ನೋಟ್ ಬ್ಯಾನ್ ಬಳಿಕ ಮರಳಿದ ಹಣವೆಷ್ಟು : ಆರ್ ಬಿಐ ನಿಂದ ಮಾಹಿತಿ

ನೋಟ್ ಬ್ಯಾನ್ ಬಗ್ಗೆ ಆರ್ ಬಿಐ ಇದೀಗ ಮಾಹಿತಿಯನ್ನು ನೀಡಿದ್ದು ದೇಶದಲ್ಲಿ ಅಪನಗದೀಕರಣಕ್ಕೆ ಒಳಗಾದ ಶೇ.99ರಷ್ಟು ಹಣ ಮರಳಿ ಬ್ಯಾಂಕ್ ವ್ಯವಸ್ಥೆಗೆ ಬಂದಿದೆ ಎಂದು ಹೇಳಿದೆ.

99 Percent Banned Cash Back Says RBI

ಮುಂಬೈ : 2016ರ ನ.8ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಾತ್ರೋರಾತ್ರಿ ಜಾರಿಗೆ ತಂದಿದ್ದ ಅಪನಗದೀಕರಣದ ವೇಳೆ ಚಲಾವಣೆ ಕಳೆದುಕೊಂಡಿದ್ದ ನೋಟುಗಳ ಪೈಕಿ ಶೇ.99.3ರಷ್ಟು ಬ್ಯಾಂಕಿಂಗ್‌ ವ್ಯವಸ್ಥೆಗೆ ಮರಳಿವೆ. 10,720 ಕೋಟಿ ರು. ಮಾತ್ರ ಈವರೆಗೂ ವಾಪಸ್‌ ಬಂದಿಲ್ಲ ಎಂದು ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಇದೇ ಮೊದಲ ಬಾರಿ ಅಧಿಕೃತ ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌, ಪ್ರಧಾನಿ ಮೋದಿ ದೇಶದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.

500 ಹಾಗೂ 1000 ರು. ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ 2016ರ ನ.8ರಂದು ಏಕಾಏಕಿ ರದ್ದುಗೊಳಿಸಿತ್ತು. ಈ ನಿರ್ಧಾರ ಜಾರಿಗೆ ಬಂದಾಗ ದೇಶದಲ್ಲಿ ಆ ಮುಖಬೆಲೆಯ 15.41 ಲಕ್ಷ ಕೋಟಿ ರು. ನೋಟುಗಳು ಚಲಾವಣೆಯಲ್ಲಿದ್ದವು. ನೋಟು ಬದಲಾವಣೆ ಮಾಡಿಕೊಳ್ಳಲು ಸರ್ಕಾರ ನೀಡಿದ್ದ ಅವಧಿಯಲ್ಲಿ 15.31 ಲಕ್ಷ ಕೋಟಿ ರು. ನೋಟುಗಳು ಬ್ಯಾಂಕಿಂಗ್‌ ವ್ಯವಸ್ಥೆಗೆ ಮರಳಿವೆ ಎಂದು ಭಾರತೀಯ ರಿಸವ್‌ರ್‍ ಬ್ಯಾಂಕ್‌ ಅಧಿಕೃತ ಮಾಹಿತಿ ನೀಡಿದೆ.

ಅಪನಗದೀಕರಣದ ಬಳಿಕ ಬ್ಯಾಂಕಿಂಗ್‌ ವ್ಯವಸ್ಥೆಗೆ ಮರಳಿದ ನೋಟುಗಳು ಎಷ್ಟುಎಂಬ ಪ್ರಶ್ನೆಗೆ ಎಣಿಕೆ ನಡೆಯುತ್ತಿದೆ ಎಂದು ಉತ್ತರ ನೀಡುತ್ತಾ ಬಂದಿದ್ದ ಆರ್‌ಬಿಐ, 2017-18ನೇ ಸಾಲಿನ ವರದಿಯಲ್ಲಿ ಆ ಪ್ರಕ್ರಿಯೆ ಪೂರ್ಣಗೊಂಡಿರುವುದನ್ನು ಖಚಿತಪಡಿಸಿದೆ. ಜತೆಗೆ 10,720 ಕೋಟಿ ರು. ಮೌಲ್ಯದ ನೋಟುಗಳು ಮರಳಿಲ್ಲ ಎಂದು ಸ್ಪಷ್ಟಪಡಿಸಿದೆ. 2016-17ನೇ ಸಾಲಿನಲ್ಲಿ 500, 2000 ರು. ಹಾಗೂ ಇತರೆ ಮುಖಬೆಲೆಯ ಹೊಸ ನೋಟುಗಳ ಮುದ್ರಣಕ್ಕೆ ಆರ್‌ಬಿಐ 7965 ಕೋಟಿ, ಕಳೆದ ವರ್ಷ 3421 ಕೋಟಿ ರು. ವೆಚ್ಚ ಮಾಡಿದೆ.

