
ಅಲ್ಲಿ ಬೆಲೆ ಇಳಿಕೆ, ಇಲ್ಲಿ ಏರಿಕೆ
2014ರಿಂದ ಈವರೆಗೆ ಲೀಟರ್ ಪೆಟ್ರೋಲ್ ಮೇಲೆ 11.77 ರು. ಮತ್ತು ಡೀಸೆಲ್ ಮೇಲೆ 13.47 ರು. ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಹೇರಿದ್ದು, ಇದರಿಂದ ತೈಲ ಕಂಪೆನಿಗಳಿಗೆ ಭರಪೂರ ಆದಾಯ ಬರುತ್ತಿದೆ. ಈ ಸುಂಕದ ಮೂಲಕವೇ ಸುಮಾರು 99,000 ಕೋಟಿ ರು. ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆಯಂತೆ.
ಭಾರತಕ್ಕೆ ಪೂರೈಕೆಯಾಗುವ ಸ್ವೀಟ್ ಬ್ರೆಂಟ್ ಎಂಬ ಅಂತಾ ರಾಷ್ಟ್ರೀಯ ದರ್ಜೆಯ ಕಚ್ಚಾತೈಲದ ಬೆಲೆ 2014ರಲ್ಲಿ ಬ್ಯಾರೆಲ್ಗೆ ಅಂದಾಜು 93.11 ಡಾಲರ್ಗಳಿತ್ತು. ಈಗ ಅದು ಅಂದಾಜು ಶೇ.50ರಷ್ಟು ಕಡಿಮೆಯಾಗಿದೆ. ಅಂದರೆ ಬ್ಯಾರೆಲ್ಗೆ ೪೮.೩೧ ಡಾಲರ್ (ಸೆ.೧೩ರ ದರದಂತೆ). ಆದರೆ ಕೇಂದ್ರ ಸರಕಾರ ತೈಲ ಕಂಪೆನಿಗಳಿಗೆ ಲಾಭ ಮಾಡಿಕೊಡಬೇಕೆಂಬ ಉದ್ದೇಶದಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ರಮವಾಗಿ ಶೇ.126 ಮತ್ತು ಶೇ.374 ಅಬಕಾರಿ ಸುಂಕ ಹೇರಿದೆ ಎಂಬ ಲೆಕ್ಕಾಚಾರಗಳ ವರದಿಗಳೂ ಪ್ರಕಟಗೊಂಡಿವೆ.
ತೈಲಗಳ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಸಿದ್ದರೂ ನಮ್ಮ ರಾಜ್ಯ ಸರ್ಕಾರ ಮಾತ್ರ ಸಾಮಾನ್ಯರಿಗೆ ಹೊರೆಯಾಗದಂತೆ ಮಾಡಿ ದೇಶಕ್ಕೆ ಮಾದರಿಯಾಗಿದೆ. ಜಿಎಸ್ಟಿ ಜಾರಿಯ ಅನ್ವಯ ರಾಜ್ಯ ಸರ್ಕಾರ ವ್ಯಾಟ್ ಏರಿಸಲಿಲ್ಲ ಮತ್ತು ಪ್ರವೇಶ ತೆರಿಗೆಯನ್ನು ರದ್ದು ಮಾಡಿತು. ಹೀಗಾಗಿ ಜುಲೈ ಆರಂಭದಲ್ಲಿ ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 64.24 ರು. ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 54.23 ರು. ಇತ್ತು. ದಕ್ಷಿಣ ಭಾರತದಲ್ಲೇ ಡೀಸೆಲ್ ಬೆಲೆ ಕರ್ನಾಟಕದಲ್ಲಿ ಅಗ್ಗ ಎಂದು ನಿರೂಪಿತವಾಗಿತ್ತು. ಬಿಜೆಪಿ ಆಳ್ವಿಕೆಯ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯಾಟ್, ಪ್ರವೇಶ ತೆರಿಗೆ ರದ್ದಾಗಲಿಲ್ಲವೆನ್ನುವುದು ಜಾಹೀರಾದ ಸಂಗತಿ.
ತೈಲ ಕಂಪೆನಿಗಳಿಗೆ ಲಾಭ ಮಾಡಿಕೊಟ್ಟು ಆ ಮೂಲಕ ಸರ್ಕಾರದ ವರಮಾನವನ್ನು ಹೆಚ್ಚಿಸಿಕೊಳ್ಳುವ ಇರಾದೆಯನ್ನು ಮೋದಿ ಸರ್ಕಾರ ಬಿಡಬೇಕಿದೆ. ಲಾಭ ನಷ್ಟಗಳ ಲೆಕ್ಕಾಚಾರ ಹಾಕದೆ, ಸಾರ್ವಜನಿಕ ಕಾಳಜಿಯನ್ನೂ ಗಮನಿಸಬೇಕಾದ ಜರೂರಿದೆ.
ಗಗನ ದಾಟಿರುವ ಪೆಟ್ರೋಲ್ ಬೆಲೆಯನ್ನು ಪಾತಾಳಕ್ಕೆ ಇಳಿಸಿದರೂ ಸಂತೋಷವೇ. ಅದು ಸಾಧ್ಯವಾಗದಿದ್ದಲ್ಲಿ, ಕನಿಷ್ಠ ಧರೆಗೆ ಇಳಿಸಿ ಸಾಮಾನ್ಯರನ್ನು ಕಾಪಾಡಲಿ ಎಂಬುದೇ ಎಲ್ಲರ ಆಶಯವಾಗಿದೆ. ಈ ನಿಟ್ಟಿನಲ್ಲಿ ಮೋದಿ ಸೂಕ್ತವಾಗಿ ಸ್ಪಂದಿಸುವರೇ ಎಂಬುದನ್ನು ಕಾದು ನೋಡಬೇಕಿದೆ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