ಮೋದಿ ಕ್ಷಮೆಗೆ ಕಾಂಗ್ರೆಸ್‌ ಆಗ್ರಹ:  ಆರ್‌ಬಿಐ ವರದಿ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷ ಪ್ರಧಾನಿ ಮೋದಿ ಅವರ ವಿರುದ್ಧ ಹರಿಹಾಯ್ದಿದೆ. ಅಪನಗದೀಕರಣದಿಂದಾಗಿ ದೇಶದ ಜಿಡಿಪಿ ಶೇ.1.5ರಷ್ಟುಬೆಳವಣಿಗೆಯನ್ನು ಕಳೆದುಕೊಂಡಿತ್ತು. ಅದರ ಮೌಲ್ಯವೇ ವರ್ಷಕ್ಕೆ 2.25 ಲಕ್ಷ ಕೋಟಿ ರುಪಾಯಿ. ನೋಟು ಬದಲಾವಣೆ ವೇಳೆ ಸುಮಾರು 100 ಮಂದಿ ಪ್ರಾಣ ಕಳೆದುಕೊಂಡಿದ್ದರು. 

15 ಕೋಟಿ ದಿನಗೂಲಿ ನೌಕರರು ಹಲವಾರು ವಾರಗಳ ಕಾಲ ಉದ್ಯೋಗವಿಲ್ಲದೆ ಕಂಗೆಟ್ಟಿದ್ದರು. ಸಹಸ್ರಾರು ಸಣ್ಣ, ಮಧ್ಯಮ ಉದ್ದಿಮೆಗಳು ಬಾಗಿಲು ಮುಚ್ಚಿದ್ದರಿಂದ ಲಕ್ಷಾಂತರ ಉದ್ಯೋಗಗಳು ನಷ್ಟವಾಗಿದ್ದವು. ಮೋದಿ ಸರ್ಕಾರದ ನಿರ್ಧಾರಕ್ಕೆ ದೇಶ ಬೆಲೆ ತೆತ್ತಿದೆ. ಅಪನಗದೀಕರಣ ದಿಂದಾಗಿ 3 ಲಕ್ಷ ಕೋಟಿ ರು. ಬ್ಯಾಂಕಿಂಗ್‌ ವ್ಯವಸ್ಥೆಗೇ ಮರಳುವುದೇ ಇಲ್ಲ, ಅದರಿಂದ ಸರ್ಕಾರಕ್ಕೆ ಲಾಭವಾಗಲಿದೆ ಎಂದು ಯಾರು ಹೇಳಿದ್ದರು ಎಂಬುದನ್ನು ನೆನಪಿಸಿಕೊಳ್ಳಿ ಎಂದು ಹಿರಿಯ ನಾಯಕ ಪಿ. ಚಿದಂಬರಂ ಅವರು ಟ್ವೀಟರ್‌ನಲ್ಲಿ ಚುಚ್ಚು ಮಾತುಗಳನ್ನು ಆಡಿದ್ದಾರೆ.

‘3 ಲಕ್ಷ ಕೋಟಿ ರು. ವಾಪಸ್‌ ಬರುವುದಿಲ್ಲ ಎಂಬ ಸುಳ್ಳನ್ನು ಹೇಳಿದ್ದ ಮೋದಿ ಅವರು ಅದಕ್ಕೆ ಕ್ಷಮೆ ಕೇಳುತ್ತಾರೆಯೇ? ಅಪನಗದೀಕರಣ ಎಂಬುದು ಮೋದಿ ನಿರ್ಮಿತ ವಿಪತ್ತು ಎಂಬುದನ್ನು ಆರ್‌ಬಿಐ ವರದಿಯೇ ಹೇಳಿದೆ’ ಎಂದು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಚಾಟಿ ಬೀಸಿದ್ದಾರೆ.

Latest Videos
Follow Us:
Download App:
  • android
  • ios